ಸಂಗೀತ ಕ್ಷೇತ್ರದಲ್ಲಿ ಪಂ. ಪುಟ್ಟರಾಜರದ್ದು ಮೇರು ವ್ಯಕ್ತಿತ್ವ: ಮೃತ್ಯುಂಜಯ

| Published : Mar 10 2024, 01:46 AM IST

ಸಂಗೀತ ಕ್ಷೇತ್ರದಲ್ಲಿ ಪಂ. ಪುಟ್ಟರಾಜರದ್ದು ಮೇರು ವ್ಯಕ್ತಿತ್ವ: ಮೃತ್ಯುಂಜಯ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಪುಟ್ಟರಾಜ ಗವಾಯಿಗಳ 106ನೇ ಜನ್ಮದಿನೋತ್ಸವ ನಿಮಿತ್ತ ಗೊಲ್ಲರಹಳ್ಳಿಯಲ್ಲಿ ಸಂಗೀತ ಸುದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಲವು ಕಲಾವಿದರು ಭಾಗವಹಿಸಿದ್ದರು.

ಮರಿಯಮ್ಮನಹಳ್ಳಿ: ಸಂಗೀತ, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ಡಾ. ಪುಟ್ಟರಾಜ ಗವಾಯಿಗಳ ಸೇವೆ ಅನನ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಬಿ.ಎಂ.ಎಸ್‌. ಮೃತ್ಯುಂಜಯ ಹೇಳಿದರು. ಇಲ್ಲಿಗೆ ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಹೊಸಪೇಟೆಯ ಶ್ರೀಗುರು ಪುಟ್ಟರಾಜ ಸಂಗೀತ ಸಾಧಕರ ಬಳಗ ಹಾಗೂ ಗೊಲ್ಲರಹಳ್ಳಿ ಗ್ರಾಮದ ದೈವಸ್ಥರ ಸಹಯೋಗದಲ್ಲಿ ಪದ್ಮಭೂಷಣ, ನಾಡೋಜ ಪುಟ್ಟರಾಜ ಕವಿ ಗವಾಯಿಗಳವರ 106ನೇ ಜನ್ಮದಿನೋತ್ಸವ ಸಂಗೀತ ಸುದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗವಾಯಿಗಳು ಅಂಧರ ಬಾಳಿನ ಬೆಳಕಾಗಿ ವಿಶೇಷಚೇತನರಲ್ಲಿ ಬದುಕಿನ ಚಿಲುಮೆ ಹೊರ ಹೊಮ್ಮಿಸಿದವರಾಗಿದ್ದಾರೆ ಎಂದು ಹೇಳಿದರು.ಸಂಗೀತ ಕ್ಷೇತ್ರದಲ್ಲಿ ಪಂ. ಪುಟ್ಟರಾಜ ಗವಾಯಿಗಳವರದ್ದು ಮೇರು ವ್ಯಕ್ತಿತ್ವ. ಅಪ್ರತಿಮ ಚೇತನಾಶೀಲರಾಗಿದ್ದರು. ಅನಾಥ ಮತ್ತು ಅಂಧ ಮಕ್ಕಳಿಗೆ ಸಂಗೀತ ವಿದ್ಯಾಭ್ಯಾಸ ಮಾಡಿಸುವ ಮೂಲಕ ಅವರ ಬಾಳಲ್ಲಿ ಅದಮ್ಯ ಚೇತನ ತುಂಬಿದ್ದರು. ಇಂದಿಗೂ ಸಹಿತ ಸಾವಿರಾರು ಅಂಧರ ಬಾಳು ಅವರ ಆಶ್ರಮದಲ್ಲಿ ವಿಕಸಿತಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು. ಸಂಗೀತದ ಮೂಲಕ ಮಾನವೀಯತೆ ಹಾಗೂ ಸರಳತೆಯನ್ನು ಬದುಕಿನುದ್ದಕ್ಕೂ ಪಸರಿಸಿದ ಪುಟ್ಟರಾಜ ಗವಾಯಿಗಳು ಸಾವಿರಾರು ಗಾಯಕರಿಗೆ ಸಂಗೀತ ಕಲಿಸಿಕೊಟ್ಟಿದ್ದಾರೆ. ನಾಡಿನಲ್ಲಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಡಾ. ಪುಟ್ಟರಾಜ ಗವಾಯಿಗಳಂತಹ ಮಹಾತ್ಮರನ್ನು ಪಡೆದಿದ್ದು ನಾಡಿನ ಪುಣ್ಯವಾಗಿದೆ ಎಂದು ಅವರು ಹೇಳಿದರು.

ಅಂಧ, ಅನಾಥರ ಪಾಲಿಗೆ ಡಾ. ಪುಟ್ಟರಾಜ ಗವಾಯಿಗಳು ದೇವರಾಗಿದ್ದ ಗವಾಯಿಗಳು ಹಲವು ಭಾಷೆಗಳಲ್ಲಿ ಪರಿಣತರಾಗಿದ್ದರು. ಸ್ವತಃ ಸಂಗೀತ ಕಲಾವಿದರಾಗಿದ್ದು, ಶಿಷ್ಯರಿಗೆ ಸಂಗೀತ ಕಲಿಸುವ ಮೂಲಕ ಅಪಾರ ಶಿಷ್ಯ ಬಳಗವನ್ನು ಸೃಷ್ಟಿಸಿದ್ದು, ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು. ಹಾರುವನಹಳ್ಳಿಯ ಓಂಪುರಿ ಆಶ್ರಮದ ರವೀಂದ್ರ ಪರಮಹಂಸರು (ಸೂಡಿ) ಸಾನ್ನಿಧ್ಯವಹಿಸಿದ್ದರು. ಗೊಲ್ಲರಹಳ್ಳಿಯ ಯಜಮಾನ ಕೊಮಾರೆಪ್ಪ ಅಧ್ಯಕ್ಷತೆವಹಿಸಿದ್ದರು.

ಗೊಲ್ಲರಹಳ್ಳಿಯ ಸಂಗೀತ ಕಲಾವಿದ ಕೆ. ತಿಪ್ಪಣ್ಣಾಚಾರ್‌, ಡಣಾಯಕನಕೆರೆ ಗ್ರಾಪಂ ಅಧ್ಯಕ್ಷ ಚಿನ್ನಾಪುರಪ್ಪ ಭಾಗವಹಿಸಿದ್ದರು.ಸಂಗೀತ ಕಲಾವಿದರಾದ ಹೊಸಪೇಟೆಯ ಎಚ್‌. ಪುಷ್ಪಾವತಿ, ಡಣಾಪುರ ಈ. ಪುನೀತ್‌, ಸಮರ್ಥ ಮ್ಯಾಗಳಮಠ, ಕೆ. ಸಾಯಿಸಮರ್ಥ, ಚೇತನರೆಡ್ಡಿ ಹ್ಯಾಟಿ, ಹೊಸಪೇಟೆಯ ವೀರೇಶ್‌ ಹಿಟ್ನಾಳ್‌, ಜಿ. ನಾಗಪುರದ ಪ್ರಕಾಶ್‌ ಬಡಿಗೇರ್‌, ಹೊಸಪೇಟೆಯ ಮಹೇಶ್‌ ಆಚಾರ್‌ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಬಿ. ಸಂಜನಾ ಹಾಗೂ ವೈಷ್ಣವಿ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.