ಸಾರಾಂಶ
(ರಾಮಮಂದಿರ ಹೋರಾಟ ಮೆಲುಕು)- - -ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
"ಸೋಮವಾರ ಮಧ್ಯಾಹ್ನದವರೆಗೆ ನನ್ನುಸಿರಿದ್ದರೆ ನನ್ನ ಬದುಕು ಸಾರ್ಥಕ.. "ಹೀಗೆ ವಿಶೇಷ, ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಶಾಸಕ ಆರಗ ಜ್ಞಾನೇಂದ್ರ ಅವರು.
ನನ್ನ ಜೀವನದ ಅತಿ ಸಂತಸದ ಈ ದಿನವನ್ನು ನಾನು ನೋಡುತ್ತೇನೆ ಎನ್ನುವ ಭರವಸೆ ಖಂಡಿತ ನನಗೆ ಇರಲಿಲ್ಲ, ನನಗೆ ಈ ದಿನದ ಸಂಭ್ರಮವನ್ನು ಖುಷಿಯನ್ನು ಸಂತೋಷವನ್ನು ಆನಂದವನ್ನು ವರ್ಣಿಸಲು ಶಬ್ದಗಳು ಸಿಗುತ್ತಿಲ್ಲ. ರಾಮಮಂದಿರ ಹೋರಾಟದ ಬಹುತೇಕ ಎಲ್ಲ ಹಂತದಲ್ಲೂ ತೊಡಗಿಸಿಕೊಂಡಿದ್ದೆ. 500 ವರ್ಷಗಳ ಹೋರಾಟ, ಲಕ್ಷಾಂತರ ಕಾರ್ಯಕರ್ತರ ತ್ಯಾಗ ಶ್ರಮ, ಸಾವಿರಾರು ಕಾರ್ಯಕರ್ತರ ಬಲಿದಾನದ ಫಲವನ್ನು ನಾನು ಬದುಕಿರುವಾಗಲೇ ನೋಡುತ್ತಿದ್ದೇನೆ ಎಂಬುದೇ ಲಕ್ಷಾಂತರ ರಾಮಭಕ್ತರಂತೆ ನನಗೂ ಅವಿಸ್ಮರಣೀಯ ವಿಚಾರ.“ಕಟ್ಟುವೆವು ಕಟ್ಟುವೆವು ಮಂದಿರವಲ್ಲೇ ಕಟ್ಟುವೆವು”, “ರಾಮನ ಪಾದದ ಮೇಲಾಣೆ ಮಂದಿರವಲ್ಲೇ ಕಟ್ಟುವೆವು” ಈ ತರದ ಘೋಷಣೆ ಕೂಗುವಾಗಲೆಲ್ಲಾ ಒಮ್ಮೊಮ್ಮೆ ಇದು ಸಾಧ್ಯನಾ? ಎನಿಸುತ್ತಿತ್ತು. ರಥಯಾತ್ರೆ ಮೂಲಕ ಭಾರತವನ್ನು ಹೆಚ್ಚು ಬಾರಿ ಸುತ್ತಿ ಹಳ್ಳಿಹಳ್ಳಿಗಳಲ್ಲಿ ರಾಮಭಕ್ತರ ಭಕ್ತಿಯನ್ನು ಪರಾಕಾಷ್ಠೆಗೆ ತೆಗೆದುಕೊಂಡು ಹೋದ ಬಿಜೆಪಿ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿಯವರ ಪರಿಶ್ರಮ, ದಿವಂಗತ ಅಶೋಕ ಸಿಂಘಾಲ್ ಅವರಂಥವರ ಬದುಕಿನ ಪೂರ್ಣ ಸಮರ್ಪಣೆ ಚಳವಳಿ ಸದಾ ಜೀವಂತವಾಗಿರುವಂತೆ ನೋಡಿಕೊಂಡಿದೆ.
2 ಕರಸೇವೆಗಳಲ್ಲಿ ತೀರ್ಥಹಳ್ಳಿಯಿಂದ ಸುಮಾರು 25 ಜನರ ತಂಡ ತೆರಳಿತ್ತು. ಪ್ರಥಮ ಬಾರಿ 1990ರಲ್ಲಿ ಹೋದಾಗ ಅಯೋಧ್ಯೆಯಿಂದ ಹತ್ತಾರು ಕಿ.ಮೀ. ದೂರದಲ್ಲಿಯೇ ನಮ್ಮನ್ನು ತಡೆದು ಬಂಧಿಸಿ, ಒಂದು ಕಾಡಿನಲ್ಲಿ ತೆಗೆದುಕೊಂಡು ಹೋಗಿ ನಿಮ್ಮನ್ನು ಬಿಡುಗಡೆ ಮಾಡಿದ್ದೇವೆ ಎಂದಿದ್ದರು. ಅದಲ್ಲದೇ, ಆ ರಾತ್ರಿ ಆ ಕಾಡಿನಲ್ಲಿ ಉಳಿಯುವ ಪರಿಸ್ಥಿತಿ ನಿರ್ಮಾಣವಾದಾಗ ಕಾಡಿನ ಸಮೀಪದ ಹಳ್ಳಿಯವರು ಸಾವಿರಾರು ಜನರಿಗೆ ಊಟ- ತಿಂಡಿಯ ವ್ಯವಸ್ಥೆ ಮಾಡಿ, ಪ್ರೀತಿಯಿಂದ ಬೀಳ್ಕೊಟ್ಟ ರಾಮಭಕ್ತಿ ನಮಗೆ ಹೆಚ್ಚು ಸ್ಫೂರ್ತಿ ನೀಡಿತ್ತು.ಎರಡನೇ ಬಾರಿ 1992ರ ಕರಸೇವೆಯಲ್ಲಿ ಪಾಲ್ಗೊಂಡಿದ್ದು ದಿನಗಳಷ್ಟೂ ಬದುಕಿನ ವಿಶೇಷ ದಿನಗಳಾಗಿದ್ದವು. 1992ರ ಡಿಸೆಂಬರ್ 6ರಂದು ವಿವಾದಿತ ಕಟ್ಟಡ ಬೀಳುವ ದಿನ. ಸ್ಥಳದಿಂದ ಕೇವಲ 100 ಅಡಿ ದೂರದಲ್ಲಿ ಇದ್ದೆವು. ಸಾವಿರಾರು ವರ್ಷಗಳ ದಾಸ್ಯದ ಸಂಕೇತವೊಂದು ಹಿಂದೂ ಸ್ವಾಭಿಮಾನದ ಪ್ರತೀಕವಾಗಿ ಕುಸಿದು ಬೀಳುವುದನ್ನು ನೋಡಿದ ನನಗೆ “ಪುಟಿದು ಚಿಮ್ಮುತ್ತಿದೆ ಅಂತ ಶಕ್ತಿಯೂ ಹೃದಯದೊಳಗಿನಿಂದ” ಹಾಡುಗಳ ಸಾಲುಗಳನ್ನು ಮತ್ತೆ ಮತ್ತೆ ನೆನಪು ಮಾಡಿಸುತ್ತಿತ್ತು, ವಿವಾದಿತ ಕಟ್ಟಡದ 3 ಗುಂಬಜುಗಳು ನೆಲಸಮವಾದ ನಂತರ, ಚಳವಳಿಯ ಮೊದಲಿನಿಂದ ಕೊನೆಯವರೆಗೂ ಚಳುವಳಿಯ ಮಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡಿದ “ಶ್ರೇಷ್ಠ ರಾಷ್ಟ್ರಸಂತ ಪರಮ ಪೂಜನೀಯ ಪೇಜಾವರ ಶ್ರೀಗಳು” ರಾಮನ ವಿಗ್ರಹ ಪ್ರತಿಷ್ಟಾಪನೆಗೆ ಹೊರಟಾಗ ಅಧಿಕಾರಿಗಳು ತಡೆದರು. ಆಗ ಪೇಜಾವರರು ಆಡಿದ ಒಂದು ಮಾತು ಈಗಲೂ ಕಣ್ಣಿಗೆ ಕಟ್ಟಿದಂತಿದೆ, “ರಾಮಲಲ್ಲನಾ ಪ್ರತಿಷ್ಟಾಪಿಸದೇ ಇಲ್ಲಿಂದ ತೆರಳುವ ಪ್ರಶ್ನೆಯೆ ಇಲ್ಲ, ಇಲ್ಲಿಯೇ ನನ್ನ ದೇಹಾಂತ್ಯವಾದರು ಸರಿಯೇ” ಎಂದಿದ್ದರು. ಸಂತರೊಬ್ಬರು ಹಠಕ್ಕೆ ಬಿದ್ದರೆ ಏನಾಗ ಬಹುದು ಎನ್ನುವುದರ ಅರಿವಿದ್ದಂತಿದ್ದ ಅಧಿಕಾರಿ ಪ್ರತಿಷ್ಟಾಪನೆಗೆ ಕೊನೆಗೂ ಅವಕಾಶ ನೀಡಿದರು. ದೇಶದ ಮೂಲೆ ಮೂಲೆಯಿಂದ ತಂದಿದ್ದ ಇಟ್ಟಿಗೆಗಳನ್ನು ಸರಯೂ ನದಿ ತೀರದಿಂದ ಮರಳನ್ನು ಮೂರು ನಾಲ್ಕು ಕಿ.ಮೀ ದೂರದವರೆಗೆ ಕಾರ್ಯಕರ್ತರೇ ಸಾಲು ಮಾಡಿ ಕೈಯಿಂದ ಕೈಯಿಗೆ ಸಾಗಿಸಿದ್ದು ನಾವೆಲ್ಲರೂ ಕೂಡ ಅದರಲ್ಲಿ ಭಾಗಿಯಾಗಿದ್ದು ರಾಮಭಕ್ತಿಗೆ ಇಂಬು ನೀಡಿತ್ತು.
ಐದು ಲಕ್ಷಕ್ಕೂ ಹೆಚ್ಚು ಜನ ಅಯೋಧ್ಯೆಗೆ ಕರಸೇವೆಗೆ ಹೊರಡಲು ಸಿದ್ಧರಾದಾಗಲೇ ಜೀವಂತ ವಾಪಸ್ಸು ಬರುತ್ತೇವೆ ಎನ್ನುವ ಖಾತ್ರಿ ಬಹಳಷ್ಟು ಜನರಿಗೆ ಇರಲಿಲ್ಲ. ವಿವಾದಿತ ಕಟ್ಟಡ ಬಿದ್ದ ನಂತರ ಅಂದು ಗಂಡೆದೆಯ ತೀರ್ಮಾನ ತೆಗೆದುಕೊಂಡವರು ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರು.ಶ್ರೀರಾಮ ಮಂದಿರ ಹೋರಾಟದಲ್ಲಿ ಹುತಾತ್ಮರಾದ ,ಹೋರಾಟದಲ್ಲಿಯೇ ಬದುಕು ಪೂರ್ತಿ ಕಳೆದುಕೊಂಡ ಸಂಘ ಮತ್ತು ಪರಿವಾರದ ಲಕ್ಷಾಂತರ ಕಾರ್ಯಕರ್ತರಿಗೆ, ಕರಸೇವಕರಿಗೆ ನಾಯಕರಿಗೆ, ಪ್ರಚಾರಕರಿಗೆ ಎಲ್ಲರಿಗೂ ಸಾವಿರ ಸಾವಿರ ಪ್ರಣಾಮಗಳನ್ನು ಅರ್ಪಿಸಲೇಬೇಕು.
ವಿವಾದಿತ ಕಟ್ಟಡಕ್ಕೆ ಸುತ್ತ ಹಾಕಿದ್ದ ತಂತಿಬೇಲಿ ಮುರಿದು ನುಗ್ಗುತ್ತಿದ್ದ ಕರ ಸೇವಕನಿಗೆ ಅಲ್ಲಿದ್ದ ಪೊಲೀಸರು ಅಡ್ಡ ತಡೆಯಲು ಆಗದೇ, ಕೈಲಿದ್ದ ಲಾಠಿ ಪುಡಿ ಆಗುವವರೆಗೂ ಹೊಡೆದರು ಕೂಡ, ತಂತಿಮುಳ್ಳು ಮೈ ತುಂಬಾ ಪರಚಿ ರಕ್ತ ಸುರಿಯುತ್ತಿದ್ದರು ಕೂಡ ಎದೆಗುಂದದೇ, ಮುಲಾಯಂ ಸಿಂಗ್ ಯಾದವ್‌ನ ಸರ್ಕಾರದ ಕೋವಿ ಗುಂಡುಗಳಿಗೆ ಎದೆಯೊಡ್ಡಿ ದಾಸ್ಯದ ಸಂಕೋಲೆ ಕಳಚಿದ ನಮ್ಮ ಲಕ್ಷ ಲಕ್ಷ ಕಾರ್ಯಕರ್ತರ ಜೀವನದಲ್ಲಿ ಜನವರಿ 22, 2024ರ ದಿನಕ್ಕಿಂತ ಪರಮೋಚ್ಚ ದಿನ ಮತ್ತೊಂದು ಇರಲಾರದು. ಅನೇಕರು ಮಾತಿಗೆ ಹೇಳುತ್ತಾ ಇರುತ್ತಾರೆ. ಅಯೋಧ್ಯೆ ಹೋರಾಟದಲ್ಲಿ ಸರದಿಯೂ ನಿಧಿಯಲ್ಲಿ ನೀರನಷ್ಟೇ ರಕ್ತಹರಿದಿದೆ. ಹರಿದ, ಚೆಲ್ಲಿದ ರಕ್ತಕ್ಕೆ ಫಲಪ್ರದವಾಗಿ ದೊರೆತಿದ್ದೇ ನಾಳಿನ ರಾಮನ ಮಂದಿರ.ಆದ್ದರಿಂದಾಗಿಯೇ ಜೀವ ಮತ್ತು ಬದುಕು ಕಳೆದುಕೊಂಡ ಕಾರ್ಯಕರ್ತನ ತ್ಯಾಗ ಬಲಿದಾನ ಮಂದಿರ ಉದ್ಘಾಟನೆ ನಂತರವೂ ವ್ಯರ್ಥವಾಗದಂತೆ ರಾಮರಾಜ್ಯ ನಿರ್ಮಾಣ ಮಾಡುವ ಕೈಂಕರ್ಯವನ್ನು ನರೇಂದ್ರ ಮೋದಿ ಕಳೆದ 10 ವರ್ಷಗಳಿಂದ ಮಾಡುತ್ತಿದ್ದಾರೆ. ಮುಂದಿನ 5 ವರ್ಷಗಳಲ್ಲಿಯೂ ಕೂಡ ಮಾಡುವವರಿದ್ದಾರೆ.
- ಆರಗ ಜ್ಞಾನೇಂದ್ರ, ಶಾಸಕ ತೀರ್ಥಹಳ್ಳಿ ಕ್ಷೇತ್ರ.- - - -21ಟಿಟಿಎಚ್02: ಆರಗ ಜ್ಞಾನೇಂದ್ರ, ಶಾಸಕ