ಸಾರಾಂಶ
-ಭೋವಿ ಗುರುಪೀಠದಲ್ಲಿ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ತೀರ್ಮಾನ । ರಾಷ್ಟ್ರೀಯ ಕಾರ್ಯಕ್ರಮವಾಗಿ ಆಚರಣೆಗೆ ಒಲವು
ಕನ್ನಡಪ್ರಭವಾರ್ತೆ, ಚಿತ್ರದುರ್ಗಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಗುರುಪೀಠಕ್ಕೆ ಧೀಕ್ಷೆ ಪಡೆದು 25 ವರ್ಷ ಸಂದ ಹಿನ್ನಲೆ ಜುಲೈ 20ರಂದು ಧೀಕ್ಷಾ ರಜತ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಬೋವಿ ಗುರುಪೀಠದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮಕ್ಕೆ ರಾಷ್ಟೀಯ ಸ್ವರೂಪ ನೀಡಬೇಕು, ಸಮಾಜ ಸಂಘಟನೆಗೆ ಸಮಾವೇಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿರ್ಣಯಕ್ಕೆ ಬರಲಾಯಿತು.
ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪಕ್ಷಾತೀತವಾಗಿ ಸಮಾಜ ಸಂಘಟಿಸುವ ತುರ್ತು ಅನಿವಾರ್ಯವಿದೆ. ದೀಕ್ಷಾ ರಜತ್ ಮಹೋತ್ಸವವನ್ನು 25 ಬಗೆಯ ಕಿರು ಕಾರ್ಯಕ್ರಮಗಳನ್ನು ಸಂಘಟಿಸಿ ಅರ್ಥಪೂರ್ಣಗೊಳಿಸೋಣ. ಶ್ರೀಗಳು ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಮಾಜ ಸಂಘಟನೆಯಾಗಲು ಕಾರಣೀಭೂತರಾಗಿ ದ್ದಾರೆ. ವಿದ್ಯಾವಂತರು ಸಂಘಟನೆಗೆ ಸಮಯ ನೀಡಬೇಕು ಹಾಗೂ ಸಂಘಟನೆಯ ಭಾಗವಾಗಿ ನಿಲ್ಲಬೇಕು ಎಂದರು.ಅಧಿಕಾರಿಗಳು ವೃತ್ತಿಗಂಟಿಕೊಳ್ಳದೆ, ಸ್ವಾರ್ಥಿಗಳಾಗದೇ, ಭೋವಿ ಸಮಾಜದ ಅಭಿವೃದ್ಧಿಗಾಗಿ ನಿಸ್ವಾರ್ಥಿಗಳಾಗಬೇಕು. ಆದಾಯದಲ್ಲಿ ಸ್ವಲ್ಪ ಕುಟುಂಬಕ್ಕೆ, ಸ್ವಲ್ಪ ಸಮಾಜಕ್ಕೆ ಎನ್ನುವ ಭಾವ ಬರಬೇಕು. ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಸಮಾಜದ ಶ್ರೀಗಳು ದಿಕ್ಸೂಚಿಯಾಗಿ ಸಾಗುತ್ತಿದ್ದಾರೆ. ಕಟ್ಟ ಕಡೆಯ ಭೋವಿ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶವನ್ನುಭೋವಿ ಅಭಿವೃದ್ದಿ ನಿಗಮ ಹೊಂದಿದೆ ಎಂದು ತಿಳಿಸಿದರು.
ಇಮ್ಮಡಿ ಶ್ರೀಗಳು ನೂರಾರು ಮಕ್ಕಳನ್ನು ದತ್ತು ಪಡೆದು ಶೈಕ್ಷಣಿಕ ಹಾಗೂ ಔದ್ಯೋಗಿಕ ಸೇವೆಯನ್ನು ಮಾಡಿದ್ದಾರೆ. ಅವರ ಪರಿಶ್ರಮದಿಂದ ಭೋವಿ ಸಮಾಜ ಸಂಘಟನಾ ಸಮಾಜವಾಗಿ ಹೊರಹೊಮ್ಮಿದೆ. ಸರ್ಕಾರದಲ್ಲಿ ರಾಜಕಾರಣಿಗಳ ಮಾತಿಗಿಂತ ಶ್ರೀಗಳ ಮಾತಿಗೆ ಹೆಚ್ಚು ಮೌಲ್ಯ. ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರೀಗಳ ಸಂಘಟನಾ ಶಕ್ತಿ ಪರಿಣಾಮಕಾರಿ. ಸಮಾಜದ ಋಣ ತೀರಿಸುವ ಪ್ರಯತ್ನದಲ್ಲಿರುವವನೇ ನಿಜವಾದ ಸಮಾಜದ ನಾಯಕ ಎಂದು ಹೇಳಿದರು.ಭೋವಿ ಅಭಿವೃದ್ಧಿ ನಿಗಮ ಸುಲಿಗೆ ಕೇಂದ್ರವಲ್ಲ, ಸುಧಾರಣಾ ಕೇಂದ್ರವಾಗಿ ಪರಿವರ್ತಿಸುವೆ. ಸೌಲಭ್ಯ ಪಡೆಯದವರಿಗೆ ಸೌಲಭ್ಯ ಕಲ್ಪಿಸಲಾಗುವುದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ, ಅಧಿಕಾರಿಗಳ ದರ್ಪದಿಂದ ನಿಗಮದಲ್ಲಿ ಅವ್ಯವಸ್ಥೆಯಾಗಿದೆ. ಎಸ್.ಐಟಿ ತನಿಖೆಯಿಂದ ಸತ್ಯ ತಿಳಿಯುತ್ತದೆ ಎಂದರು.
ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಯಾವ ಪಕ್ಷದಿಂದಲೂ ಸಂಸತ್ ಚುನಾವಣೆಗೆ ಜಿಲ್ಲೆಯಲ್ಲಿ ಟಿಕೆಟ್ ಸಿಗದಿರುವುದಕ್ಕೆ ಒಗ್ಗಟ್ಟಿನ ಕೊರತೆ ಕಾರಣ. ಟಿಕೇಟ್ ಬೇಕಾದಾಗ ಎಲ್ಲರೂ ಮಠಕ್ಕೆ ಬರುತ್ತಾರೆ, ನಂತರ ಯಾರು ಸೇರುವುದಿಲ್ಲ. ಸ್ವಾಮೀಜಿಯವರಿಂದ ಮಾತ್ರ ಸಮಾಜವನ್ನು ಒಗ್ಗಟ್ಟಾಗಿ ಸಂಘಟಿಸಲು ಸಾಧ್ಯವಾಗಿದೆ. ಮಂಜರಿ ಹನುಮಂತಪ್ಪ ಸಮಾಜದ ಆಸ್ತಿಯಾಗಿದ್ದಾರೆ. ಹಾಗೆಯೇ ರಾಜಕಾರಣಿಗಳು ಸಮಾಜವನ್ನು ಕೈಹಿಡಿದು ಎತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.ಸೂರಗೊಂಡನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಸಂಕಷ್ಟದಲ್ಲಿರುವವರನ್ನು ಸಂತೈಸುವ ಸಂತರು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ. ಹೋರಾಟದ ಪಥದಲ್ಲಿರುವ ಗುರುಗಳಿಗೆ ರಕ್ಷ ಕವಚವಾಗಿ ಸಂಘ ಸಂಸ್ಥೆಯ ಮುಖಂಡರು ನಿಲ್ಲಬೇಕು. ಸಕುಟುಂಬ ಸಮೇತರಾಗಿ ದೀಕ್ಷಾ ಮಹೋತ್ಸವದಲ್ಲಿ ಭಾಗವಹಿಸಲು ಪ್ರೇರಣಾ ನೀಡುವ ಜಾಗೃತಿ ಯಾತ್ರೆ ಮಾಡೋಣ ಎಂದು ತಿಳಿಸಿದರು.
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಜನರು ವಿಧಾನಸಭೆಯ ಹೊರಗೆ ಧ್ವನಿ ಎತ್ತಬೇಕು, ಜನಪ್ರತಿನಿಧಿಗಳು ವಿಧಾನಸಭೆಯ ಒಳಗೆ ಸಮಾಜದ ಧ್ವನಿಯಾದಾಗ ಮಾತ್ರ ಸಂಘಟನೆಗೆ ಅರ್ಥ ಬರುತ್ತದೆ. ಕುಟುಂಬದ ಬಗ್ಗೆ ಹೇಗೆ ಸಮಾಲೋಚನೆ ಮಾಡುತ್ತೇವೆಯೋ ಅದೇ ರೀತಿ ಸಮಾಜ ಸಂಘಟನೆಯ ಬಗ್ಗೆ ನಿರಂತರ ಯೋಜನೆ ಮತ್ತು ಸಮಾಲೋಚನೆ ಮಾಡಬೇಕು. ಆರ್ಥಿಕವಾಗಿ ಸಬಲತೆ ಇರುವ ಸಮಾಜಕ್ಕೆ ಗೌರವ ಹೆಚ್ಚು. ಹಾಗಾಗಿ ಶಿಕ್ಷಣ, ಆರ್ಥಿಕ ಸಬಲತೆಗೆ ಹೆಚ್ಚು ಮಹತ್ವ ಕೊಡಬೇಕು, ಸಮಾಜಕ್ಕೆ ಅವಶ್ಯಕವಾದ ಹಕ್ಕುಗಳ ಪೂರೈಕೆಗೆ ಸದಾಕಾಲ ಸಂಘಟಿತರಾಗಬೇಕು ಎಂದು ಶ್ರೀಗಳು ಹೇಳಿದರು.ಹೊಸದುರ್ಗ ಚಂದ್ರಪ್ಪ, ಹೊಳಲ್ಕೆರೆ ಮಾಸ್ಟರ್ ರಂಗಪ್ಪ, ಎಸ್.ಜೆಎಸ್ ವಿದ್ಯಾಸಂಸ್ಥೆಯ ನಿರ್ದೇಶಕ ವಿ.ಹನುಮಂತಪ್ಪ ಗೋಡೆಮನೆ, ಇ.ಮಂಜುನಾಥ, ಹೆಚ್.ಆಂಜನೇಯ, ಹೊಸದುರ್ಗದ ಸುಬ್ಬಯ್ಯ, ರಾಮಚಂದ್ರಪ್ಪ, ಮಂಜಪ್ಪ, ಎನ್.ಪಿ.ಭರತ್, ಚಂದ್ರಶೇಖರ್, ಉಮೇಶ್, ಭೂತಭೋವಿ, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಇದ್ದರು.
---------------ಫೋಟೋ: 7 ಸಿಟಿಡಿ6
ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಧೀಕ್ಷಾ ರಜತ ಮಹೋತ್ಸವದ ಅಂಗವಾಗಿ ಭೋವಿ ಗುರುಪೀಠದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಭೋವಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.--------