ಉಚಿತ ಡಯಾಲಿಸಿಸ್ ಚಿಕಿತ್ಸಾ ಕೇಂದ್ರದ ಉದ್ಘಾಟನೆ ಇಂದು

| Published : Aug 15 2024, 01:45 AM IST

ಉಚಿತ ಡಯಾಲಿಸಿಸ್ ಚಿಕಿತ್ಸಾ ಕೇಂದ್ರದ ಉದ್ಘಾಟನೆ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ಉಚಿತ ಡಯಾಲಿಸಿಸ್ ಚಿಕಿತ್ಸಾ ಕೇಂದ್ರವು ಬಡ ರೋಗಿಗಳ ಪಾಲಿಗೆ ವರದಾನವಾಗಲಿದೆ

ಗಜೇಂದ್ರಗಡ: ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ರೋಗಿಗಳ ಅಗತ್ಯದ ಬೇಡಿಕೆಯಾಗಿದ್ದ ಡಯಾಲಿಸಿಸ್ ಕೇಂದ್ರ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಉಚಿತ ಡಯಾಲಿಸಿಸ್ ಚಿಕಿತ್ಸಾ ಕೇಂದ್ರವು ಬಡ ರೋಗಿಗಳ ಪಾಲಿಗೆ ವರದಾನವಾಗಲಿದೆ ಎಂದು ಆರೋಗ್ಯ ಸುರಕ್ಷಾ ಸಮಿತಿ ಸದಸ್ಯ ಅರಿಹಂತ ಬಾಗಮಾರ ಹೇಳಿದರು.

ಸ್ಥಳೀಯ ರೋಣ ರಸ್ತೆಯ ಸಮುದಾಯ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆ. ೧೫ ರಂದು ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.

ಅತ್ಯಂತ ಕಷ್ಟದಾಯಕ, ಸೂಕ್ಷ್ಮ ಹಾಗೂ ವೆಚ್ಚದಾಯಕ ಮೂತ್ರಕೋಶದ ತೊಂದರೆಯಿಂದ ಬಳಲುವ ರೋಗಿಗಳ ಡಯಾಲಿಸಿಸ್ ಚಿಕಿತ್ಸಾ ಕೇಂದ್ರವು ಪಟ್ಟಣದಲ್ಲಿ ಆರಂಭವಾಗಬೇಕು ಎಂಬುದು ಬಹು ವರ್ಷಗಳ ಬೇಡಿಕೆ ಈಡೇರಿರಲಿಲ್ಲ. ಹೀಗಾಗಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ಅನುಭವಿಸುವ ಕಷ್ಟ, ಕಾರ್ಪಣ್ಯ ಕುರಿತು ಶಾಸಕ ಜಿ.ಎಸ್. ಪಾಟೀಲ ಗಮನಕ್ಕೆ ತಂದಾಗ ಶೀಘ್ರದಲ್ಲೇ ಪಟ್ಟಣದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದರು. ಅದರಂತೆ ಆ. ೧೫ ರ ಗುರುವಾರ ಶಾಸಕ ಜಿ.ಎಸ್. ಪಾಟೀಲ ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ಕುರಿತು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಪುರಸಭೆ ಸದಸ್ಯ, ಆರೋಗ್ಯ ಸುರಕ್ಷಾ ಸಮಿತಿ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುವ ರೋಗಿಗಳು ವಾರದಲ್ಲಿ ೨/೩ ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕಿರುತ್ತದೆ. ರೋಗಿಗಳ ಕಷ್ಟ ಅರಿತ ಶಾಸಕ ಜಿ.ಎಸ್. ಪಾಟೀಲ ಪಟ್ಟಣದಲ್ಲಿ ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಆರಂಭಕ್ಕೆ ಮುಂದಾಗುವ ಮೂಲಕ ಬಡ ರೋಗಿಗಳಿಗೆ ನೆರವಾಗಿದ್ದಾರೆ. ಆಸ್ಪತ್ರೆಯಲ್ಲಿ ಹೆರಿಗೆ ಸಿಜರಿಯನ್ ಘಟಕ ಆರಂಭಿಸಿದ್ದು ಈಗಾಗಲೇ ೧೭ಕ್ಕೂ ಅಧಿಕ ಹೆರಿಗೆಗಳಾಗಿವೆ. ಹಗಲಿರುಳು ಜನಪರ ಕಾರ್ಯಕ್ರಮಗಳಿಗೆ ಮೊದಲಾದ್ಯತೆ ನೀಡುತ್ತಾ ಬಂದಿರುವ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಜನಸಾಮಾನ್ಯರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಜಿಲ್ಲೆಯ ಡಯಾಲಿಸಿಸ್ ಕೇಂದ್ರದ ಆಡಳಿತಾಧಿಕಾರಿ ಶಿದ್ದಲಿಂಗೇಶ್ವರ ಶಿವಶಿಂಪಿಗೇರ ಮಾತನಾಡಿ, ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿಯಲ್ಲಿ ಪಬ್ಲಿಕ್ ಪ್ರೈವೇಟ್ ಪಾರ್ಟಿಸಿಪೆಟ್, ಡಿಸಿಡಿಸಿ ಹೆಲ್ತ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್(ಕಿಡ್ನಿ ಕೇರ್) ಸಹಯೋಗದಲ್ಲಿ ಆರಂಭವಾಗಲಿರುವ ೨ ಬೆಡ್‌ಗಳ ಅತ್ಯಾಧುನಿಕ ಯಂತ್ರೋಪಕರಣಗಳ ಕೇಂದ್ರವಾಗಿದೆ. ಬೆಳಗ್ಗೆ ೮ ರಿಂದ ಸಂಜೆ ೪ ರವೆರೆಗೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ಓರ್ವ ರೋಗಿಯ ಡಯಾಲಿಸಿಸ್ ಮಾಡಲು ಕನಿಷ್ಠ ೪ ತಾಸುಗಳ ಸಮಯಾವಕಾಶ ಬೇಕಾಗಿದ್ದರಿಂದ ದಿನಕ್ಕೆ ೪ ರೋಗಿಗಳ ಡಯಾಲಿಸಿಸ್ ಮಾಡಲಾಗುವುದು. ಈ ವೇಳೆ ರೋಗಿಯ ಆರೋಗ್ಯದ ಸ್ಥಿತಿಗತಿ ಅಗತ್ಯತೆಗನುಗುಣವಾಗಿ ಹೆಚ್ಚುವರಿ ಸೇವೆ ಮಾಡಲಾಗುತ್ತದೆ ಎಂದರು.

ಆಸ್ಪತ್ರೆಯ ಡಾ. ಅನೀಲಕುಮಾರ ತೋಟದ ಮಾತನಾಡಿ, ತಾಲೂಕಿನಲ್ಲಿ ಅಂದಾಜು ೩೫-೪೦ ರೋಗಿಗಳಿದ್ದಾರೆ. ೨ ಸಾವಿರ ಮೌಲ್ಯದ ಇಂಜೆಕ್ಷನ್ ಸೇರಿದಂತೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುವುದು ಎಂದರು.