ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆರ್ಥಿಕ ಸಂಪನ್ಮೂಲ ಕ್ರೋಢಿಕರಣಕ್ಕೆ ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿವೇಶನ ಖರೀದಿಸಿ ಕಳೆದ ಐದಕ್ಕೂ ಅಧಿಕ ವರ್ಷಗಳಿಂದ ಮನೆ ಕಟ್ಟಿಕೊಳ್ಳದೆ ಖಾಲಿ ಬಿಟ್ಟಿರುವ ನಿವೇಶನಗಳ ಮೇಲೆ ಶೇಕಡ 25ರಷ್ಟು ದಂಡ ವಿಧಿಸಲು ಚಿಂತನೆ ನಡೆಸಿದೆ.
ಬಿಡಿಎ ಅಭಿವೃದ್ಧಿಪಡಿಸಿದ ಲೇಔಟ್‌ಗಳಲ್ಲಿ ನಿವೇಶನ ಖರೀದಿಸಿದ ಐದು ವರ್ಷಗಳಲ್ಲಿ ಮನೆ ನಿರ್ಮಿಸಬೇಕು. ಒಂದು ವೇಳೆ ಐದು ವರ್ಷ ಕಳೆದರೂ ಮನೆ ನಿರ್ಮಿಸದ ನಿವೇಶನಗಳ ಮಾಲೀಕರಿಂದ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡಲಾಗುತ್ತದೆ.
2020 ಅಕ್ಟೋಬರ್‌ನಲ್ಲಿ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡುವುದನ್ನು ಶೇ.10ರಷ್ಟು ಹೆಚ್ಚಿಗೆ ಮಾಡಲಾಗಿತ್ತು. ಅದರಂತೆ 20/30 ಸುತ್ತಳತೆಯ ನಿವೇಶನಕ್ಕೆ ₹5 ಸಾವಿರ, 20/30ರಿಂದ 30/40ರವರೆಗಿನ ಸುತ್ತಳತೆಯ ನಿವೇಶನಕ್ಕೆ ₹15 ಸಾವಿರ, 30/40 ರಿಂದ 40/60 ಸುತ್ತಳತೆಯ ನಿವೇಶನಕ್ಕೆ ₹1.20 ಲಕ್ಷ ಮತ್ತು 50/80 ಸುತ್ತಳತೆ ನಿವೇಶನಕ್ಕೆ ₹6 ಲಕ್ಷ ದಂಡ ನಿಗದಿಪಡಿಸಲಾಗಿತ್ತು.
ಇದೀಗ ನಿವೇಶನಗಳ ಸುತ್ತಳತೆ ಆಧಾರದಲ್ಲಿ ಖಾಲಿ ನಿವೇಶನಗಳಿಗೆ ಪಾವತಿಸಲಾಗುತ್ತಿರುವ ದಂಡದ ಮೊತ್ತವನ್ನು ಶೇ.25ಕ್ಕೆ ಏರಿಸಲು ಚಿಂತನೆ ನಡೆಸಲಾಗಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಬಿಡಿಎ ಸಲ್ಲಿಸಿದೆ.
ಆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಶುಲ್ಕ ಮತ್ತು ದಂಡದ ಪಟ್ಟಿಯನ್ನು ಬಹಿರಂಗಪಡಿಸುತ್ತಿಲ್ಲ. ಶೀಘ್ರದಲ್ಲೇ ಖಾಲಿ ನಿವೇಶನಗಳ ದಂಡ ಹೆಚ್ಚಳವಾಗಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಸೂರು ಇಲ್ಲದವರಿಗೆ ಸೂರು ಒದಗಿಸುವ ಸದುದ್ದೇಶದಿಂದ ಬಿಡಿಎ ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುತ್ತದೆ. ಆದರೆ, ಉಳ್ಳವರು, ಶ್ರೀಮಂತರು ಈ ನಿವೇಶನಗಳನ್ನು ಖರೀದಿಸಿ, ಮನೆ ಕಟ್ಟಿಕೊಳ್ಳದೇ ಹತ್ತಾರು ವರ್ಷಗಳನ್ನು ಖಾಲಿಯಾಗೇ ಬಿಟ್ಟಿರುತ್ತಾರೆ.
ನಿವೇಶನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದ ನಂತರ ಮಾರಾಟ ಮಾಡಿ ಹಣಗಳಿಸುವ ದುರುದ್ದೇಶ ಅವರದ್ದು. ಇದರಿಂದ ಅರ್ಹ ಬಡವರಿಗೆ ನಿವೇಶನ ಸಿಗುತ್ತಿಲ್ಲ.
ಅಲ್ಲದೇ ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ಹೆಗ್ಗಣ, ಹಾವು, ಚೇಳು, ಸೊಳ್ಳೆ ಇತ್ಯಾದಿಗಳ ಆವಾಸ ತಾಣವಾಗುವ ಸಾಧ್ಯತೆ ಹೆಚ್ಚು. ಇದು ಅಕ್ಕಪಕ್ಕದ ಮನೆಗಳವರಿಗೂ ಸಮಸ್ಯೆ ತಂದೊಡ್ಡುತ್ತದೆ.
ಹೀಗಾಗಿ, ಶೇ.10ರಷ್ಟು ದಂಡ ವಿಧಿಸಿದರೂ ಖಾಲಿ ನಿವೇಶನದಾರರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ದಂಡದ ಮೊತ್ತ ಹೆಚ್ಚಿಸುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಿಡಿಎ ಬಂದಿದೆ ಎನ್ನಲಾಗಿದೆ.
ಬೆಂಗಳೂರಿನಾದ್ಯಂತ ಬಿಡಿಎ ನಿರ್ಮಿಸಿದ 64 ಲೇಔಟ್‍ಗಳಲ್ಲಿ ಸುಮಾರು 70 ಸಾವಿರ ನಿವೇಶನಗಳು ಖಾಲಿಯಿವೆ. ಈ ಪೈಕಿ ಸುಮಾರು 20 ಸಾವಿರ ನಿವೇಶನಗಳನ್ನು ಮಾಡುವಷ್ಟು ಜಾಗ ವ್ಯಾಜ್ಯದಿಂದ (ಲಿಟಿಗೇಷನ್) ಕೂಡಿದೆ.
ಬಿಡಿಎ ನಿಯಮಾವಳಿಗಳ ಪ್ರಕಾರ ಈ ಹಿಂದೆ ‘ಲೀಸ್ ಕಂ ಸೇಲ್ ಡೀಡ್’ ಇತ್ತು. ನಿವೇಶನ ಹಂಚಿಕೆಯಾಗಿ ನೋಂದಣಿಯಾದ ಕೂಡಲೇ ಅದನ್ನು ಮಾರಾಟ ಮಾಡುವ ಹಕ್ಕು ಖರೀದಿದಾರರಿಗೆ ಇತ್ತು.
ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿಯಮ ರದ್ದು ಮಾಡಲಾಗಿದ್ದು, ನಿವೇಶನ ಖರೀದಿಯ ನಂತರ ಹತ್ತು ವರ್ಷಗಳವರೆಗೆ ನಿವೇಶನದ ಮಾರಾಟದ ಹಕ್ಕನ್ನು ಗ್ರಾಹಕರಿಗೆ ನೀಡದೆ ಬಿಡಿಎ ಬಳಿಯೇ ಇಟ್ಟುಕೊಳ್ಳಲು ನಿಯಮ ಜಾರಿತೆ ತರಲಾಗಿದ್ದು, ಈಗಲು ಮುಂದುವರೆದಿದೆ.
ಕೆಂಪೇಗೌಡ ಲೇಔಟ್‌ಗೆ ವಿನಾಯಿತಿ?
ಬಿಡಿಎ ನಿರ್ಮಾಣದ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳಿಗೆ ಈ ನಿಯಮ ಸದ್ಯಕ್ಕೆ ಅನ್ವಯವಾಗುವುತ್ತದೆಯೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ.
ಬಡಾವಣೆ ನಿರ್ಮಾಣಗೊಂಡು ಐದು ವರ್ಷ ಪೂರ್ಣಗೊಂಡಿದ್ದರೂ ನಿವೇಶನದಾರರಿಗೆ ಅಗತ್ಯ ಮೂಲಸೌಲಭ್ಯವನ್ನು ಪ್ರಾಧಿಕಾರ ನೀಡಿಲ್ಲ.
ಹೀಗಾಗಿ ಮನೆಗಳನ್ನು ಕಟ್ಟಿಕೊಳ್ಳಲು ಸಹ ಸಾಧ್ಯವಾಗಿಲ್ಲ. 2020ರಲ್ಲಿ ಖಾಲಿ ನಿವೇಶನಗಳ ನಿರ್ವಹಣೆ ಶುಲ್ಕ ಪರಿಷ್ಕರಣೆ ಸಂದರ್ಭದಲ್ಲೇ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಆಗಿನ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ವಿನಾಯಿತಿ ನೀಡಿದ್ದರು.
ಆದರೆ, ಈಗ ಬಡಾವಣೆಯಲ್ಲಿ ಶೇ.70ಕ್ಕೂ ಹೆಚ್ಚು ಮೂಲಸೌಕರ್ಯ ಕಾಮಗಾರಿ ಮುಕ್ತಾಯವಾಗಿದ್ದು, ಮನೆಗಳನ್ನು ಕಟ್ಟಿಕೊಳ್ಳುತ್ತೇವೆ ಎನ್ನುವವರಿಗೆ ಪ್ರಾಧಿಕಾರವೂ ತಾತ್ಕಾಲಿಕ ವ್ಯವಸ್ಥೆಯನ್ನೂ ಒದಗಿಸುತ್ತಿದೆ.
ಈ ಜೊತೆಯಲ್ಲಿ ಪ್ರಾಧಿಕಾರವು ಹೊಸ ಯೋಜನೆಗಳನ್ನು ಸಹ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಅಗತ್ಯತೆಯೂ ಇದೆ. ಆದ್ದರಿಂದ ಇಲ್ಲಿನ ನಿವೇಶನಗಳ ಮೇಲೂ ದಂಡ ವಿಧಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.