ಸಾರಾಂಶ
ಗೋಕರ್ಣ: ಪುಣ್ಯ ಕ್ಷೇತ್ರದಲ್ಲಿ ಭದ್ರಕಾಳಿ ಮತ್ತು ಪರಿವಾರ ದೇವರ ಬಂಡಿಹಬ್ಬ ಪ್ರಾರಂಭವಾಗಿದ್ದು, ನಿತ್ಯ ದೇವರ ಕಲಶ ತೆರಳುವುದು ಹಾಗೂ ಸಂಜೆ ಇಲ್ಲಿನ ಆಡುಕಟ್ಟೆಯಲ್ಲಿ ನಡೆಯುವ ಮುಖ ಹಬ್ಬ ಅಂದರೆ ಮುಖ ನರ್ತನ ಆಕರ್ಷಣೀಯ.
ಉತ್ತರ ಕನ್ನಡದ ದೈವಗಳ ಆರಾಧನಾ ಕ್ರಮ ಬಹು ವಿಶೇಷ! ಅದೊಂದು ಹೊಸ ಪರ್ಯಾಯ ಜಗತ್ತು. ಅಲ್ಲಿ ಭಕ್ತಿ, ಭಾವ, ಶ್ರದ್ಧೆ, ನೀತಿ, ನಿಯಮ, ಸಂಸ್ಕಾರ, ಸಂಸ್ಕೃತಿಗೆ ಉನ್ನತ ಸ್ಥಾನ. ಇಂತಹ ದೈವಾರಾಧನೆಯ ಕ್ರಮವಾದ ಬಂಡಿಹಬ್ಬದ ಮುನ್ನಾ ದಿನಗಳಲ್ಲಿ ನಡೆಯುವ ವಿಶೇಷ ಆಚರಣೆಯೇ ಮುಖ ಕುಣಿತ.ಮುಖ ಕುಣಿತ ಎಂದರೆ ಯಾವ ರೀತಿ ದಕ್ಷಿಣ ಕರಾವಳಿಯಲ್ಲಿ ದೈವದ ಪಾತ್ರ ಹಾಕಿಕೊಳ್ಳುವವರು ಮುಖಕ್ಕೆ ಆಯಾ ಬಣ್ಣ ಬಳಿದುಕೊಳ್ಳುತ್ತಾರೋ ಹಾಗೆಯೇ ಇಲ್ಲಿ ಉತ್ತರ ಕರಾವಳಿಯಲ್ಲಿ ಆಯಾ ದೈವಗಳಿಗೆ ಆಯಾ ಬಣ್ಣದ ಮರದ ಮುಖಗಳಿವೆ. ಅದನ್ನೆಲ್ಲ ದೈವದ ಪರಿಚಾರಕನಾದ ಗುನಗನು ಮುಖ್ಯದೇವರ ಮುಂದೆ ಆಡಿಸುವುದು ಪದ್ಧತಿ. ಅದು ಪರಿವಾರ ದೈವಗಳು ಮುಖ್ಯ ದೈವಕ್ಕೆ ಕೊಡುವ ಗೌರವವೂ ಹೌದು!
ಮೊದಲು ಭದ್ರಕಾಳಿ ದೇವಸ್ಥಾನದಿಂದ ಭದ್ರಕಾಳಿ ದೈವ ಊರಿನ ಮೆರವಣಿಗೆ ತೆರಳುತ್ತದೆ. ಹೊಸಬ ದೈವದ ಗುಡಿಯಿಂದ ಕಳಸದ ಮನೆಗೆ ಬಂದು ಆಡುಕಟ್ಟೆಯಲ್ಲಿ ಮುಖ ಆಡಿಸಲು ಅಪ್ಪಣೆ ಕೊಡುತ್ತದೆ.ಭದ್ರಕಾಳಿ ದೈವಕ್ಕೆ ನಾಲ್ಕೈದು ಪರಿವಾರದೈವಗಳಿವೆ. ಅವು ಮಾಣೇಶ್ವರ, ಚಂಡ, ಮುಂಡ ಹಾಗೂ ದೇವತೆ (ಸ್ಮಶಾನ ಕಾಳಿ) ಇವುಗಳ ತದ್ರೂಪವಾದ ಮುಖವಾಡವನ್ನು ಮರದಿಂದ ತಯಾರಿಸಿ 250 ವರ್ಷಗಳ ತನಕ ಕಾದಿಟ್ಟಿದ್ದಾರೆ. ಅದು ಬಂಡಿಹಬ್ಬದ ಆಚರಣೆಯ ದಿನದಲ್ಲಿಯೇ ಹೊರ ತೆಗೆಯಲ್ಪಡುವುದು. ಈ ಮರದ ಮುಖವಾಡಗಳು ಹಾಲಿ ಮರದ ಚಕ್ಕೆಯಿಂದ ತಯಾರಿಸಲ್ಪಡುತ್ತವೆ. ಹೀಗೆ ಮುಖವಾಡ ಹೊರ ತೆಗೆಯುವ ಮುನ್ನ ಅದನ್ನು ಬಿಳಿ ಬಟ್ಟೆಯಲ್ಲಿ ಮುಚ್ಚಿ ಊರ ಹೊರಗಿನ ಗಡಿಯಲ್ಲಿ ಬಲಿ ನೀಡುತ್ತಾರೆ. ಬಲಿ ನೆರವೇರಿದ ಬಳಿಕ ದೈವದ ಕಳಸದ ಮುಂದೆ ಬಂದು ಪ್ರತೀ ಮರದ ಮುಖವಾಡಕ್ಕೂ ಭದ್ರಕಾಳಿ ದೈವದ ಕಳಸ ಹೊತ್ತ ಗುನಗರು ಅಕ್ಷತೆ ಹಾಕಿ ಮುಖ ಕುಣಿತಕ್ಕೆ ಚಾಲನೆ ಕೊಡುತ್ತಾರೆ. ಒಂದಾದ ಮೇಲೊಂದರಂತೆ ಕೈಯಲ್ಲಿ ಖಡ್ಗದಾಕೃತಿಯ ಕೋಲು ಹಿಡಿದು ಮುಖವನ್ನು ದೈವದ ಪರಿಚಾರಕ ಗುನಗರು ಆಡಿಸುತ್ತಾರೆ.
ಗೋಕರ್ಣದಲ್ಲಿ ಕಳಸದ ಗುನಗರು ಕಳಸ ಹೊತ್ತರೆ, ರವಿ ಗುನಗ ಹಾಗೂ ಅವರ ತಂದೆ ಪೂಜೆ ಮಾಡುತ್ತಾರೆ ಹಾಗೆಯೇ ಸುಬ್ರಾಯ ಗುನಗ ಮುಖ ಕುಣಿತವೆಂಬ ಈ ದೈವ ನರ್ತನವನ್ನು ಮಾಡುತ್ತಾರೆ. ಇದು ಇಲ್ಲಿನ ವಿಶೇಷ ಹಾಗೂ ಆಸಕ್ತಿಕರ ಆಚರಣೆಯಾಗಿದೆ.ಹನೇಹಳ್ಳಿ ಬಂಡಿಹಬ್ಬದ ದೇವಿ ಕಲಶ: ಹನೇಹಳ್ಳಿಯ ಶ್ರೀ ಗ್ರಾಮದೇವಿಯ ಬಂಡಿ ಪ್ರಯುಕ್ತ ದೇವಿ ಕಲಶ ಇಲ್ಲಿನ ಮುಖ್ಯ ಕಡಲತೀರದ ಬಳಿಯ ಪರ್ವತದ ಮೇಲಿರುವ ಮಾಣೇಶ್ವರ ಮಂದಿರಕ್ಕೆ ಶುಕ್ರವಾರ ಸಂಜೆ ಆಗಮಿಸಿ ಪೂಜೆ ಸ್ವೀಕರಿಸಿತು. ನಂತರ ಮಹಾಗಣಪತಿ, ಮಹಾಬಲೇಶ್ವರ, ಭದ್ರಕಾಳಿ ಮಂದಿರ ಸಂದರ್ಶಿಸಿ ಮರಳಿತು. 26 ವರ್ಷಗಳ ನಂತರ ನಡೆದ ಈ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಶ್ರೀ ದೇವಿಯ ಕಲಶ ಮಧ್ಯಾಹ್ನ ಹನೇಹಳ್ಳಿಯ ಕಳಸದ ಮನೆಯಿಂದ ಹೊರಟು, ಬಿಜ್ಜೂರು ಮಾರ್ಗವಾಗಿ ಗೋಕರ್ಣದ ಗಂಜಿಗದ್ದೆ, ರಥಬೀದಿಯ ಮಾರ್ಗವಾಗಿ ಶ್ರೀ ಮಾಣೇಶ್ವರ ದೇವಸ್ಥಾನಕ್ಕೆ ಆಗಮಿಸಿತ್ತು. ಐದು ಕಿ.ಮೀ. ಹೆಚ್ಚು ದೂರ ಸಾಗಿ ಬಂದು ಪುನಃ ತೆರಳಿದ್ದು ವಿಶೇಷವಾಗಿತ್ತು. ಈ ಮಾರ್ಗದ ನಿವಾಸಿಗಳು ರಂಗೋಲಿ ಬಿಡಿಸಿ ಮಾವಿನ ತೋರಣದಿಂದ ಸಿಂಗರಿಸಿ ಕಲಶಕ್ಕೆ ಆರತಿ ನೀಡಿ ವಂದಿಸಿದರು. ಅಲ್ಲದೇ ತಮ್ಮ ಕಷ್ಟಗಳು, ತೊಂದರೆಯನ್ನು ದೇವಿಯಲ್ಲಿ ನಿವೇದಿಸಿ ಪರಿಹಾರ ಕೇಳಿಕೊಂಡರು. 21ರಂದು ಬಂಡಿ ಹಬ್ಬ ಹಾಗೂ 22ರಂದು ಹರಕೆ ಸೇವೆ ನಡೆಯುವ ಮೂಲಕ ಹಬ್ಬಕ್ಕೆ ತೆರೆಬೀಳಲಿದೆ.