ಸಾರಾಂಶ
ಸುವರ್ಣ ವಿಧಾನ ಪರಿಷತ್ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ಬೆಲೆ ಬಾಳುವ ಜಾಗದಿಂದ ಹೆಚ್ಚಿನ ಆದಾಯ ಪಡೆಯಲು ಹೊಸ ನೀತಿ ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಜೆಡಿಎಸ್ ಶಾಸಕ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ ಆಸ್ತಿಗಳಲ್ಲಿ ಕೆಲವನ್ನು ಬಾಡಿಗೆ, ಇಲ್ಲವೇ ಗುತ್ತಿಗೆ ಮೇಲೆ ನೀಡಲಾಗಿದೆ. ಕೆಲವು ಜಾಗಗಳಲ್ಲಿ ಶಾಲೆ, ಸಮುದಾಯ ಭವನ, ದೇವಸ್ಥಾನ ಕಟ್ಟಲಾಗಿದೆ. ಇವುಗಳನ್ನು ತೆರವುಗೊಳಿಸಲು ಆಗದಂತಹ ಸ್ಥಿತಿ ಇದೆ. ಕೆಲವು ಆಸ್ತಿಗಳನ್ನು ಅತ್ಯಂತ ಕಡಿಮೆ ಬಾಡಿಗೆಗೆ ನೀಡಲಾಗಿದೆ. ಹೀಗಾಗಿ ಇಂತಹ ಆಸ್ತಿಗಳನ್ನು ಸಕ್ರಮ ಮಾಡಬೇಕೇ ಅಥವಾ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯಡಿ ಇತ್ಯರ್ಥ ಮಾಡಬೇಕೇ, ಇಲ್ಲವೇ ಮಾರ್ಗಸೂಚಿ ದರ ಅಡಿಯಲ್ಲಿ ಅವರಿಗೆ ಮಾರಾಟ ಮಾಡಬೇಕೆ ಎಂಬ ಬಗ್ಗೆ ಪರಿಶೀಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ನೀತಿ ಜಾರಿಗೆ ತರಲಾಗುವುದು. ಒಟ್ಟಾರೆ ಪಾಲಿಕೆಯ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಗೋವಿಂದರಾಜು ಅವರು, ಬಿಬಿಎಂಪಿ 50 ಸಾವಿರ ಕೋಟಿ ರು. ಬೆಲೆಯ ಆಸ್ತಿ ಇದ್ದರೂ ಅನೇಕ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಲವಾರು ದಶಕಗಳಿಂದ ಕೇವಲ 30-40 ರು. ಬಾಡಿಗೆ ಪಡೆಯುತ್ತಿವೆ. ಕಡಿಮೆ ಬಾಡಿಗೆ ಕೊಡುವ ಆಸ್ತಿಗಳನ್ನು ಖಾಲಿ ಮಾಡಿಸಿ ಹೆಚ್ಚಿನ ಬಾಡಿಗೆ ವಸೂಲಿ ಮಾಡಬೇಕು. ಒಟ್ಟಾರೆ 600 ಕೋಟಿ ರು.ಗಿಂತ ಹೆಚ್ಚು ಬಾಡಿಗೆ ತೆಗೆದುಕೊಳ್ಳುವ ಅವಕಾಶವಿದೆ ಎಂದು ತಿಳಿಸಿದರು.