ರಾಜ್ಯದ ಏಕೈಕ ಮೂರು ಮಲ್ಟಿಫ್ಲೆಕ್ಸ್ ನಿಲ್ದಾಣಕ್ಕೆ ಚಾಲನೆ

| Published : Mar 10 2024, 01:33 AM IST

ರಾಜ್ಯದ ಏಕೈಕ ಮೂರು ಮಲ್ಟಿಫ್ಲೆಕ್ಸ್ ನಿಲ್ದಾಣಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ 120 ಕೋಟಿ ರು. ವೆಚ್ಚದ ನೂತನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ, ಎಸ್.ಎಸ್.ಮಲ್ಲಿಕಾರ್ಜುನ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಮೂರು ಮಲ್ಟಿಫ್ಲೆಕ್ಸ್ ಹೊಂದಿರುವ ಏಕೈಕ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣವನ್ನು ದಾವಣಗೆರೆಯಲ್ಲಿ ಇಂದು ಉದ್ಘಾಟಿಸಿದ್ದು, ರಾಜ್ಯಕ್ಕೆ ಮಾದರಿಯಾದ ಈ ನಿಲ್ದಾಣಕ್ಕೆ ಮಾಜಿ ಶಾಸಕ ದಿ. ಪಂಪಾಪತಿ ಹೆಸರಿಡುವ ಬಗ್ಗೆ ಸಚಿವರು, ಶಾಸಕರ ಜೊತೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ.

ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಕೆಎಸ್ಸಾರ್ಟಿಸಿ ಮುಖ್ಯ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ಆಧುನಿಕ ಸೌಕರ್ಯ ಹೊಂದಿರುವ, ಮಲ್ಟಿಪ್ಲೆಕ್ಸ್‌ ಸಿನಿಮಾ ಹಾಲ್‌ಗಳ ಜೊತೆಗೆ ಪ್ರಯಾಣಿಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿರುವ ರಾಜ್ಯದ ಮೊಟ್ಟ ಮೊದಲ ಬಸ್ಸು ನಿಲ್ದಾಣ ಇದಾಗಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಧಾನ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಜಗಳೂರು ಬಸ್ಸು ನಿಲ್ದಾಣ ನಿರ್ಮಿಸಲಾಗಿದೆ. 6.07 ಎಕರೆ ಜಾಗದಲ್ಲಿ ಸುಮಾರು 120 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಸ್ಮಾರ್ಟ್ ಸಿಟಿ ಶೇ.75, ನಿಗಮದಿಂದ ಶೇ.25 ಅನುಪಾತದಲ್ಲಿ ಅನುದಾನ ಬಳಸಲಾಗಿದೆ. ಬೇತೂರು ರಸ್ತೆಯ ಬಸ್ಸು ನಿಲ್ದಾಣ ವನ್ನು 1.20 ಎಕರೆ ಜಾಗದಲ್ಲಿ 8.96 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ದಾವಣಗೆರೆಯಿಂದ ನಿತ್ಯವೂ 1400ಕ್ಕೂ ಹೆಚ್ಚು ಬಸ್ಸು ಸಂಚರಿಸುತ್ತಿವೆ. ಇಲ್ಲಿಗೆ ಬಂದು, ಹೋಗುವ ಬಸ್ಸುಗಳ ಸಂಖ್ಯೆಯೂ ಹೆಚ್ಚಾಗಿದ್ದು, ಅದಕ್ಕೆ ಪೂರಕವಾಗಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಾವು ಅಧಿಕಾರಕ್ಕೆಬಂದ 15 ದಿನದಲ್ಲೇ ಶಕ್ತಿ ಯೋಜನೆ ಜಾರಿಗೆ ತಂದೆವು. ಆದರೆ, ಶಕ್ತಿಯಿಂದ ಮುಂದಿನ ದಿನಗಳಲ್ಲಿ ನಿಗಮದ ಬಸ್ಸುಗಳಿಗೆ ಇಂಧನಕ್ಕೂ ಹಣ ಇಲ್ಲದಂತಾಗುತ್ತದೆಂಬ ಭಾವನೆ ನಿವಾರಣೆ ಮಾಡಿ, ನಿಗಮವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಬಂದಾಗಿನಿಂದ ರಾಜ್ಯದಲ್ಲಿ 160 ಕೋಟಿಗಿಂತಲೂ ಹೆಚ್ಚು ಮಹಿಳೆಯರು ಪ್ರಯಾಣಿಸಿದ್ದಾರೆ. ವಿವಿಧ ನಿಗಮಗಳಿಗೆ ಸುಮಾರು 5800 ಹೊಸ ಬಸ್ಸು ಖರೀದಿಸಲಾಗುತ್ತಿದ್ದು, ಈಗಾಗಲೇ ಅರ್ಧಕ್ಕೂ ಹೆಚ್ಚು ಹೊಸ ಬಸ್ಸು ಬಂದಿವೆ. ಉಳಿದ ಅರ್ಧದಷ್ಟು ಬಸ್ಸುಗಳು ಬರಬೇಕಿದೆ ಎಂದು ಅವರು ಹೇಳಿದರು.

ದಾವಣಗೆರೆ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ಈ ನಿಲ್ದಾಣಕ್ಕಾಗಿ ಹೋರಾಟ ನಡೆಸಿದ್ದ ಮಾಜಿ ಶಾಸಕ ಪಂಪಾಪತಿ ಹೆಸರಿಡಬೇಕೆಂಬ ಬೇಡಿಕೆ ಇದೆ. ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಬೇಕು. ಇಲ್ಲಿನ ಶಾಸಕರು, ಸಚಿವರ ಜೊತೆಗೆ ಚರ್ಚಿಸಿ, ಪಂಪಾಪತಿ ಹೆಸರಿಡಲು ಪ್ರಾಮಾಣಿಕ ಪ್ರಯತ್ನ ಮಾಡು ವುದಾಗಿ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಇದೇ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಹಿಂದೆ ಸ್ವಚ್ಛತೆ ಟೆಂಡರ್ ಪಡೆದು, 2 ದಶಕ ಕಾಲ ನಾನು ನಿರ್ವಹಣೆ ಮಾಡಿದ್ದೇನೆ. ಮಳೆ ಬಂದಂರೆ ಇಡೀ ನಿಲ್ದಾಣ ಜಲಾವೃತವಾಗುತ್ತಿತ್ತು. ಈಗ ಎತ್ತರದಲ್ಲಿ ನಿಲ್ದಾಣ ನಿರ್ಮಿಸಲಾಗಿದೆ. ಈ ನಿಲ್ದಾಣ ಉದ್ಘಾಟನೆಯಲ್ಲಿ ಶಾಸಕನಾಗಿ ಭಾಗಿಯಾಗಿದ್ದು ಧನ್ಯತೆ ಎನಿಸುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್‌, ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್‌, ಕೆಎಸ್ಸಾರ್ಟಿಸಿ ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕಿ ಡಾ.ಕೆ.ನಂದಿನಿ ದೇವಿ, ಅಪರ ಡಿಸಿ ಸೈಯ್ಯದಾ ಅಫ್ರೀನ್ ಭಾನು, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್‌, ಜಿ.ಎಸ್.ಮಂಜುನಾಥ ಗಡಿಗುಡಾಳ, ಅಬ್ದುಲ್ ಲತೀಫ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶಕುಮಾರ, ಎಲೆಬೇತೂರು ಗ್ರಾಪಂ ಅಧ್ಯಕ್ಷ ರೇವಣಸಿದ್ದಪ್ಪ, ಸ್ಮಾರ್ಟ್ ಸಿಟಿ ಸದಸ್ಯೆ ಅಲಕಾನಂದ ರಾಮದಾಸ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ, ವಿಭಾಗೀಯ ಸಂಚಾಲಕ ಡಿ.ಫಕೃದ್ದೀನ್ ಇತರರು ಇದ್ದರು. ಕೆಎಸ್ಸಾರ್ಟಿಸಿಯಲ್ಲಿ 7 ವರ್ಷ ಕಾಲ ಅಪಘಾತ ಮತ್ತು ಅಪರಾಧ ರಹಿತವಾಗಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಜಿ.ಮಂಜುನಾಥ, ಆರ್.ರವಿಕುಮಾರ, ಚಂದ್ರನಾಯ್ಕ, ಮೊಹಮ್ಮದ್ ಅಕ್ರಂ ಅಲಿ ಅವರನ್ನು ಸಚಿವರು, ಶಾಸಕರು ಸನ್ಮಾನಿಸಿ, ಬೆಳ್ಳಿ ಪದಕ ನೀಡಿಅಭಿನಂದಿಸಿ, ಬಹುಮಾನ ವಿತರಿಸಲಾಯಿತು.ದಾವಣಗೆರೆಯಲ್ಲಿ 120 ಕೋಟಿ ರು. ವೆಚ್ಚದ ನೂತನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ, ಎಸ್.ಎಸ್.ಮಲ್ಲಿಕಾರ್ಜುನ ಚಾಲನೆ ನೀಡಿದರು. ಸ್ಮಾರ್ಟ್ ಸಿಟಿ ತಂದಿದ್ದು ಎಸ್ಸೆಸ್ಸೆಂ: ಶಾಸಕ

ದಾವಣಗೆರೆ: ಕೇಂದ್ರ ಸರ್ಕಾರದ ಹತ್ತಾರು ಕಠಿಣ ಷರತ್ತುಗಳನ್ನು ಪೂರೈಸಿ, ಮೊದಲ ಹಂತದಲ್ಲೇ ದೇಶದ ಇತರೆ ಮಹಾನಗರಗಳನ್ನೂ ಹಿಂದಿಕ್ಕಿ ದಾವಣಗೆರೆ ನಗರವು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರಿಶ್ರಮದಂದಲೇ ಹೊರತು, ಬಿಜೆಪಿ ಸಂಸದರು, ಸಚಿವರು, ಶಾಸಕರಿಂದಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಕೆಎಸ್ಸಾರ್ಟಿಸಿ ಮುಖ್ಯ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಯನ್ನು ದಾವಣಗೆರೆಗೆ ತರದವರನ್ನು ವೈಭವೀಕರಿಸಬಾರದು. ಇಂತಹದ್ದೊಂದು ಯೋಜನೆ ದಾವಣಗೆರೆಗೆ ದಕ್ಕಲು ಕಾರಣರಾದ ಎಸ್ಸೆಸ್ ಮಲ್ಲಿಕಾರ್ಜುನರ ಕೊಡುಗೆಯನ್ನು ನಾವು ಸ್ಮರಿಸಬೇಕಾಗುತ್ತದೆ ಎಂದರು.

ಸಾರಿಗೆ ಸಚಿವರಾಗಿ ರಾಮಲಿಂಗಾರೆಡ್ಡಿ ಕ್ರಾಂತಿಕಾರಕ ಬದಲಾವಣೆ ತಂದವರು. ನೂರಾರು ಬಸ್ಸುಗಳನ್ನು ನೀಡಿ, ಇಡೀ ದೇಶದಲ್ಲೇ ಅಗ್ರಗಣ್ಯ ಸಾರಿಗೆ ಸಂಸ್ಥೆ ಯೆಂಬ ಹೆಗ್ಗಳಿಗೆ ಕರ್ನಾಟಕಕ್ಕೆ ಸಿಕ್ಕಿದ್ದರೆ ಅದಕ್ಕೆ ರಾಮಲಿಂಗಾರೆಡ್ಡಿ ಪರಿಶ್ರಮ ಇದೆ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯನ್ನು ಅಧಿಕಾರಕ್ಕೆ ಬಂದ 15 ದಿನಕ್ಕೆ ಮೊದಲ ಗ್ಯಾರಂಟಿ ಯೋಜನೆಯಾಗಿ ಜಾರಿಗೊಳಿಸಿದ್ದು ರಾಮಲಿಂಗಾರೆಡ್ಡಿಯವರು. ಮಾಯಕೊಂಡದಲ್ಲೂ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ 10 ಕೋಟಿ ನೀಡಿದ್ದು, ಕಾಮಗಾರಿ ಸಾಗಿದೆ ಎಂದು ಅವರು ತಿಳಿಸಿದರು.ಹಳೆ ಬಸ್ಸು ನಿಲ್ದಾಣ ಹಾಳುಗೆಡವಿದ ಬಿಜೆಪಿ: ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ರೂಪಿಸಲಾದ ಮಾನದಂಡದಲ್ಲಿ ದೇಶದಲ್ಲೇ ದಾವಣಗೆರೆ 9ನೇ ಸ್ಥಾನದಲ್ಲಿದ್ದು, ಹಿಂದೆ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಬೇತೂರು ರಸ್ತೆ ಬಸ್ಸು ನಿಲ್ದಾಣ, ಹಳೆ ಬಸ್ಸು ನಿಲ್ದಾಣಕ್ಕೆ ಒಪ್ಪಿಗೆ ನೀಡಿದ್ದು, ಹಳೆ ಬಸ್ಸು ನಿಲ್ದಾಣವನ್ನು ತರಾತುರಿಯಲ್ಲಿ ಉದ್ಘಾಟಿಸಿದ ಬಿಜೆಪಿಯವರು ಹಾಳು ಗೆಡವಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ.ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಕೆಎಸ್ಸಾರ್ಟಿಸಿ ಮುಖ್ಯ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಲೋಕಾರ್ಪಣೆ ಸಮಾರಂಭ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಸುಮಾರು 120 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಾಣವಾಗಿದ್ದು, ಇದೊಂದು ವ್ಯವಸ್ಥಿತ ನಿಲ್ದಾಣವಾಗಿದೆ ಎಂದರು.

ಬೇತೂರು ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಯಲ್ಲಪ್ಪ ಅಂಬರಕರ್ ಕುಟುಂಬವನ್ನು ಅಭಿನಂದಿಸಬೇಕು. ದೂಡಾ ಜೊತೆ ಅಂಬರಕರ ಕುಟುಂಬ ಲೇಔಟ್ ಮಾಡಲು ಮುಂದಾಗಿತ್ತು. ಆದರೆ, ಬಸ್ಸು ನಿಲ್ದಾಣ ಮಾಡಲು ಸಹಕರಿಸಿತು. 10 ಕೋಟಿ ವೆಚ್ಚದಲ್ಲಿ ಅಲ್ಲೊಂದು ನಿಲ್ದಾಣವಾಗಿದೆ. ನಾವು ಹಿಂದೆ ಡಿಆರ್‌ಆರ್‌ ಶಾಲೆಗೆ ಸೈಕಲ್ ನಲ್ಲಿ ಹೋಗುವಾಗ ಆಗ ಶಾಸಕರಿದ್ದ ಪಂಪಾಪತಿ ಇಲ್ಲಿ ಶಾಮಿಯಾನ ಹಾಕಿಕೊಂಡು, 3 ತಿಂಗಳ ಧರಣಿ ಸತ್ಯಾಗ್ರಹ ಮಾಡಿ, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕಾಗಿ ಹೋರಾಟ ನಡೆಸಿದ್ದರು. ಆಗ ಊರ ಹೊರಗ ನಿಲ್ದಾಣ ಆಯಿತೆಂದು ಜನರೂ ಮಾತನಾಡುತ್ತಿದ್ದರು. ಈಗ ಅದೇ ನಿಲ್ದಾಣ ಊರ ಮಧ್ಯೆ ಇದೆ ಎಂದು ಅವರು ನೆನಪು ಮೆಲಕು ಹಾಕಿದರು.ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕೆಲಸ ಮಾಡಿದ್ದ ಕೆ.ಎಸ್.ಬಸವಂತಪ್ಪ ಈಗ ಶಾಸಕನಾಗಿ, ಅದೇ ನಿಲ್ದಾಣ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಬಸ್ಸು ನಿಲ್ದಾಣಕ್ಕೆ ಪಂಪಾಪತಿ ಹೆಸರಿಡುವಂತೆ ಬೇಡಿಕೆ ಇದೆ. ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ನಿಗಮದ ಸಭೆಯಲ್ಲಿ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ನಗರ, ಗ್ರಾಮೀಣ ಭಾಗಕ್ಕೆ ಬಸ್ಸುಗಳ ಸೇವೆಯನ್ನು ವಿಸ್ತರಿಸಲಾಗುವುದು. ಹೊಸ ಮಾರ್ಗಕ್ಕೂ ಜನರ ಬೇಡಿಕೆಗೆ ಸ್ಪಂದಿಸಿ, ಬಸ್ಸು ಸೇವೆ ಒದಗಿಸಲಾಗುವುದು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು.

ತುಮಕೂರಲ್ಲಿ ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ಇಲ್ವೇನ್ರಿ?!

ದಾವಣಗೆರೆ: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಮುದ್ದಹನುಮೇಗೌಡರಿಗೆ ಟಿಕೆಟ್ ಘೋಷಣೆಯಾಗಿದ್ದಕ್ಕೆ ಯಾರ ವಿರೋಧವೂ ಇಲ್ಲ, ಯಾವುದೇ ಭಿನ್ನಮತವೂ ಇಲ್ಲ ಎಂದು ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮಾಜಿ ಸಚಿವ ವಿ.ಸೋಮಣ್ಣಗೆ ವಿರೋಧ ಇಲ್ಲವೇ? ಮುದ್ದ ಹನುಮೇಗೌಡ ವಿರೋಧ ಎಂಬುದಾಗಿ ಮಾಧ್ಯಮಗಳು ಹೇಳುತ್ತಿವೆ. ಅಲ್ಲಿ ಸೋಮಣ್ಣಗೆ ಮಾಜಿ ಸಚಿವ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿಲ್ಲವೇ ಎಂದರು.ಯಜಮಾನ್ರು ಶಾಮನೂರು ಹೇಳ್ದೋರಿಗೆ ಟಿಕೆಟ್‌

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೂ ಕಾಂಗ್ರೆಸ್ ಪಕ್ಷ ಸೂಕ್ತ, ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಯಜಮಾನರಾದ ನಮ್ಮ ಪಕ್ಷದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಯಾರಿಗೆ ಹೇಳುತ್ತಾರೋ, ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುವುದು. 2ನೇ ಪಟ್ಟಿಯಲ್ಲಿ ದಾವಣಗೆರೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಅವರು ತಿಳಿಸಿದರು.

ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ, ಆಕಾಂಕ್ಷಿಗಳು ಹೆಚ್ಚಾಗಿ ಇರದಂತಹ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ತಮ್ಮ ಪುತ್ರಿ ಸ್ಪರ್ಧೆ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಪಕ್ಷದ ಯಾರಿಗೆ ಟಿಕೆಟ್ ನೀಡುತ್ತದೋ, ಅಂತಹವರನ್ನು ಗೆಲ್ಲಿಸುವುದಷ್ಟೇ ನಮ್ಮ ಕೆಲಸ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೀರಿನ ಮಿತ ಬಳಕೆಗೆ ಸಚಿವ ರೆಡ್ಡಿ ಕರೆ

ಬೆಂಗಳೂರು ಮಹಾ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣಿಸುತ್ತಿರುವುದು ನಿಜ. ಕಾರು ಇತರೆ ವಾಹನಗಳನ್ನು ತೊಳೆಯದಂತೆ ಸೂಚನೆ ಸಹ ನೀಡಲಾಗಿದೆ. ನೀರು ಬಳಕೆ ಮಿತವಾಗಿರಲೆಂದು ಮನವಿ ಸಹ ಮಾಡಲಾಗಿದೆ. ಒಂದೋ ಎರಡೋ ದೊಡ್ಡ ಮಳೆಗಳಾದರೆ ಅಂತರ್ಜಲ ವೃದ್ಧಿಯಾಗಿ, ನೀರಿನ ಸಮಸ್ಯೆ ನಿವಾರಣೆ ಯಾಗುತ್ತದೆ. ಸದ್ಯಕ್ಕೆ ಜನರೂ ಸಹ ನೀರಿನ ಮಿತ ಬಳಕೆಗೆ ಗಮನ ಹರಿಸಬೇಕು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.