ಮೂಲ ಸೌಕರ್ಯಗಳು ಇಲ್ಲದಿದ್ದರೂ ರಾಜ್ಯದ ಅನೇಕ ನರ್ಸಿಂಗ್ ಕಾಲೇಜುಗಳಿಗೆ ನಿಯಮ ಬಾಹಿರ ಅನುಮತಿ?

| Published : Oct 22 2024, 01:20 AM IST / Updated: Oct 22 2024, 12:24 PM IST

Nurse
ಮೂಲ ಸೌಕರ್ಯಗಳು ಇಲ್ಲದಿದ್ದರೂ ರಾಜ್ಯದ ಅನೇಕ ನರ್ಸಿಂಗ್ ಕಾಲೇಜುಗಳಿಗೆ ನಿಯಮ ಬಾಹಿರ ಅನುಮತಿ?
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ ಸೌಕರ್ಯಗಳು ಇಲ್ಲದಿದ್ದರೂ ರಾಜ್ಯದ ಅನೇಕ ನರ್ಸಿಂಗ್ ಕಾಲೇಜುಗಳಿಗೆ ನಿಯಮಬಾಹಿರವಾಗಿ ಅನುಮತಿ ಮಂಜೂರು ಮಾಡಿರುವ ಆರೋಪ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿರುದ್ಧ ಕೇಳಿ ಬಂದಿದೆ.

  ಬೆಂಗಳೂರು : ಅಗತ್ಯ ಸಂಖ್ಯೆಯ ಹಾಸಿಗೆ, ಮೂಲಸೌಕರ್ಯಗಳು ಇಲ್ಲದಿದ್ದರೂ ರಾಜ್ಯದ ಅನೇಕ ನರ್ಸಿಂಗ್ ಕಾಲೇಜುಗಳಿಗೆ ನಿಯಮಬಾಹಿರವಾಗಿ ಅನುಮತಿ ಮಂಜೂರು ಮಾಡಿರುವ ಆರೋಪ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿರುದ್ಧ ಕೇಳಿ ಬಂದಿದೆ.

ಈ ಸಂಬಂಧ ಸಮಗ್ರ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯರು ಸೇರಿದಂತೆ ಇನ್ನಿತರರು ರಾಜ್ಯ ಸರ್ಕಾರಕ್ಕೆ ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ನರ್ಸಿಂಗ್ ಕಾಲೇಜು ನಡೆಸಲು ಕನಿಷ್ಠ 100 ಬೆಡ್‌ಗಳ ಆಸ್ಪತ್ರೆ ಇರಬೇಕು ಎಂಬುದು ಅತ್ಯಂತ ಪ್ರಮುಖ ನಿಯಮವಾಗಿದೆ. ಈ ಬಗ್ಗೆ ಪರಿಶೀಲಿಸದಾಗ ಸುಮಾರು 20 ಕಾಲೇಜುಗಳಲ್ಲಿ 100 ಬೆಡ್‌ಗಳ ಆಸ್ಪತ್ರೆಯೇ ಇಲ್ಲ ಎಂದು ದೂರುದಾರ, ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಆರೋಪಿಸಿದ್ದಾರೆ.

ಅನುಮತಿ ನೀಡುವ ಮೊದಲು ಸ್ಥಳೀಯ ಪರಿಶೀಲನಾ ಸಮಿತಿಗಳು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊರತೆಗಳ ಕುರಿತು ವರದಿ ನೀಡಿವೆ. ಆದರೂ, ವಿಶ್ವವಿದ್ಯಾಲಯದ 189ನೇ ಸಿಂಡಿಕೇಟ್ ಸಭೆಯಲ್ಲಿ ಈ ನರ್ಸಿಂಗ್ ಕಾಲೇಜುಗಳ ಆರಂಭಕ್ಕೆ ಅನುಮೋದನೆ ನೀಡಲಾಗಿದೆ. ಈ ಅಕ್ರಮದ ಹಿಂದೆ ವಿಶ್ವವಿದ್ಯಾಲಯದವರ ಕೈವಾಡ ಇದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರಿಗೂ ದೂರು ನೀಡಲಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ಮತ್ತೊಬ್ಬ ದೂರುದಾರ, ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಡಾ. ಕೆ.ಎನ್ ವೇಣುಗೋಪಾಲ್, ನಿಗದಿತ ಸಂಖ್ಯೆಯ ಹಾಸಿಗೆಗಳು ಇಲ್ಲದ ಆಸ್ಪತ್ರೆಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಹೊಂದದಿದ್ದರೆ ಅವರು ಯಾವ ರೀತಿಯ ನರ್ಸಿಂಗ್ ಪದವಿ ಪಡೆಯಲು ಸಾಧ್ಯ? ಈ ಕುರಿತು ಸಮಗ್ರವಾಗಿ ವಿಚಾರಣೆ ನಡೆಸಿದರೆ ಅಕ್ರಮ ಕಾಲೇಜುಗಳ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದರು.

ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಡಾ.ಎಚ್‌.ಜೆ. ಕೃಷ್ಣ, ಅಕ್ರಮವಾಗಿ ಅನುಮತಿ ಪಡೆದಿರುವ ಕಾಲೇಜುಗಳು ಕಾರ್ಯ ನಿರ್ವಹಿಸದಂತೆ ತಡೆ ಹಿಡಿಯಬೇಕು. 189ನೇ ಸಿಂಡಿಕೇಟ್ ನಿರ್ಣಯಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದ್ದಾರೆ.

ಭರ್ತಿಯಾಗದ ನರ್ಸಿಂಗ್ 11,673 ಸೀಟು!:  

ಯುಜಿ-ಸಿಇಟಿ 2ನೇ ವಿಸ್ತರಿಸಿದ ಸೀಟ್ ಹಂಚಿಕೆ ಸುತ್ತಿನ ಬ‍ಳಿಕವೂ 11,673 ನರ್ಸಿಂಗ್ ಸೀಟ್‌ಗಳು ಖಾಲಿ ಉಳಿದಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾಹಿತಿ ನೀಡಿತ್ತು. ಬೃಹತ್ ಪ್ರಮಾಣದಲ್ಲಿ ಸೀಟುಗಳಲ್ಲಿ ಖಾಲಿ ಉಳಿಯಲು ನರ್ಸಿಂಗ್ ಕಾಲೇಜುಗಳಲ್ಲಿ ಅಗತ್ಯ ಮೂಲಸೌಕರ್ಯದ ಕೊರತೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.