ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಇಂದಿನ ಯುವ ಪೀಳಿಗೆಯ ಜೀವನ ಶೈಲಿ ಯಾಂತ್ರಿಕವಾಗಿದೆ ಎಂದು ಪಟ್ಟಣದ ಶಿವ ನೃತ್ಯಂ ಅಕಾಡೆಮಿಯ ಭರತನಾಟ್ಯ ಕಲಾವಿದೆ ರಂಜಿತಾ ಸೋಮಶೇಖರ್ ಅಭಿಪ್ರಾಯಪಟ್ಟರು.ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ 2024-25ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ಸ್ವಾಸ್ಥ್ಯ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವ ನಿಟ್ಟಿನಲ್ಲಿ ಸಂಗೀತ, ನೃತ್ಯ ಹಾಗೂ ಸಾಹಿತ್ಯದಂತಹ ಅಭಿರುಚಿಗಳನ್ನು ರೂಢಿಸಿಕೊಂಡು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಶಾರೀರಿಕ ಸೌಂದರ್ಯವನ್ನು ರೂಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.ಮುಖ್ಯಅತಿಥಿಯಾಗಿದ್ದ ಟಿ. ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಚ್.ವಿ. ಉದಯಕುಮಾರ್ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹು ಮುಖ್ಯವಾದ ಸಂಗತಿಯಾಗಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಸಮಯ ಪರಿಪಾಲನೆ, ಕರ್ತವ್ಯ ಪ್ರಜ್ಞೆ, ಶಿಸ್ತು ಮುಂತಾದ ಅವಶ್ಯಕ ಮೂಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸದೃಢ ಶರೀರ, ಸ್ವಾಸ್ಥ್ಯ ಮನಸ್ಸು ಹೊಂದುವುದಾದರೆ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ವಿವಿಧ ಹಂತದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಮತ್ತು ಯಶಸ್ಸನ್ನು ಗಳಿಸಿ ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗೆ, ಪೋಷಕರಿಗೆ ಹಾಗೂ ದೇಶಕ್ಕೆ ಆದರ್ಶ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ದಿವ್ಯದೃಷ್ಠಿಯ ಫಲವಾಗಿ ಸ್ಥಾಪಿತವಾಗಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆಂದರು.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್ ಮಾತನಾಡಿದರು.
ಅಧ್ಯಕ್ಷತೆಯನ್ನು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ನೀಲಗಿರಿ ಎಂ. ತಳವಾರ್ ವಹಿಸಿದ್ದರು.ವಿದ್ಯಾರ್ಥಿನಿ ಕೀರ್ತನ ಮತ್ತು ತಂಡ ಪ್ರಾರ್ಥಿಸಿದರು, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಎಂ.ಎನ್. ಜಯಶೀಲ ಸ್ವಾಗತಿಸಿದರು, ಅನುಷ ವಂದಿಸಿದರು. ಎಸ್.ಜಿ. ರಂಜಿತ ನಿರೂಪಿಸಿದರು. ಕಚೇರಿ ಅಧೀಕ್ಷಕ ಕೆ.ವಿ. ಸುಂದರರಾಜು, ಕ್ರೀಡಾ ವೇದಿಕೆ ಸಂಚಾಲಕ ಪಿ.ಎಂ. ವಿಕ್ರಂ, ಅಧ್ಯಾಪಕರು-ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.