ಸಾರಾಂಶ
ಬಳ್ಳಾರಿ: ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಾಶ್ಚಾತ್ಯರಿಗೆ ಪರಿಚಯಿಸುತ್ತಲೇ ಸೌಂದರ್ಯ ಮತ್ತು ಮಾನವ ಮನಸ್ಸಿನ ಆಳವಾದ ಒಳನೋಟ ಕೊಟ್ಟ ನಾಟಕವೆಂದರೆ ಕಾಳಿದಾಸನ ಅಭಿಜ್ಞಾನ ಶಾಕುಂತಲ ಎಂದು ಹೊಸಪೇಟೆಯ ಶಂಕರಸಿಂಗ್ ಆನಂದ ಸಿಂಗ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆಂಗ್ಲ ಸಹಾಯಕ ಪ್ರಾಧ್ಯಾಪಕ ಡಾ. ಸಿ. ವೀರೇಂದ್ರ ಪಟೇಲ್ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದ ವತಿಯಿಂದ ಆಯೋಜಿಸಿದ್ದ ‘ಮಹಾಕವಿ ಕವಿರತ್ನ ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕದ ತುಲನಾತ್ಮಕ ಅಧ್ಯಯನ'''' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಯುರೋಪಿನ ಸಾಹಿತ್ಯಕ್ಕಿಂತ ಭಾರತೀಯ ಸಾಹಿತ್ಯ ಶ್ರೇಷ್ಠವಾದದ್ದು. ಈ ಸಾಲಿನಲ್ಲಿ ಕಾಳಿದಾಸನ ಕೃತಿಗಳು ಉನ್ನತ ಸ್ಥಾನದಲ್ಲಿ ನಿಲ್ಲುತ್ತವೆ. ಪ್ರಧಾನವಾಗಿ ಈ ನಾಟಕವು ಶೃಂಗಾರ ರಸದಿಂದ ಅರಳಿಕೊಂಡಿದೆ.
ಈ ಕೃತಿ ಇಂದಿಗೂ ಅನೇಕ ಪ್ರದರ್ಶನಗಳನ್ನು ಕಾಣುತ್ತಿದೆಯಲ್ಲದೆ, ಹೆಚ್ಚು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಮುಖ್ಯಸ್ಥರಾದ ಡಾ. ಮೋನಿಕಾ ರಂಜನ್ ಅವರು, ರಾಜ ದುಷ್ಯಂತನನ್ನು ಪ್ರೀತಿಸುವ ಸುಂದರ ಮತ್ತು ಮುಗ್ಧ ಕನ್ಯೆಯಾದ ಶಕುಂತಲೆಯ ಆಕರ್ಷಕ ಕಥೆಯನ್ನು ಈ ನಾಟಕ ಹೇಳುತ್ತದೆ ಎಂದರಲ್ಲದೆ, ನಾಟಕದಲ್ಲಿ ಬರುವ ವಿವಿಧ ನಾನಾ ಪ್ರಸಂಗಗಳ ಕುರಿತು ಪ್ರಸ್ತಾಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ್ ರೆಡ್ಡಿ ಅವರು, ಕಾಳಿದಾಸನು ಸಂಸ್ಕೃತದಲ್ಲಿ ನಾಟಕ , ಮಹಾಕಾವ್ಯಗಳನ್ನು ಬರೆದು ‘ಭಾರತೀಯ ಶೇಕ್ಸ್‌ಪಿಯರ್'''' ಆಗಿ ಪ್ರಸಿದ್ಧಿ ಪಡೆದು ಅಜರಾಮರವಾಗಿ ಉಳಿದಿದ್ದಾನೆ ಎಂದರು.ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಅಣ್ಣಾರಾವ್, ಎಂ. ಕಲ್ಯಾಣ ಬಸವ ಹಾಗೂ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.