ಸಾರಾಂಶ
ಕಲಗಾರು ಲಕ್ಷ್ಮೀನಾರಾಯಣ ಹೆಗಡೆ
ತಾಳಗುಪ್ಪ : ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಡಕೆ ತೋಟಕ್ಕೆ ಗುಂಪು ಗುಂಪಾಗಿ ಬಂದು ಎಳೆಯ ಅಡಕೆ ಮಿಡಿಗಳನ್ನು ಸೀಪುತ್ತಿದ್ದ ಮಂಗಗಳು ಈ ವರ್ಷ ಎಳೆಯ ಸಿಂಗಾರಗಳಿಗೆ ಕೈ ಹಚ್ಚಿರುವುದು ಕಂಡು ಬಂದಿದೆ. ಮಂಗಗಳ ಈ ಹೊಸ ಅಭ್ಯಾಸದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಜೂನ್ ಜುಲೈ ತಿಂಗಳಿನಲ್ಲಿ ಹತ್ತರಿಂದ ಇಪ್ಪತ್ತು ಮಂಗಗಳ ತಂಡದಲ್ಲಿ ಧಾವಿಸಿ ಬರುವ ಮಂಗಗಳು ಮರದ ಮೇಲೆ ಕುಳಿತು ಯಾವ ಬೆದರಿಕೆಗೂ ಬಗ್ಗದೆ, ಗೊನೆಯಿಂದ ಅಡಕೆ ಕಿತ್ತು, ಚೀಪಿ ಎಸೆಯುತ್ತಿತ್ತು. ಒಂದೊಂದು ಮಂಗವೂ ಎಂಟತ್ತು ಕೊನೆಯ ಅಡಕೆ ತೆರೆಯುವುದು ಸಾಮಾನ್ಯವಾಗಿತ್ತು. ಆಹಾರ ವಸ್ತುವಲ್ಲದಿದ್ದರೂ ಚಿಗುರು ಅಡಕೆಯಲ್ಲಿನ ಚೊಗರಿನ ಅಂಶ ಮತ್ತೇರಿಸುವುದರಿಂದ ಮಂಗಗಳು ಅಡಕೆಗೆ ಮುತ್ತುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಅಡಕೆ ಮರದ ಎಳೆಯ ಸಿಂಗಾರದಲ್ಲಿಯೂ ಮಾದಕ ಅಂಶವಿರುವುದರಿಂದ ಚಿಗುರು ಅಡಕೆಯ ಬದಲು ಸಿಂಗಾರವನ್ನೇ ತಿನ್ನುವುದನ್ನು ಮಂಗಗಳು ರೂಢಿಸಿಕೊಂಡರೆ ಎಂಬ ಆತಂಕ ಬೆಳೆಗಾರರಲ್ಲಿ ವ್ಯಕ್ತವಾಗುತ್ತಿದೆ.
ಮಂಗಗಳು ಅಪರಿಚಿತವಲ್ಲ:
ಮಲೆನಾಡಿಗರಿಗೆ ಮಂಗಗಳು ಅಪರಿಚಿತವಲ್ಲ. ಅಡಕೆ ತೋಟದ ಪಕ್ಕದ ಸೊಪ್ಪಿನ ಬೆಟ್ಟ, ಕಾಡಿನಲ್ಲಿ ಓಡಾಡಿಕೊಂಡಿದ್ದ ಮಂಗಗಳು ತೋಟಕ್ಕೆ ಬರುವುದು ಅಷ್ಟಾಗಿರಲಿಲ್ಲ. ಅಪರೂಪಕ್ಕೆ ಬಂದರೂ ಮಿಶ್ರ ಬೆಳೆಗಳಾದ ಬಾಳೆಕಾಯಿ, ಯಾಲಕ್ಕಿ ಹಣ್ಣು ತಿಂದು ತೃಪ್ತವಾಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಕೆ ಬೆಳೆಗಾರರು ಮಿಶ್ರ ಬೆಳೆ ಅನುಸರಿಸುತ್ತಿಲ್ಲ. ಮಂಗನ ಹಿಂಡು ಅಡಕೆ ಮಿಡಿಗಳನ್ನು ತಿನ್ನಲೆಂದೇ ತೋಟಕ್ಕೆ ಬರುತ್ತಿವೆ. ವರ್ಷದಿಂದ ವರ್ಷಕ್ಕೆ ಮಂಗಗಳು ಅಡಕೆ ತೋಟಕ್ಕೆ ನುಗ್ಗುವುದು ಹೆಚ್ಚುತ್ತಿದೆ. ಮಂಗಗಳ ಕಾಟ ತಡೆಯಲು ರೈತರು ಹಲವಾರು ಕಾರ್ಯ ವಿಧಾನವನ್ನು ಅನುಸರಿಸುತ್ತಿದ್ದಾರೆ. ಆದರೆ
ಮಂಗಗಳನ್ನು ತೋಟದಿಂದ ಓಡಿಸಲು ಕಂಡುಕೊಂಡಿದ್ದ ಚಾಟಿಬಿಲ್, ಪಟಾಕಿ, ಗರ್ನಾಲು, ಏರ್‍ಗನ್ ಮೊದಲಾದ ವಿಧಾನಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಹಿಂದೆ ಅವುಗಳ ಶಬ್ದಕ್ಕೆ ಬೆಚ್ಚಿ ಓಡುತ್ತಿದ್ದ ಮಂಗಗಳು ಪಕ್ಕದಲ್ಲಿಯೇ ಪಟಾಕಿ ಸಿಡಿದರೂ ಕ್ಯಾರೇ ಅನ್ನುತ್ತಿಲ್ಲ.
ಮಂಗ ಬರದಂತೆ ತಡೆಯುವ ವಿದ್ಯುತ್ ತಂತಿಬೇಲಿ, ಮಂಗನ ಕಾವಲು, ಮೀನು ಬಲೆಯ ಎತ್ತರದ ಬೇಲಿ ಅವುಗಳನ್ನು ತಡೆಯಲು ವಿಫಲವಾಗಿದೆ. ಬೆಲೆ ಏರಿಳಿತ, ಕೊಳೆರೋಗ, ಎಲೆ ಚುಕ್ಕಿ ರೋಗ, ಕೂಲಿಕಾರರ ಅಭಾವ ಮೊದಲಾದ ಹಲವು ಸಮಸ್ಯೆಗಳ ಸುಳಿಯಲ್ಲಿ ಹೈರಾಣವಾಗುತ್ತಿರುವ ಅಡಕೆ ತೋಟಿಗರು ಮಂಗಗಳ ಹಾವಳಿ ಅತಿರೇಕವಾಗಿ ಪ್ರತೀ ವರ್ಷ ಶೇ.30ಕ್ಕಿಂತಲೂ ಹೆಚ್ಚು ಅಡಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
ಮಂಗ ಮತ್ತು ಕಾನೂನು
1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಷೆಡ್ಯೂಲ್-3 ಭಾಗ 1ರ ಪ್ರಕಾರ ಮಂಗಗಳನ್ನು ವನ್ಯ ಜೀವಿಗಳು ಎಂದು ಪರಿಗಣಿಸಲಾಗಿದೆ. ಈ ಕಾಯಿದೆಯ ಸೆಕ್ಷನ್ 27,29,50,51 ರ ಪ್ರಕಾರ ಮಂಗನನ್ನು ಸಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅದಕ್ಕೆ 3 ರಿಂದ 7 ವರ್ಷಗಳ ಜೈಲು ಶಿಕ್ಷೆ ವಿಧಿಸಬಹದಾಗಿದೆ.ಸರಕಾರಿ ಆದೇಶದ ಪ್ರಕಾರ ವನ್ಯಜೀವಿಯಿಂದ ಬೆಳೆ ಹಾನಿಯಾದರೆ ನಷ್ಟ ಅನುಭವಿಸಿದ ರೈತರಿಗೆ ಬೆಳೆ ಹಾನಿಯ ಮೌಲ್ಯ ನಿರ್ಧರಿಸಿ, ಪರಿಹಾರ ಧನ ಮಂಜೂರು ಮಾಡುವ ವಿವೇಚನಾಧಿಕಾರ ಅರಣ್ಯಾಧಿಕಾರಿಗಳಿದೆ. ಆದರೆ ಅರಣ್ಯ ಇಲಾಖೆ ಮಂಗಗಳನ್ನು ಹೊರತುಪಡಿಸಿ. ಇನ್ನುಳಿದಂತೆ ಕಾಡು ಹಂದಿ, ಕಾಡುಕೋಣ, ಹುಲಿ, ಚಿರತೆ, ಕರಡಿ ಮೊದಲಾದ ಪ್ರಾಣಿಗಳಿಂದಾದ ಹಾನಿಗೆ ಪರಿಹಾರ ಮಾತ್ರ ನೀಡುತ್ತಿದೆ . ಮಂಗಗಳನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ ಎನ್ನುವ ಇಲಾಖೆ ಬೆಳೆಹಾನಿ ಸಂದರ್ಭದಲ್ಲಿ ಮಂಗಗಗಳನ್ನು ವನ್ಯಜೀವಿ ಎಂದು ಪರಿಗಣಿಸದಿರುವುದು ಆಶ್ಚರ್ಯವಾಗಿದೆ.
ಸ್ಥಳಾಂತರದ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ
ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷರು ಮಂಗಗಳ ಹಾವಳಿ ತಡೆಗಟ್ಟಬೇಕು. ಬೆಳೆ ನಷ್ಟದ ಪರಿಹಾರ ಧನ ಮಂಜೂರು ಸಂಬಂಧ ಕ್ರಮ ಕೈಗೊಳ್ಳಬೇಕೆಂದು 2011ರ ಸೆಪ್ಟಂಬರ್‌ನಲ್ಲಿ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಇದಕ್ಕೆ ಸ್ಪಂದಿಸಿದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ಹಾವಳಿ ಮಾಡುತ್ತಿರುವ ಮಂಗಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವಂತೆ 2011ರ ಅಕ್ಟೋಬರ್ 1 ರಂದು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ವಿಭಾಗ ಶಿವಮೊಗ್ಗ ಇವರಿಗೆ ಆದೇಶಿಸಿದ್ದರು. ಆದರೆ ಈ ಆದೇಶ ಪಾಲನೆಗೊಳ್ಳದಿರುವುದು ಅಡಕೆ ಬೆಳೆಗಾರರ ದುರದೃಷ್ಟ.
ಮಂಗಗಳು:
ಮನುಷ್ಯನಿಗೆ ಅತಿ ಹತ್ತಿರದ ಪ್ರಾಣಿಯಾದ ಮಂಗಗಳು ಪ್ರೈಮೇಟ್ ಕುಟುಂಬಕ್ಕೆ ಸೇರಿದೆ. ಪ್ರಪಂಚದಲ್ಲಿ ಸುಮಾರು 125 ಜಾತಿಗಳ ಮಂಗಗಳನ್ನು ದಾಖಲಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಕಾಮನ್ ಲಂಬೂರ್, ಬಾನೆಟ್ ಮಂಕಿ, ಹನುಮಾನ್ ಲಂಗೂರ್ ಎಂದೆಲ್ಲಾ ಗುರುತಿಸಲಾಗಿರುವ ಹಲವು ಜಾತಿಯ ಮಂಗಗಳಿವೆ. ಸ್ಥಳೀಯವಾಗಿ ಕರಿ ಮುಸಿಯಾ, ಬಿಳಿ ಮುಸಿಯಾ ಎಂದು ಕರೆಯಲಾಗುವ ಮಂಗಗಳು ಅಡಿಕೆ ತೋಟಕ್ಕೆ ಲಗ್ಗೆ ಇಡುತ್ತಿವೆ.
ವನ್ಯಜೀವಿ ಮಂಗಗಳು ಅಡಕೆ ತೋಟದಲ್ಲಿ ಎಳೆಯ ಸಿಂಗಾರ ತಿನ್ನುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬರುತ್ತಿವೆ. ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಮಂಗಗಳ ನಿಯಂತ್ರಣಕ್ಕೆ ಕ್ರಮ ವಹಿಸಿಲ್ಲ. ಈ ನಿರ್ಲಕ್ಷ್ಯ ಮುಂದುವರೆದರೆ ಬೆಳೆಗಾರರು ತಮ್ಮ ಬೆಳೆಗಳ ಸಂರಕ್ಷಣೆಗೆ ತಾವೇ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಬಹುದು.
- ರಾಜೇಂದ್ರ ಖಂಡಿಕಾ, ಕಾರ್ಯದರ್ಶಿ, ಸಾಗರ ಪ್ರಾಂತ ಅಡಕೆ ಬೆಳೆಗಾರರ ಸಂಘ.