ಸಾರಾಂಶ
ರಾಮನಗರ: ಮಂಚನಬೆಲೆ ಎಡ ಮತ್ತು ಬಲದಂಡೆ ನಾಲೆಗಳು ಅಭಿವೃದ್ಧಿ ಕಂಡಿದ್ದು, ಜನವರಿ 15ರ ಬಳಿಕ ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ತಾಲೂಕಿನ ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಂಚನಬೆಲೆ ಎಡ ಮತ್ತು ಬಲದಂಡೆ ನಾಲೆಗಳು 20 ಕಿ.ಮೀ. ಅಭಿವೃದ್ಧಿ ಕಂಡಿದೆ. ರೈತರ ಕಷ್ಟ ನನಗೆ ಗೊತ್ತಿದೆ. ರೈತನ ಮಗನಾಗಿ ರೈತರ ಹಿತ ಕಾಯುವುದು ನನ್ನ ಕರ್ತವ್ಯ. ನೀರಾವರಿ ಇದ್ದರೆ ರೈತನ ಬಾಳು ಬಂಗಾರ ಆಗುತ್ತದೆ. ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ರೇಷ್ಮೆ, ಹೈನುಗಾರಿಕೆ ಅವಲಂಬಿಸಿದ್ದಾರೆ. ನೀರಾವರಿ ಸೌಲಭ್ಯಕ್ಕೂ ಒತ್ತು ನೀಡಲಾಗಿದ್ದು, ಸುಮಾರು 25 - 30 ವರ್ಷಗಳಿಂದಲೂ ಮಂಚನಬೆಲೆ ಎಡ ಮತ್ತು ಬಲ ದಂಡೆ ನಾಲೆಗಳಲ್ಲಿ ಒಂದು ತೊಟ್ಟು ನೀರು ಹರಿದಿಲ್ಲ. ಈಗ ನಾಲೆಗಳು ಜೀವಕಳೆ ಪಡೆದುಕೊಂಡಿವೆ ಎಂದು ತಿಳಿಸಿದರು.ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಕಸಬಾ ಕೈಲಾಂಚ ಹೋಬಳಿಯಲ್ಲಿ ಈಗಾಗಲೇ 50 ಕೋಟಿ ರಸ್ತೆ, ಚರಂಡಿ ಅಭಿವೃದ್ಧಿ ಆಗಿದೆ. ಪ್ರಸ್ತುತ 20 ಕೋಟಿ ಅನುದಾನ ಬಂದಿತ್ತು. ಪ್ರತೀ ಗ್ರಾಪಂ ವ್ಯಾಪ್ತಿಯ ಕೆರೆ, ಕುಂಟೆ, ರಸ್ತೆ, ಚರಂಡಿ ಅಭಿವೃದ್ಧಿಗೆ ಅನುದಾನ ಬಳಸಲಾಗುತ್ತಿದೆ. ಸುಗ್ಗನಹಳ್ಳಿ ಗ್ರಾಪಂನಲ್ಲಿ ವಿಶೇಷ ಅನುದಾನ ಸೇರಿದಂತೆ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ನದಿಯಲ್ಲಿ ಹೆಚ್ಚಿನ ನೀರು ಬಂದು ಹಾನಿಯಾಗಿದ್ದ ಸುಗ್ಗನಹಳ್ಳಿ ಅರ್ಕಾವತಿ ನದಿ ಸೇತುವೆ ನಿರ್ಮಾಣ ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಮತ್ತಷ್ಟು ಭಾಗಗಳಲ್ಲಿ ಸೇತುವೆ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗಿದೆ.ಬಸವ ವಸತಿ ಯೋಜನೆಯಲ್ಲಿ ಕ್ಷೇತ್ರಕ್ಕೆ 3 ಸಾವಿರ ಮನೆ ಮಂಜೂರಾಗಿದೆ. ಪ್ರತೀ ಗ್ರಾಪಂನಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಹಂತಹಂತವಾಗಿ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗುತ್ತಿವೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದ್ದು ಕ್ಷೇತ್ರದ ಜನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಬನ್ನೇರುಘಟ್ಟದಿಂದ ಕಾವೇರಿ ವನ್ಯಜೀವಿಧಾಮದವರೆಗೆ ರೈಲ್ವೆ ಬ್ಯಾರಿಕೇಡ್ ಕೆಲಸ ಆಗುತ್ತಿದೆ. ಮಾಜಿ ಸಂಸದ ಡಿ.ಕೆ. ಸುರೇಶ್ ಅದಕ್ಕೆ ಪರಿಶ್ರಮ ಹಾಕಿದ್ದರು. ಕೆಲವೇ ದಿನಗಳಲ್ಲಿ ಕೆಲಸ ಮುಗಿಯಲಿದ್ದು ಆನೆಗಳು ಇತ್ತ ಬರದಂತಾಗುತ್ತವೆ. ಹಂದಿಗೊಂದಿ, ತೆಂಗಿನಕಲ್, ಚಿಕ್ಕಮಣ್ಣುಗುಡ್ಡೆ ಪ್ರದೇಶದಲ್ಲಿ ಆನೆಗಳ ಕಾಟವಿದೆ. ಈಗಾಗಲೇ ಆನೆ ಕಾರ್ಯಪಡೆ ಮತ್ತು ಜಿಲ್ಲೆಯ ಅರಣ್ಯ ಸಿಬ್ಬಂದಿ ಮುಖಾಂತರ ಪ್ರತಿದಿನ ಆನೆಗಳ ಕಾರ್ಯಾಚರಣೆ ನಡೆಯುತ್ತಿದೆ. ಜೊತೆಗೆ ಶುಕ್ರವಾರ ವಿಪರೀತ ಕಾಟ ನೀಡುತ್ತಿದ್ದ ಟಸ್ಕರ್ ಪುಂಡಾನೆ ಸೆರೆಯಿಡಿಯಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿದೆ. ನಮ್ಮದು ಶಿಸ್ತಿನ ಪಕ್ಷ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ಪಕ್ಷದ ಮುಖಂಡರು ಕುಳಿತು ತೀರ್ಮಾನಿಸುತ್ತೇವೆ. ಜೊತೆಗೆ ಜೆಡಿಎಸ್‌ನ ನಾಲ್ಕು ಸದಸ್ಯರು ನಮ್ಮ ಜೊತೆ ಬಂದಿದ್ದಾರೆ. ಪಕ್ಷದ ವತಿಯಿಂದ ಒಮ್ಮತದ ಅಭ್ಯರ್ಥಿಯಾಗುತ್ತಾರೆ ಎಂದು ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.
ಮಾಜಿ ಶಾಸಕ ಕೆ. ರಾಜು, ಕೆಎಂಎಫ್ ಮಾಜಿ ಅಧ್ಯಕ್ಷ ಪಿ ನಾಗರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್. ರಾಜು, ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಉಪಾಧ್ಯಕ್ಷ ಚಿಕ್ಕಸ್ವಾಮಿ, ಮುಖಂಡರಾದ ಪ್ರಾಣೇಶ್, ಪ್ರಭಣ್ಣ, ರಾಮಯ್ಯ, ಆಂಜನಪ್ಪ, ಬೈರೇಗೌಡ, ಉಮಾಶಂಕರ್, ವಾಸು, ಕಗ್ಗಲ್ಲಪ್ಪ, ಮುಕುಂದ, ಗಂಗಾಧರ್, ವೆಂಕಟಪ್ಪ, ಲೋಕೇಶ್, ಮರಿಸ್ವಾಮಿ, ಗೋವಿಂದಯ್ಯ, ಮಲ್ಲೇಶ್, ಪ್ರಕಾಶ್, ಚಿನ್ನಗಿರಯ್ಯ, ನಾಗರಾಜು, ಗೋವಿಂದ, ಅನಿಲ್ ಜೋಗಿಂದರ್, ಶ್ರೀನಿವಾಸ್, ರೇವಣ್ಣ, ಹರೀಶ್‌ಕುಮಾರ್ ತಾಪಂ ಇಓ ಪ್ರದೀಪ್, ಕೆಆರ್‌ಐಡಿಎಲ್ ಎಇಇ ಲಕ್ಷ್ಮೀ, ಗ್ರಾಮೀಣ ನೀರು ಸರಬರಾಜು ಎಇಇ ಜೈಪ್ರಕಾಶ್ ಹಾಜರಿದ್ದರು.21ಕೆಆರ್ ಎಂಎನ್ 5.ಜೆಪಿಜಿ
ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿಪೂಜೆ ನೆರವೇರಿಸಿದರು.