ಹೆಸರು ಬಿತ್ತನೆ ತಡವಾದರೆ ಇಳುವರಿ ಕುಂಠಿತ

| Published : May 22 2024, 12:50 AM IST

ಸಾರಾಂಶ

ಹೆಸರು ಬಿತ್ತುವ ಮೊದಲು ಮತ್ತು ಅನಂತರ ಗಮನಿಸಬೇಕಾದ ಅಂಶಗಳ ಬಗ್ಗೆ ರೈತರಿಗೆ ಕೃಷಿ ತಜ್ಞರು ಅಗತ್ಯ ಸಲಹೆಗಳನ್ನು ನೀಡಿದ್ದು, ಗುಣಮಟ್ಟದ ಬೆಳೆ ಹಾಗೂ ಇಳುವರಿ ಪಡೆಯಲು ಇಲಾಖೆ ಮಾರ್ಗದರ್ಶನ ಪಾಲಿಸುವಂತೆ ತಿಳಿಸಲಾಗಿದೆ.

- ನಂಜುರೋಗ ಬಾಧಿತ ಸಸ್ಯಗಳ ಕಿತ್ತು ನಾಶಪಡಿಸಬೇಕು । ರೈತರಿಗೆ ಕೃಷಿ ತಜ್ಞರಿಂದ ಅಗತ್ಯ ಸಲಹೆ

- - - - ರಸಹೀರುವ ಕೀಟಬಾಧೆ, ನಂಜುರೋಗ ಬಾಧೆ ನಿವಾರಣೆಗೆ ಬಿತ್ತನೆ ವೇಳೆ ಕೊತ್ತಂಬರಿ ಬೀಜಗಳ ಬೇಳೆ ಬೆರೆಸಿಕೊಳ್ಳಬೇಕು

- 12-14 ಅಂಗುಲ ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 4-6 ಅಂಗುಲ ಅಂತರ ಇರುವಂತೆ ಟ್ರ‍್ಯಾಕ್ಟರ್ ಚಾಲಿತ ಕೂರಿಗೆಯಿಂದ ಬಿತ್ತನೆ ಮಾಡಬೇಕು

- ಕಾಲಕಾಲಕ್ಕೆ ಪರಿಣಿತರ/ ತಜ್ಞರನ್ನು ಸಂಪರ್ಕಿಸಿ ತಪ್ಪದೇ ಹೆಚ್ಚಿನ ಮಾಹಿತಿ, ಸಲಹೆ ಪಡೆಯಬೇಕು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹೆಸರು ಬಿತ್ತುವ ಮೊದಲು ಮತ್ತು ಅನಂತರ ಗಮನಿಸಬೇಕಾದ ಅಂಶಗಳ ಬಗ್ಗೆ ರೈತರಿಗೆ ಕೃಷಿ ತಜ್ಞರು ಅಗತ್ಯ ಸಲಹೆಗಳನ್ನು ನೀಡಿದ್ದು, ಗುಣಮಟ್ಟದ ಬೆಳೆ ಹಾಗೂ ಇಳುವರಿ ಪಡೆಯಲು ಇಲಾಖೆ ಮಾರ್ಗದರ್ಶನ ಪಾಲಿಸುವಂತೆ ತಿಳಿಸಲಾಗಿದೆ.

ಹದ ಮಳೆಯಾಗಿರುವಲ್ಲಿ ಹೆಸರು ಬೆಳೆಯುವ ವಾಡಿಕೆ ಪ್ರದೇಶಗಳಲ್ಲಿ, ಈಗ ಹೆಸರು ಬಿತ್ತುವುದು ಸೂಕ್ತ. ಕ್ಲೋರ್ ಪೈರಿಫಾಸ್ 3 ಮಿಲೀ, ಕಾರ್ಬೆಂಡೆಜಿಂ 3 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಉಪಚರಿಸಿ ಬಿತ್ತಬೇಕು. ಬಿತ್ತನೆಯನ್ನು 12-14 ಅಂಗುಲ ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 4-6 ಅಂಗುಲ ಅಂತರ ಇರುವಂತೆ ಟ್ರ‍್ಯಾಕ್ಟರ್ ಚಾಲಿತ ಕೂರಿಗೆಯಿಂದ ಮಾಡಬೇಕು. ಬಿತ್ತುವಾಗ ಕೊತ್ತಂಬರಿ ಬೀಜಗಳ ಬೇಳೆಗಳನ್ನು ಬೆರೆಸಿಕೊಳ್ಳುವುದು ಅಗತ್ಯ. ಇದರಿಂದ ರಸಹೀರುವ ಕೀಟಬಾಧೆ, ತನ್ಮೂಲಕ ನಂಜುರೋಗ ಬಾಧೆ ನಿರ್ವಹಣೆಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.

ಹಿಂದಿನ ವರ್ಷ ಪಾಕೆಟ್‌ ಬಿತ್ತನೆಬೀಜ ಬಳಸಿದ್ದರೆ, ಅದೇ ಬೆಳೆಯಿಂದ ಸುರಕ್ಷಿತವಾಗಿ ಸಂಗ್ರಹಿಸಿದ ಉತ್ತಮ ಮೊಳಕೆ ಪ್ರಮಾಣ ಹೊಂದಿದ ಬೀಜ (ಎಕರೆಗೆ 4-6 ಕೆಜಿ) ಬಳಸುವುದು ಸೂಕ್ತ. ಖಾಸಗಿ ಹೈಬ್ರಿಡ್ ಬೀಜಗಳಾದರೆ, ಅಗತ್ಯ ಮಾಹಿತಿಯನ್ನು ಇಟ್ಟುಕೊಂಡು ಹೊಸದಾಗಿ ಬೀಜಗಳನ್ನು ಬಳಸಬೇಕು ಎಂದಿದ್ದಾರೆ.

ಸುತ್ತಲೂ 4-6 ಸಾಲು ಗೋವಿನಜೋಳ/ ಹೈಬ್ರಿಡ್ ಜೋಳ/ ಮೇವಿನ ಜೋಳ ಬೆಳೆಯುವುದು ಸೂಕ್ತ. ಹೊಲದಲ್ಲಿ, ಬದುಗಳಲ್ಲಿ ಪಾರ್ಥೇನಿಯಂ ಅಥವಾ ಇತರೆ ಕಳೆ ಕಸ ಇರಬಾರದು. ಬಿತ್ತುವಾಗ ಪ್ರತಿ ಬೀಜದ ಸಾಲಿನಲ್ಲಿ ಟ್ರೈಕೋಡರ್ಮಾ ಬೆರೆಸಿದ ಕೊಟ್ಟಿಗೆ ಗೊಬ್ಬರ ಕೊಡುವುದು ಸೂಕ್ತ. ಉತ್ತಮ ಹಸಿ ಮಳೆಯಾಗಿದ್ದಲ್ಲಿ ಮತ್ತು ನೀರಿನ ಅನುಕೂಲ ಇದ್ದಲ್ಲಿ ಪ್ರತಿ ಎಕರೆಗೆ ಗರಿಷ್ಠ 20 ಕೆಜಿ ಡಿಎಪಿ ಕೊಡಬಹುದು. ಬೆಳೆಯು 20-25 ದಿನಗಳಾದಾಗ ಇದೇ ಗೊಬ್ಬರವನ್ನು, ಮಳೆಯ ಪ್ರಮಾಣ ನೋಡಿಕೊಂಡು ಕೊಡಬಹುದು.

ಬೆಳೆ 25 ದಿನಗಳ ಹಂತದಲ್ಲಿ ಇರುವಾಗ, 2-3 ಗ್ರಾಂ 13:0:45, 2-3 ಗ್ರಾಂ 19:19:19, 1 ಗ್ರಾಂ ಲಿಬರಲ್ ಟಿಎಂಎಕ್ಸ್ 2 (ಅಥವಾ ತತ್ಸಮಾನವಾದ ಮತ್ತು ಅದೇ ಪ್ರಮಾಣದ ಲಘು ಪೋಷಕಾಂಶಗಳ ಮಿಶ್ರಣ) ಪ್ರತಿ ಲೀ. ನೀರಿನಲ್ಲಿ ಬೆರೆಸಿ, ಸಿಂಪಡಿಸಬೇಕು. ಈ ಸಿಂಪಡಣೆಯನ್ನು ಹೂವು ಬರುವ ವರೆಗೆ ಎರಡು ವಾರಗಳ ಅಂತರದಲ್ಲಿ ಮಾಡಬಹುದು. ರಸಗೊಬ್ಬರಗಳನ್ನು ಮಣ್ಣಿಗೆ ಕೊಡುವಾಗ ಅಥವಾ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರಲೇಬೇಕು. ರಸ ಹೀರುವ ಕೀಟಗಳ ಬಾಧೆ ಇದ್ದಲ್ಲಿ 3 ಮಿಲೀ ಅಜಾಡಿರಕ್ಟಿನ್ (1500 ಪಿಪಿಎಂ) ಬೆರೆಸಿ ಸಿಂಪಡಿಸಬಹುದು. ಬಿತ್ತನೆ ತಡವಾದಂತೆ ಇಳುವರಿ ಕಡಿಮೆಯಾಗುವುದು. ನಂಜುರೋಗ ಬಾಧಿತ ಸಸ್ಯಗಳನ್ನು ತಕ್ಷಣ ಕಿತ್ತು ನಾಶಪಡಿಸಬೇಕು ಎಂದು ತಿಳಿಸಿದ್ದಾರೆ.

ಹೆಸರು ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪರಿಣಿತರ/ ತಜ್ಞರ ಸಲಹೆಯನ್ನು ಕಾಲಕಾಲಕ್ಕೆ ತಪ್ಪದೇ ಪಡೆಯಬೇಕು ಎಂದು ಸಹ ರೈತರಿಗೆ ಸಲಹೆ ನೀಡಿದ್ದಾರೆ.

- - - (-ಸಾಂದರ್ಭಿಕ ಚಿತ್ರ)