ಸಾರಾಂಶ
ಸಿರಿಗೆರೆ: ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ತುರೆಬೈಲು ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ ಜೀವಂತವಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಜಾಗೃತಿ ಮೂಡಿಸುವ ಯತ್ನ ನಡೆಯಿತು.ಇಲಾಖೆ ಅಧಿಕಾರಿಗಳು ತುರೆಬೈಲು ಗೊಲ್ಲರಹಟ್ಟಿಗೆ ಭೇಟಿ ನೀಡಿದಾಗ ತಿಂಗಳ ಮುಟ್ಟಾದ ಮಹಿಳೆಯನ್ನು ಮನೆಯಿಂದ ಹೊರ ಹಾಕಿ ಪ್ರತ್ಯೇಕವಾಗಿ ಜೀವಿಸುವ ಅವಕಾಶ ಕಲ್ಪಿಸಿದ ದೃಶ್ಯ ಕಂಡು ಬಂದಿತು. ಈ ಸಂಬಂಧ ಸಾರ್ವಜನಿಕ ಸಭೆ ಏರ್ಪಾಡು ಮಾಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.
ಜೀವ ವಿಕಾಸ ಕ್ರಿಯೆಯಲ್ಲಿ ಮುಟ್ಟಾಗುವಿಕೆ ನೈಸರ್ಗಿಕ ಕ್ರಿಯೆ. ದೈಹಿಕವಾಗಿ ಮಹಿಳೆಗೆ ದೊರೆತ ವರವದು. ಸಮಸ್ತ ಮಹಿಳೆಯರಿಗೆ ಮುಟ್ಟಾಗುವಿಕೆ ನಿಂತರ. ಆದರೆ ಮಹಿಳೆ ಮುಟ್ಟಾಗುವುದನ್ನೇ ಪಾಪ ಎನ್ನುವಂತೆ ನೋಡುವ ಅಮಾನುಷ ಮೌಢ್ಯಾಚರಣೆ ಗೊಲ್ಲರಹಟ್ಟಿಗಳಲ್ಲಿ ಬೆಳೆದು ಬಂದಿರುವುದು ವಿಷಾಧದ ಸಂಗತಿ. ಮುಟ್ಟಾದ ಸಂದರ್ಭದಲ್ಲಿ ಹೆಚ್ಚಿನ ಕಾಳಜಿಯ ಅವಶ್ಯಕತೆ ಇರುತ್ತದೆ. ಆದರೆ ಮುಟ್ಟಾದ ಮಹಿಳೆಯನ್ನು ಕಳಂಕಿತೆ ಎನ್ನುವಂತೆ ನೋಡುವ ಮನೋಭಾವ ತಳೆವುದು ಸರಿಯಲ್ಲವೆಂದು ಮನವರಿಕೆ ಮಾಡಾಯಿತು.ಈ ವೇಳೆ ಮಾತನಾಡಿದ ಲಿಂಗತಜ್ಞೆ ಡಿ.ಗೀತಾ, ಇಂತಹ ಅನಿಷ್ಠ ಪದ್ಧತಿ 21ನೇ ಶತಮಾನದ ಕಾಲಾಯುಷ್ಯ ಮುಗಿಯುವ ಹಂತ ಬಂದರೂ, ಇನ್ನೂ ಗಟ್ಟಿಯಾಗಿರುವುದು ಭಾರತೀಯ ಸಮಾಜದಲ್ಲಿ ಸಾಮಾಜಿಕ ಚಲನೆಯ ಮಂದಗತಿಗೆ ಹಿಡಿದ ಕೈಗನ್ನಡಿ. ಸ್ವಾಂತ್ರತ್ಯ, ಆಧುನಿಕತೆ, ವಿದ್ಯುತ್, ಟಿವಿ., ರಸ್ತೆ ಸಂಪರ್ಕ ಗೊಲ್ಲರಹಟ್ಟಿಗಳಿಗೆ ತಲುಪಿದೆ. ಆದರೆ ಮೌಢ್ಯವನ್ನೇ ಸಂಪ್ರದಾಯ ಎಂದು ಇನ್ನೂ ಭಾವಿಸಿರುವುದು ದುರಂತದ ಸಂಗತಿ ಎಂದು ಹೇಳಿದರು. ಇಂತಹ ಅನಿಷ್ಠ ಮೌಢ್ಯಾಚಾರಣೆಯನ್ನು ತೊಡದು ಹಾಕಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆಗಳು ಸತತವಾಗಿ ಪ್ರಯತ್ನ ಪಡುತ್ತಿವೆ. ಇದರ ಅಂಗವಾಗಿಯೇ ತುರೆಬೈಲು ಗೊಲ್ಲರಹಟ್ಟಿಯಲ್ಲಿ ಮೌಢ್ಯ ಪದ್ಧತಿ ಹಾಗೂ ಆಚರಣೆಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ನಾವುಗಳು ಗ್ರಾಮಕ್ಕೆ ಆಗಮಿಸಿದಾಗ ಮುಟ್ಟಾದ ಮಹಿಳೆ ಅಂಗನವಾಡಿ ಆವರಣದಲ್ಲಿ ಇರುವುದು ಕಂಡು ಬಂದಿತ್ತು. ನಿರಾಶ್ರಿತರ ರೀತಿ, ತಟ್ಟೆ, ಲೋಟ, ಹೊದಿಕೆಯೊಂದಿಗೆ ಚಳಿಯಲ್ಲಿ ಮಹಿಳೆ ವಾಸ್ತವ್ಯ ಹೂಡಿದ್ದಳು. ಈ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ ಹಲವಾರು ವರ್ಷಗಳಿಂದ ಈ ಪದ್ಧತಿ ಆಚರಿಸಿಕೊಂಡು ಬಂದಿದ್ದೇವೆ. ಊರಿನಲ್ಲಿ ಯಾವುದೇ ಹೆಣ್ಣು ಮಗಳು ಋತುಮತಿಯಾದರೆ, ಮುಟ್ಟಾದರೆ ಹಾಗೂ ಹೆರಿಗೆ ಆದರೆ ಪದ್ಧತಿ ಪ್ರಕಾರ ಆ ಮಹಿಳೆ ಮನೆಯನ್ನು ತೊರೆದು ಬಯಲಲ್ಲಿ ವಾಸಿಸುವುದು ವಾಡಿಕೆಯಾಗಿದೆ ಎಂದು ಉತ್ತರಿಸಿದರು. ಇದೇ ಪದ್ಧತಿ ಮುಂದುವರಿಸಿದ್ದೇ ಆದಲ್ಲಿ ಅಧಿಕಾರಿಗಳು ಆಪ್ತ ಸಮಾಲೋಚನೆ ನಡೆಸಿ ಪೊಲೀಸ್ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಗ್ರಾಮದಲ್ಲಿ ಇಂತಹ ಅನಿಷ್ಟ ಪದ್ಧತಿಗಳು ಕಂಡುಬಂದರೆ, ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಪೊಲೀಸ್ ಸಹಾಯವಾಣಿ 112 ಕರೆ ಮಾಡುವಂತೆ ಗ್ರಾಮಸ್ಥರಿಗೆ ತಿಳಿಸಿದರು.ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕರ ನಿಷೇಧ ಕಾಯ್ದೆ, ಫೋಕ್ಸೋ ಕಾಯಿದೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸೇರಿದಂತೆ, ಬಾಲ ತಾಯಂದಿರು, ಸುರಕ್ಷಿತ ಸ್ಪರ್ಶ, ಅಸುರಕ್ಷಿತ ಸ್ಪರ್ಶ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಇದೇ ವೇಳೆ ರಾಷ್ಟ್ರೀಯ ಐಕ್ಯತ ಸಪ್ತಾಹ ಅಂಗವಾಗಿ ಪ್ರಮಾಣ ವಚನ ಬೋಧಿಸಲಾಯಿತು.
ಗ್ರಾಪಂ ಅಧ್ಯಕ್ಷೆ ರಾಧ, ಆರೋಗ್ಯ ಅಧಿಕಾರಿ ಸಾಧಿಕ್, ಪೊಲೀಸ್ ಇಲಾಖೆ ತಿಪ್ಪೇಸ್ವಾಮಿ, ಹಿರಿಯ ಆರೋಗ್ಯ ಸಹಾಯಕಿ ಕಮಲಮ್ಮ, ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ, ಗ್ರಾಮದ ದೇವಸ್ಥಾನದ ಪೂಜಾರಿ ಮಾರಪ್ಪ ಉಪಸ್ಥಿತರಿದ್ದರು.