ಸಾರಾಂಶ
ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರಗಳ ಚರ್ಚೆಗಾಗಿ ಜಗಳ ಆಗಬೇಕೇ ವಿನಹಃ ಊಟಕ್ಕಾಗಿ ಅಲ್ಲ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಕ್ಕಿಂತ ಊಟದ ವಿಷಯ ಸಾಹಿತ್ಯ ಗೋಷ್ಠಿಗಳನ್ನು ಆವರಿಸಿಕೊಂಡಿದ್ದು ವಿಪರ್ಯಾಸ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಕುವೆಂಪು ನಾಸ್ತಿಕರಲ್ಲ. ಅವರ ಎಲ್ಲಾ ಕೃತಿಗಳಲ್ಲಿಯೂ ಆಧ್ಯಾತ್ಮದ ಹೊಳವು ಇದೆ. ಕೆಲತಿಳಿಗೇಡಿಗಳು ಆಸ್ತಿಕರಾಗಿದ್ದ ಕುವೆಂಪು ಅವರನ್ನು ನಾಸ್ತಿಕರನ್ನಾಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ ಎಂದರು. 17 ವರ್ಷ ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಯಾಗಿದ್ದ ಕುವೆಂಪು, ತಮ್ಮ ಜೀವಿತದ 85ನೇ ವಯಸ್ಸಿನವರೆಗೂ ಆಶ್ರಮದ ಅನುಯಾಯಿಯಾಗಿದ್ದರು. ಬಂಗಾಳಿ ಭಾಷೆಯಲ್ಲಿದ್ದ ರಾಮಕೃಷ್ಣ ಮಿಷನ್‌ನ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ರಾಮಕೃಷ್ಣ ಪರಮಹಂಸರ ವಿಚಾರ ಧಾರೆಗಳನ್ನು ಜಗತ್ತಿಗೆ ತಿಳಿಯುವಂತೆ ಮಾಡಿದರು.
ಕುವೆಂಪು ಅವರ ದೃಷ್ಟಿಯಲ್ಲಿ ಸೆಕ್ಯೂರಲಿಸಂ ಎಂಬುದಕ್ಕೆ ಬೇರೆಯದೇ ಆರ್ಥವಿದೆ. ಆದರೆ ಇಂದಿಗೂ ನನಗೆ ಸೆಕ್ಯೂಲರಿಸಂ ಮತ್ತು ಮೈನಾರಿಟಿ ಎಂಬುದಕ್ಕೆ ಸರಿಯಾದ ಅರ್ಥ ಗೊತ್ತಿಲ್ಲ ಎಂದು ರಾಜಕೀಯವಾಗಿ ಚರ್ಚೆಯಾಗುತ್ತಿರುವ ಎರಡು ವಿಚಾರಗಳ ಕುರಿತು ಮಾರ್ಮಿಕವಾಗಿ ನುಡಿದರು.ಹೋರಾಟದ ಬದುಕು ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಕೆ.ಜೈ ಪ್ರಕಾಶ್, ಮನುಜ ಮತ, ವಿಶ್ವಪಥದ ಮೂಲಕ ನಾಡಿಗೆ ಹೊಸ ದಿಕ್ಕು ತೋರಿಸಿದ ಕುವೆಂಪು ವಿಶ್ವಮಾನ್ಯರು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಬಿ. ಜ್ಯೋತಿಗಣೇಶ ಮಾತನಾಡಿ, ಕುವೆಂಪು ನಗರದ ನಿವಾಸಿಗಳಿಗೆ ತೊಂದರೆಯಾದಾಗ ಅಂದು ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಆಗಿದ್ದ ಕೆ.ಜೈಪ್ರಕಾಶ್ ಕಾನೂನಾತ್ಮಕ ಹೋರಾಟ ನಡೆಸಿ, ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶ ಹಿಂಪಡೆಯುವಂತೆ ಮಾಡುವ ಮೂಲಕ ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡಿದ್ದಾರೆ ಎಂದರು. ಕುವೆಂಪು ನಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ. ಬಸವೇಗೌಡ ಮಾತನಾಡಿ ತುಮಕೂರು ನಗರಪಾಲಿಕೆಯಿಂದ ಸತತ ಎರಡು ಬಾರಿ ಉತ್ತಮ ಬಡಾವಣೆ ಎಂಬ ಪ್ರಶಸ್ತಿ ಪಡೆದಿದೆ. ಬಡಾವಣೆಯಲ್ಲಿ ಪುಟ್ಟಾಂಜನೇಯ ಮತ್ತು ವರಸಿದ್ದಿ ವಿನಾಯಕ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, ಸರಕಾರದ ಸಹಕಾರ ಅಗತ್ಯವಾಗಿದೆ. ಜೊತೆಗೆ, ಹೈಕೋರ್ಟಿನ ತೀರ್ಪಿನಿಂದ ಒತ್ತುವರಿ ತೆರವುಗೊಂಡಿರುವ ನೇತಾಜಿ ಪಾರ್ಕಿನ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೋರಿದರು. ಕುವೆಂಪು ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ಶ್ರೀನಿವಾಸ್ ವರದಿ ಮಂಡಿಸಿದರು. ಒತ್ತುವರಿಯಾಗಿದ್ದ ಪಾರ್ಕ್ ತೆರವಿಗೆ ಹೈಕೋರ್ಟಿನಲ್ಲಿ ಕುವೆಂಪು ನಗರದ ಪರವಾಗಿ ವಕಾಲತ್ತು ವಹಿಸಿದ್ದ ವಕೀಲರಾದ ಬಿ.ಎನ್. ಜಗದೀಶ್ ಬಾಬು, ಕೆ. ವೆಂಕಟಸುಧೀರ್,ಎಂ.ಎಚ್.ಪ್ರಕಾಶ್, ಜಿ.ಎನ್.ನಾರಾಯಣ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಮಾಜಿ ಮೇಯರ್ ಲಲಿತ ರವೀಶ್, ಡಾ.ಜಿ.ವೆಂಕಟೇಶ್, ಸಂಘದ ಕಾರ್ಯದರ್ಶಿ ಆರ್.ಎಸ್. ಚಂದ್ರಶೇಖರರಾವ್, ಬಿ.ರಾಜಣ್ಣ, ಬಿ. ರಾಜಶೇಖರಯ್ಯ,ಕೆ.ಗುಂಡಪ್ಪ, ಎನ್.ಜಿ. ಮಹಲಿಂಗಪ್ಪ,ವಿಶ್ವನಾಥಸ್ವಾಮಿ ಸೇರಿದದಂತೆ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನಡೆಯಿತು. ಕಲಾಸಿರಿ ಸಾಂಸ್ಕೃತಿಕ ವೇದಿಕೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗಣ್ಯರು ಉದ್ಘಾಟಿಸಿದರು.