ಸಾರಾಂಶ
ನಿಮ್ಮ ಮನೆಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡುತ್ತಾರೆ. ಅವರ ಬಳಿ ನಿಮ್ಮ ಸಮಸ್ಯೆಗಳಿದ್ದಲ್ಲಿ ಹೇಳಿ ಪರಿಹಾರ ಕಂಡುಕೊಳ್ಳಿ ಜೊತೆಗೆ ಪೋಲಿಸರಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಮಾದರಿ ಗ್ರಾಮ ಮಾಡಬಹುದು. ಒಂದು ಠಾಣೆಗೆ ಒಂದು ಗ್ರಾಮವನ್ನು ಆಯ್ಕೆ ಮಾಡಲಾಗುವುದು, ಈ ಗ್ರಾಮದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಪೊಲೀಸರಿಗೆ ತಿಳಿಸಿ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ ಹೊಸೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಚಿಕ್ಕಬಳ್ಳಾಪುರ ಪೊಲೀಸ್ ಉಪವಿಭಾಗ ಗೌರಿಬಿದನೂರು ವೃತ್ತ ಗೌರಿಬಿದನೂರು ಗ್ರಾಮಾಂತರ ಪೋಲಿಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಪೊಲೀಸರ ಮೇಲೆ ಸಾರ್ವಜನಿಕರಿಗೆ ವಿಶ್ವಾಸ ಹಾಗೂ ನಂಬಿಕೆ ಇರಬೇಕೆಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ, ಸರ್ಕಾರವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ ಎಂದರು.ಸಮಸ್ಯೆಗಳಿದ್ದರೆ ತಿಳಿಸಿ
ನಿಮ್ಮ ಮನೆಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡುತ್ತಾರೆ. ಅವರ ಬಳಿ ನಿಮ್ಮ ಸಮಸ್ಯೆಗಳಿದ್ದಲ್ಲಿ ಹೇಳಿ ಪರಿಹಾರ ಕಂಡುಕೊಳ್ಳಿ ಜೊತೆಗೆ ಪೋಲಿಸರಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಮಾದರಿ ಗ್ರಾಮ ಮಾಡಬಹುದು. ಒಂದು ಠಾಣೆಗೆ ಒಂದು ಗ್ರಾಮವನ್ನು ಆಯ್ಕೆ ಮಾಡಿದ್ದೇವೆ, ಈ ಗ್ರಾಮದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಬೇಕು ಎಂದರು.ಎಎಸ್ಪಿ ಜಗನ್ನಾಥ್ ರೈ ಮಾತನಾಡಿ, ಶಿಕ್ಷಣದಲ್ಲಿ ಕ್ರಾಂತಿ ತಂದಂತಹ ಡಾ.ಎಚ್.ನರಸಿಂಹಯ್ಯ ಹುಟ್ಟಿದ ಈ ಗ್ರಾಮದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ನಿಮ್ಮ ಗ್ರಾಮದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿವೆ. ತಾವು ವಾಹನಗಳ ದಾಖಲೆಗಳು ಹಾಗೂ ಸಂಚಾರಿ ನಿಯಮ ಪಾಲಿಸಬೇಕು ಎಂದರು. ಸೌಜನ್ಯದಿಂದ ವರ್ತಿಸಿ:
ಡಿವೈಎಸ್ಪಿ ಎಸ್.ಶಿವಕುಮಾರ್ ಮಾತನಾಡಿ, ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು, ದ್ವೇಷ, ಅಸೂಯೆಗಳನ್ನು ಇಟ್ಟುಕೊಳ್ಳದೇ ಸರಳವಾಗಿ ಜೀವನ ನಡೆಸಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಪೋಲಿಸ್ ಠಾಣೆಗೆ ಬರಬೇಡಿ, ಕಾನೂನನ್ನು ಗೌರವಿಸಿ ಎಂದು ಹೇಳಿದರು.ಇದೇ ವೇಳೆ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ, ಪಿಎಸ್ಐಗಳಾದ ರಮೇಶ್ ಗುಗ್ಗರಿ, ಲಲಿತಮ್ಮ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.