ಮಾದಕ ವಸ್ತುಗಳ ಚಟಗಳಿಗೆ ಬಲಿಯಾದರೆ ಬದುಕು ದುಸ್ತರ: ಹನುಮಂತಪ್ಪ

| Published : Jun 27 2024, 01:13 AM IST

ಮಾದಕ ವಸ್ತುಗಳ ಚಟಗಳಿಗೆ ಬಲಿಯಾದರೆ ಬದುಕು ದುಸ್ತರ: ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಯೌವನದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಗಳಿಗೆ ಬಲಿಯಾದರೆ ಬದುಕು ದುಸ್ತರವಾಗುವ ಜೊತೆಗೆ ಶಾರೀರಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವು ಸಂಭವಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

ಅಂತಾರಾಷ್ಟ್ರೀಯ ಮದ್ಯವ್ಯಸನ, ಮಾದಕ ವಸ್ತು ವಿರೋಧಿ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯೌವನದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಗಳಿಗೆ ಬಲಿಯಾದರೆ ಬದುಕು ದುಸ್ತರವಾಗುವ ಜೊತೆಗೆ ಶಾರೀರಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವು ಸಂಭವಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

ನಗರದ ಐಡಿಎಸ್‍ಜಿ ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಸ್ತ್ರಿಶಕ್ತಿ ವ್ಯಸನ ಮುಕ್ತ ಕೇಂದ್ರ ಹಾಗೂ ಐಡಿಎಸ್‍ಜಿ ಕಾಲೇಜು ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮದ್ಯವ್ಯಸನ ಮತ್ತು ಮಾದಕ ವಸ್ತು ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದರು.

ಮದ್ಯಪಾನ, ಬೀಡಿ, ಸಿಗರೇಟ್, ಕೊಕೆನ್, ತಂಬಾಕು ಸೇರಿದಂತೆ ಇನ್ನಿತರ ಚಟಗಳಿಗೆ ಒಮ್ಮೆ ಬಲಿಯಾದರೆ ಕೆಲವು ಕ್ಷಣ ಗಳಿಗೆ ಮಾತ್ರ ಅಮಲಿನ ನಶೆಯಲ್ಲಿ ತೇಲಿಸುತ್ತದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಲು ಬಿಡುವುದಿಲ್ಲ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೇವಲ ಕಾಲೇಜುಗಳ ಸಮೀಪ ಮಾದಕ ವಸ್ತುಗಳ ಮಾರಾಟವಿತ್ತು. ಆದರೆ, ಇದೀಗ ಪ್ರೌಢಶಾಲಾ ಆವರಣದ ಸಮೀಪ ವ್ಯಾಪಿಸುತ್ತಿರುವುದು ಆತಂಕದ ಸಂಗತಿ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಅಥವಾ ಆಪ್ತರು ಈ ಚಟದಿಂದ ಬಲಿಯಾಗದಂತೆ ನಿಗಾವಹಿಸಬೇಕು, ಸಹಾಯವಾಣಿಗೆ ಕರೆ ಮಾಡಿ ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಹಿಂದಿನ ಕಾಲಘಟ್ಟದಲ್ಲಿ ಕೇವಲ ಬೀಡಿಗಳ ಸೇವನೆ ಅಧಿಕವಾಗಿತ್ತು. ಆದರೆ, ಕಾಲ ಬದಲಾದಂತೆ ಸಿಗರೇಟ್, ಗಾಂಜಾ ಮಾರಾಟ ಪ್ರಕರಣ ಹೆಚ್ಚಾಗುತ್ತಿದೆ. ಮದ್ಯಪಾನ ಕೇವಲ ಬಾರ್‌ಗಳಲ್ಲಿ ಮಾತ್ರ ಸೀಮಿತವಾಗಿದೆ. ಆದರೆ, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ಟಿಗೆ ಹಾಗೂ ಗೂಡು ಅಂಗಡಿಗಳಲ್ಲಿ ಮಾರಾಟದ ಪರಿಣಾಮ ಯುವಕರು ವ್ಯಸನ ರಾಗುತ್ತಿದ್ದಾರೆ ಎಂದು ಹೇಳಿದರು.

ಇಂದಿನ ಯುವ ಪೀಳಿಗೆಗೆ ಸ್ನೇಹಿತರ ಜೊತೆಗೂಡಿ ಮೋಜು ಮಸ್ತಿಗಾಗಿ ಮದ್ಯ ವ್ಯಸನ ಹಾಗೂ ಮಾದಕ ವಸ್ತುಗಳ ದಾಸ ರಾಗುತ್ತಾರೆ. ಒಮ್ಮೆ ಅಮಲಿನ ಚಟದಿಂದ ಬಲಿಯಾದಲ್ಲಿ ಜೀವನ ಸುಧಾರಣೆ ಬಹಳಷ್ಟು ಕಷ್ಟವಾಗುವ ಜೊತೆಗೆ ಅಮಲಿನ ಗುಂಗಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗಿ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಮಾತನಾಡಿ, ಪ್ರಸ್ತುತ ದೊಡ್ಡಮಟ್ಟದಲ್ಲಿ ಅಮಲಿನ ಪದಾರ್ಥಗಳು ಮಾರಾಟ ವಾಗುತ್ತಿವೆ. ಆದರೆ ಚಿಕ್ಕಮಗಳೂರು ಅಲ್ಪ ಪ್ರಮಾಣದಲ್ಲಿ ಈ ರೀತಿ ಪ್ರಕರಣಗಳು ಕಂಡುಬರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ನಶೆ ಭರಿಸುವ ವಸ್ತುಗಳಿಂದ ದೂರವಿರುವ ಮೂಲಕ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಮಾದಕ ವಸ್ತುಗಳ ಮಾರಾಟ ಮೊದಲು ಇಂಜಿನಿಯರಿಂಗ್ ಕಾಲೇಜುಗಳ ಸಮೀಪ ಹೆಚ್ಚಿತ್ತು. ಇದೀಗ ಪಿಯು ಕಾಲೇಜು ಗಳ ಸಮೀಪವು ಕಾಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಹೀಗಾಗಿ ಪ್ರತಿ ಕಾಲೇಜುಗಳ ಸಮೀಪ ಮಾರುವೇಶದಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಿದ್ದು ಮಾರಾಟಗಾರರು ಕಂಡುಬಂದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದರು.

ಆಪ್ತ ಸ್ನೇಹಿತರು ವ್ಯಸನದ ದುಶ್ಚಟಗಳಿಂದ ಬಲಿಯಾಗುವುದು ತಪ್ಪಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಒಂದು ವೇಳೆ ಮಾರಾಟ ಅಥವಾ ಸಾಗಾಣಿಕೆ ಕಂಡುಬಂದಲ್ಲಿ ಸಹಾಯವಾಣಿ 112 ಅಥವಾ 1950 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಮಾಹಿತಿ ನೀಡುವವರ ವಿವರ ಗೌಪ್ಯವಾಗಿಡಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್‍ಕುಮಾರ್ ಮಾತನಾಡಿ, ಅತಿಯಾದ ಮದ್ಯವ್ಯಸನದಿಂದ ಜಿಲ್ಲಾಸ್ಪತ್ರೆಯಲ್ಲಿ ಪ್ರತಿನಿತ್ಯ 2-3 ಸಾವುಗಳು ಸಂಭವಿಸುತ್ತಿವೆ. ಅದರಿಂದ ಇಡೀ ಕುಟುಂಬವೇ ಬೀದಿಗೆ ಬೀಳುವ ಸ್ಥಿತಿಯಿದೆ. ಹಾಗಾಗಿ ವಿದ್ಯಾರ್ಥಿಗಳು ಪ್ರಾರಂಭದಲ್ಲೇ ಇಂತಹ ದುಶ್ಚಟಗಳಿಂದ ಬಲಿಯಾದರೆ ಪಾಲಕರಿಗೆ ಮಕ್ಕಳು ನುಂಗಲಾರದ ತುತ್ತಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕೆಲವು ಯುವಕರು ರಾತ್ರಿ ಊಟದ ಬಳಿಕ ಹೊರತೆರಳಿದರೆ ಆತ ಧೂಮಪಾನ ವ್ಯಸನಿಯಾಗಿದ್ದಾನೆ. ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಕೂರಲು ಸಾಧ್ಯವಾಗುವುದಿಲ್ಲ ಆ ವ್ಯಕ್ತಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಿದ್ದಾನೆ. ಹೀಗಾಗಿ ವಿದ್ಯಾರ್ಥಿಗಳು ಯೌವನದ ಹಾದಿಯಲ್ಲಿ ದುಶ್ಚಟಗಳನ್ನು ಆಹ್ವಾನಿಸದೇ ವಿದ್ಯಾರ್ಜನೆ ಕಡೆ ಮುತುವರ್ಜಿವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಡಿಎಸ್‍ಜಿ ಕಾಲೇಜು ಪ್ರಾಂಶುಪಾಲೆ ಡಾ. ಕೆ.ಸಿ.ಚಾಂದಿನಿ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಪೃಥ್ವಿಜಿತ್, ನರರೋಗ ತಜ್ಞ ಡಾ. ಕೆ.ಆರ್.ವೆಂಕಟೇಶ್, ಸ್ತ್ರೀಶಕ್ತಿ ವ್ಯಸನ ಮುಕ್ತ ಕೇಂದ್ರದ ವ್ಯವಸ್ಥಾಪಕ ಮಂಜುನಾಥ್, ಚಿಕಿತ್ಸಾ ಮನೋಶಾಸ್ತ್ರಜ್ಞ ನವೀನ್‍ಕುಮಾರ್, ಬ್ರಹ್ಮಕುಮಾರೀಸ್ ಸಂಸ್ಥೆಯ ಕಲೈವಾಣಿ, ಶ್ರೀ ಶಕ್ತಿ ಅಸೋಸಿಯೇಷನ್ ಕಾರ್ಯದರ್ಶಿ ವಿ.ಎಂ.ಶಶಿಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಉಲ್ಲಾಸ್ ಪ್ರಾರ್ಥಿಸಿದರು. ಶಿಕ್ಷಕ ಸತೀಶ್ ಸ್ವಾಗತಿಸಿದರು. ಶಶಿಧರ್ ನಿರೂಪಿಸಿದರು. ಪ್ರೊ. ಲೋಕೇಶ್ ವಂದಿಸಿದರು.26 ಕೆಸಿಕೆಎಂ 5ಚಿಕ್ಕಮಗಳೂರಿನ ಐಡಿಎಸ್‍ಜಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮದ್ಯವ್ಯಸನ ಮತ್ತು ಮಾದಕ ವಸ್ತು ವಿರೋಧಿ ದಿನವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ವಿ. ಹನುಮಂತಪ್ಪ ಉದ್ಘಾಟಿಸಿದರು. ಎಎಸ್ಪಿ ಕೃಷ್ಣಮೂರ್ತಿ, ಡಾ. ಚಂದಿನಿ, ಡಾ. ಮೋಹನ್‌ಕುಮಾರ್‌, ಡಾ. ಕೆ.ಆರ್‌.ವೆಂಕಟೇಶ್‌ ನವೀನ್‌ಕುಮಾರ್‌ ಇದ್ದರು.