ಸಾರಾಂಶ
ಪ್ರವೀಣ ಹೆಗಡೆ ಕರ್ಜಗಿ
ಶಿರಸಿ: ಜಿಲ್ಲೆಯ ಹಾಲು ಉತ್ಪಾದಕರಿಗೆ ಕಳೆದ 6 ತಿಂಗಳಿನಿಂದ (ಜೂನ್- ನವೆಂಬರ್) ಪ್ರೋತ್ಸಾಹಧನ ವಿತರಿಸಿಲ್ಲ. ಇದರಿಂದ ಸಹಜವಾಗಿ ಹೈನುಗಾರರು ಕಂಗಾಲಾಗಿದ್ದಾರೆ.ಗ್ರಾಹಕರಿಗೆ ಹೊರೆಯಾಗುವಂತೆ ಹಾಲಿನ ದರವನ್ನು ಲೀಟರ್‌ಗೆ ₹5 ಹೆಚ್ಚಿಸುವ ಕೆಎಂಎಫ್‌ಗೆ ಹಾಲು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿದ್ದು, ಇದು ಹಾಲಿನ ದರ ಏರಿಕೆಗೆ ನಾಂದಿಯಾಗಲಿದೆ. ಇತ್ತ ಜಿಲ್ಲೆಯಲ್ಲಿ ಕಳೆದ ಜೂನ್‌ನಿಂದ ನವೆಂಬರ್‌ವರೆಗೆ ಪಾವತಿಸಬೇಕಾದ ಹಾಲಿನ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರದಿಂದ ಜಿಲ್ಲೆಯ ಹಾಲು ಉತ್ಪಾದಕ ರೈತರ ಖಾತೆಗೆ ₹೪,೩೬,೮೩,೬೭೫ ಜಮಾ ಆಗಬೇಕಿರುವುದು ಬಾಕಿ ಇದೆ.
ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ, ಹೈನುಗಾರರಲ್ಲಿ ಆರ್ಥಿಕ ಶಕ್ತಿ ಹೆಚ್ಚಿಸಲು ₹೫ ಇದ್ದ ಹಾಲಿನ ಪ್ರೋತ್ಸಾಹಧನವನ್ನು ₹೭ಕ್ಕೆ ಏರಿಕೆ ಮಾಡುವ ಭರವಸೆಯನ್ನು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ೨ ವರ್ಷ ಸಮೀಪಿಸುತ್ತಿದ್ದು, ಹಾಲಿನ ಪ್ರೋತ್ಸಾಹಧನ ಹೆಚ್ಚಿಸುವುದು ಹಾಗಿರಲಿ, ಹಳೆಯ ಪ್ರೋತ್ಸಾಹಧನ ಮೊತ್ತವನ್ನೇ ಬಿಡುಗಡೆ ಮಾಡುವುದು ಕೋಟ್ಯಂತರ ರು. ಬಾಕಿ ಇರಿಸಿಕೊಂಡಿದೆ. ಇದರಿಂದ ಹಾಲು ಉತ್ಪಾದಕ ರೈತರು ಹಾಲು ಉತ್ಪಾದನಾ ವೆಚ್ಚಕ್ಕೆ ಒಂದಿಷ್ಟು ನೆರವಾಗುವ ಪ್ರೋತ್ಸಾಹಧನಕ್ಕಾಗಿ ತಿಂಗಳಾನುಗಟ್ಟಲೆ ನಿರೀಕ್ಷಿಸುವಂತಾಗಿದೆ.ಜಿಲ್ಲೆಯಲ್ಲಿ ೧೦೦ ಮಹಿಳಾ ಸಹಕಾರ ಸಂಘಗಳು ಹಾಗೂ ೧೯೮ ಸಾಮಾನ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಸೇರಿದಂತೆ ಒಟ್ಟೂ ೨೯೮ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಂದ ಪ್ರಸ್ತುತ ಪ್ರತಿದಿನ ೫೩,೫೫೧ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಈ ಸಂಘಗಳ ಹೈನುಗಾರ ಸದಸ್ಯರಿಗೆ ಕಳೆದ ೬ ತಿಂಗಳಿನಿಂದ ಪ್ರೋತ್ಸಾಹಧನ ಜಮಾ ಆಗಿಲ್ಲ.ಯಾವ ತಿಂಗಳಿನಲ್ಲಿ ಎಷ್ಟೆಷ್ಟು ಬಾಕಿ?: ಜಿಲ್ಲೆಯ ೨೯೮ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಜೂನ್‌ನಲ್ಲಿ ೯೫೭೨ ರೈತರಿಗೆ ೧೩೬೩೬೭೮ ಲೀಟರ್ ಹಾಲಿಗೆ ₹೬೮,೧೮,೩೯೦, ಜುಲೈನಲ್ಲಿ ೯೭೬೩ ರೈತರಿಗೆ ₹೧೩,೮೨,೧೯೦, ಆಗಸ್ಟ್‌ನಲ್ಲಿ ೯೫೪೫ ರೈತರಿಗೆ ೧೩,೩೧,೫೪೧ ಲೀಟರ್‌ಗೆ ₹೬೬,೫೭,೭೦೫, ಸೆಪ್ಟೆಂಬರ್‌ನಲ್ಲಿ ೯೯೯೯ ರೈತರಿಗೆ ೧೪,೧೦,೮೦೨ ಲೀಟರ್‌ಗೆ ₹೭೦,೫೪,೦೧೦, ಅಕ್ಟೋಬರ್‌ನಲ್ಲಿ ೧೦೭೬೦ ರೈತರಿಗೆ ೧೫,೯೪,೪೮೦ ಲೀಟರ್‌ಗೆ ₹೭೯,೭೨,೪೦೦, ನವೆಂಬರ್‌ನಲ್ಲಿ ೧೧೩೧೨ ರೈತರಿಗೆ ೧೬,೫೪,೦೪೪ ಲೀಟರ್‌ಗೆ ₹೮೨,೭೦,೨೨೦ ಸೇರಿದಂತೆ ಒಟ್ಟು ೬೦೯೫೧ ರೈತರಿಗೆ ೮೭,೩೬,೭೩೫ ಲೀಟರ್‌ಗೆ ₹೪,೩೬,೮೩,೬೭೫ ಪ್ರೋತ್ಸಾಹಧನ ಜಮಾ ಆಗಬೇಕಿದೆಏರಿಕೆ ಮಾಡಿರುವ ₹೫ಅನ್ನು ನೇರವಾಗಿ ರೈತರಿಗೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಇದು ಎಲ್ಲ ಒಕ್ಕೂಟಗಳಿಗೂ ಸಾಧ್ಯವಿಲ್ಲ. ಕೆಲವೊಂದು ಒಕ್ಕೂಟಗಳು ನಷ್ಟದಲ್ಲಿವೆ. ರೈತರಿಂದ ಸಂಗ್ರಹಿಸಿದ ಎಲ್ಲ ಹಾಲು ಮಾರಾಟವಾಗುವುದಿಲ್ಲ. ಆದರೆ ರೈತರಿಗೆ ಹಣವನ್ನು ನಾವು ನೀಡಲೇಬೇಕು. ₹೫ರಲ್ಲಿ ಒಕ್ಕೂಟಗಳಿಗೂ ಸ್ವಲ್ಪ ಹಣ ನೀಡಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರ ಮತ್ತು ಒಕ್ಕೂಟಗಳ ನಡುವೆ ಚರ್ಚೆಯಾಗುತ್ತಿದೆ. ಮುಂದಿನ ವಾರದಲ್ಲಿ ನಿರ್ಣಯ ಅಂತಿಮಗೊಳ್ಳಲಿದೆ ಎಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.
ರೈತರಿಗೆ ಅನುಕೂಲ: ಸರ್ಕಾರ ಪ್ರೋತ್ಸಾಹಧನವನ್ನು ಐದಾರು ತಿಂಗಳಿಗೊಮ್ಮೆ ನೀಡುತ್ತದೆ. ಸರಿಯಾದ ಸಮಯಕ್ಕೆ ನೀಡಿದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಪ್ರೋತ್ಸಾಹಧನ ₹೭ಕ್ಕೆ ಏರಿಕೆ ಮಾಡುತ್ತದೆ ಎಂದು ಹೇಳಿತ್ತು. ಅಧಿಕಾರಕ್ಕೆ ಬಂದು ೨ ವರ್ಷವಾಗುತ್ತಿದ್ದರೂ ಅದರ ವಿಷಯ ಪ್ರಸ್ತಾಪವಾಗುತ್ತಿಲ್ಲ. ಹೈನುಗಾರರಿಗೆ ಪ್ರೋತ್ಸಾಹಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಹೈನುಗಾರರಾದ ಅಣ್ಣಪ್ಪ ನಾಯ್ಕ ತಿಳಿಸಿದರು.₹೫ ಏರಿಕೆ: ಸಾಗಾಟ- ಸಂಸ್ಕರಣೆ ಖರ್ಚಿನ ಎಲ್ಲ ಹೊಣೆಯನ್ನು ಒಕ್ಕೂಟಗಳೇ ಭರಿಸಲು ಸಾಧ್ಯವಿಲ್ಲ. ಹಾಲಿನ ದರ ₹೫ ಏರಿಕೆ ಮಾಡಿದರೆ ಅದರಲ್ಲಿ ಒಕ್ಕೂಟಗಳಿಗೆ ಪಾಲು ಎಷ್ಟು ಎಂಬುದು ನಿರ್ಣಯವಾಗಬೇಕು. ರೈತರಿಂದ ಪಡೆಯುವ ಹಾಲಿನ ದರ ಪ್ರತಿ ಲೀಟರ್‌ಗೆ ₹೫ ಏರಿಕೆ ಮಾಡಿದರೆ ಮಾರಾಟ ಮಾಡುವ ಹಾಲಿ ದರವೂ ಸಹಜವಾಗಿ ₹೫ ಏರಿಕೆಯಾಗುತ್ತದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.