ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಿ: ಡಾ.ಬೋರೇಗೌಡ

| Published : Oct 10 2024, 02:16 AM IST

ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಿ: ಡಾ.ಬೋರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ, ಸಾಹಿತ್ಯ ಕ್ಷೇತ್ರದ ಗಣ್ಯರೇ ಸಮ್ಮೇಳನಾಧ್ಯಕ್ಷರಾಗಬೇಕು. ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷರಾಗುವುದಕ್ಕೆ ನನ್ನ ವಿರೋಧವೂ ಇದೆ. ಜಿಲ್ಲೆಯ ಒಳಗಿನವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿಸುವ ಕುರಿತಂತೆ ಅನೇಕರು ಹಲವು ಹೆಸರುಗಳನ್ನು ಸೂಚಿಸಿದ್ದಾರೆ. ನಮ್ಮಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದ ಮಾತ್ರಕ್ಕೆ ನಮ್ಮವರೇ ಸಮ್ಮೇಳನಾಧ್ಯಕ್ಷರಾಗಬೇಕೆಂಬುದು ಅಸಮಂಜಸ .

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಕರೆತರಬೇಕು ಎಂದು ಹಿರಿಯ ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಅವರು ಅಭಿಪ್ರಾಯಪಟ್ಟರು.

ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗಾಗಿಯೇ ಒಂದು ವಿಭಾಗವನ್ನು ತೆರೆದು ಅವರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಕೆಲಸ ಮಾಡಬೇಕು. ಅವರಿಗಾಗಿಯೇ ಗೋಷ್ಠಿಗಳು, ಪ್ರಶ್ನೋತ್ತರ ವಿಭಾಗವನ್ನು ಸೃಷ್ಟಿಸಬೇಕು. ಇದು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಸಾಹಿತ್ಯದ ಅಭಿವ್ಯಕ್ತ ವಿಧಾನಗಳು ಹಾಗೂ ವಿಷಯಗಳು ವಿಸ್ತರಣೆಗೊಂಡಿವೆ. ಪುಸ್ತಕದ ರೂಪದಲ್ಲಿಯೇ ಸಾಹಿತ್ಯದ ಅಭ್ಯಾಸ ಆಗಬೇಕಿಲ್ಲ, ಗಂಭೀರವಾದ ಸಾಹಿತ್ಯವನ್ನು ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತಪಡಿಸಲು ಅವಕಾಶಗಳಿವೆ. ನವ ಪೀಳಿಗೆಯವರಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿದೆ ಎಂಬುದೆಲ್ಲಾ ಸುಳ್ಳು. ಯುವಜನಾಂಗದಲ್ಲಿ ಸಾಹಿತ್ಯಾಭಿರುಚಿ ಇರುವವರಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿ, ಸಾಹಿತ್ಯದ ನೆಲೆಗೆ ಕರೆತರುವ ದೃಢ ಹೆಜ್ಜೆಗಳನ್ನು ಇಡುವಂತಹ ಕೆಲಸಗಳು ಆಗಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಹಿತ್ಯೇತರರಿಗೆ ಸಮ್ಮೇಳನಾಧ್ಯಕ್ಷ ಸ್ಥಾನ ಬೇಡ:

ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ, ಸಾಹಿತ್ಯ ಕ್ಷೇತ್ರದ ಗಣ್ಯರೇ ಸಮ್ಮೇಳನಾಧ್ಯಕ್ಷರಾಗಬೇಕು. ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷರಾಗುವುದಕ್ಕೆ ನನ್ನ ವಿರೋಧವೂ ಇದೆ. ಜಿಲ್ಲೆಯ ಒಳಗಿನವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿಸುವ ಕುರಿತಂತೆ ಅನೇಕರು ಹಲವು ಹೆಸರುಗಳನ್ನು ಸೂಚಿಸಿದ್ದಾರೆ. ನಮ್ಮಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದ ಮಾತ್ರಕ್ಕೆ ನಮ್ಮವರೇ ಸಮ್ಮೇಳನಾಧ್ಯಕ್ಷರಾಗಬೇಕೆಂಬುದು ಅಸಮಂಜಸ ಎಂದು ಹೇಳಿದರು.

ಮಠಾಧೀಶರು, ರಾಜಕೀಯ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರೆ, ಸಾಧನೆ ಮಾಡಿದ್ದರೆ ಅಂತಹವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ಅಭ್ಯಂತರವಿಲ್ಲ. ಸಾಹಿತ್ಯಕ್ಕಾಗಿ ತಮ್ಮ ಜೀವಮಾನವನ್ನೇ ತೊಡಗಿಸಿಕೊಂಡವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ಹೆಚ್ಚು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ ಎಂದರು.

ಸಾಹಿತ್ಯ ಅಭಿವೃದ್ಧಿಪಡಿಸಿ:

ಸಮ್ಮೇಳನಕ್ಕೆ ಕೋಟ್ಯಂತರ ರು. ಹಣ ವ್ಯಯಿಸುವ ಬದಲಿಗೆ, ಸಾಹಿತಿಗಳನ್ನು ಅಭಿವೃದ್ಧಿಪಡಿಸುವ, ನಾಡು- ನುಡಿಯ ಏಳಿಗೆಗೆ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕು. ಸಾಹಿತ್ಯ ಸಮ್ಮೇಳನ ಅದ್ಧೂರಿ, ವೈಭವ ಪೂರಿತವಾಗಿ ನಡೆಯಬೇಕೆ ಎಂಬ ಪ್ರಶ್ನೆ ಅನೇಕ ಕನ್ನಡಿಗರು, ಸಾಹಿತ್ಯಾಸಕ್ತರಲ್ಲಿದ್ದು, ಈ ಭಾವನೆ ನನ್ನಲ್ಲಿಯೂ ಇದೆ. ಆದರೆ, ಸಮ್ಮೇಳನದ ಹೆಸರಿನಲ್ಲಿ ದುಂದುವೆಚ್ಚ ಮಾಡುವ ಬದಲಿಗೆ ಕನ್ನಡಕ್ಕೆ ವಿಶಿಷ್ಟ ಕೊಡುಗೆ ನೀಡಿ ಸಾಧನೆ ಮಾಡಿದ ಹಿರಿಯ ಮುತ್ಸದ್ದಿ ಲೇಖಕರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಅವರ ಸಾಕ್ಷಿಯಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತಂತೆ ರಚನಾತ್ಮಕ ಚರ್ಚೆಗಳಾಗಿ ಸಾಹಿತ್ಯದ ಮುನ್ನಡೆಗೆ ಮಾರ್ಗಸೂಚಿಸಿ ಮೂಡಿಸುವ ಚರ್ಚಾಗೋಷ್ಠಿ ನಡೆಸಲಿ ಎಂಬುದು ನನ್ನ ಉದ್ದೇಶ ಎಂದು ಹೇಳಿದರು.

ಹಲವು ಕ್ಷೇತ್ರಗಳಲ್ಲಿ ಭಾಷೆ ಬಳಕೆ ಕಡಿಮೆ:

ಸಾರ್ವಜನಿಕ, ವಿಜ್ಞಾನ, ಶಿಕ್ಷಣ, ಆಡಳಿತ, ಸಂಶೋಧನಾ ಕ್ಷೇತ್ರಗಳಲ್ಲಿ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ ಎಂಬುದು ಒಪ್ಪಿಕೊಳ್ಳುವಂತಹ ವಿಷಯ. ಆದರೆ ಕನ್ನಡ ಭಾಷೆಗೆ ತನ್ನದೇ ಆದ ಪಾರಂಪರಿಕ ಶಕ್ತಿಯಿದೆ. ಒಂದು ಜನಭಾಷೆಯಾಗಿ, ಆಡು ನುಡಿಯಾಗಿ ನಶಿಸಿಹೋಗಲು ಸಾಧ್ಯವಿಲ್ಲ. ಭಾಷೆಗೆ ಧಕ್ಕೆಯಾಗುವಂತಹ ಒತ್ತಡಗಳಿದ್ದು, ಬೇರೆ ಭಾಷೆಗಳ ವಲಸೆಯಿಂದ ಕನ್ನಡಿಗರಿಗೆ ಅವಕಾಶ ದೊರೆಯುತ್ತಿಲ್ಲ ಎನ್ನುವುದು ಒಪ್ಪತಕ್ಕ ವಿಚಾರವಾಗಿದೆ. ಆಡಳಿತ ವ್ಯವಸ್ಥೆ ಮಾತೃಭಾಷೆಗೆ, ಭಾಷಿಗರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸ್ಮರಣ ಸಂಚಿಕೆಯಲ್ಲಿ ಐದು ಭಾಗ:

ಸ್ಮರಣ ಸಂಚಿಕೆಯಲ್ಲಿ ಮುಖ್ಯವಾಗಿ ಐದು ಭಾಗಗಳನ್ನು ರೂಪಿಸಿಕೊಳ್ಳಲಾಗಿದ್ದು, ಮೊದಲನೆಯದಾಗಿ ಮಂಡ್ಯ ಪರಿಚಯಿಸುವ ದಿಕ್ಕಿನಲ್ಲಿ ಮಧುರ ಮಂಡ್ಯ ಎಂಬ ಭಾಗದಲ್ಲಿ ಇಲ್ಲಿನ ಸಾಹಿತ್ಯ, ಕೃಷಿ, ಆರೋಗ್ಯ ಇತ್ಯಾದಿಗಳ ಸಾಕ್ಷತಾ ಆಂದೋಲನ, ಕೋವಿಡ್ ಸಂದರ್ಭದ ಸಮಸ್ಯೆಗಳು ಸೇರಿದಂತೆ ಹಲವು ಲೇಖನಗಳು, ಎರಡನೆಯದಾಗಿ ಕರ್ನಾಟಕ ಭಾರತ ಭಾಗದಲ್ಲಿ ರಾಜ್ಯದ ಸಂಬಂಧ ಸಾಹಿತ್ಯಿಕ ವಿದ್ಯಮಾನ, ಸಾಧನೆಗಳು, ಅಭಿವೃದ್ಧಿ ಸಂಬಂಧ ಲೇಖನಗಳು, ಮೂರನೇದಾಗಿ ವಿಶ್ವ ಕರ್ನಾಟಕ ಎಂಬ ಭಾಗದಲ್ಲಿ ಕರ್ನಾಟಕದ ಹೊರಬಾಗದ, ಅನಿವಾಸಿ ಕನ್ನಡಿಗರ ಸಾಧನೆಗಳ, ಹೋರಾಟಗಳ ಪರಿಚಯ ಸಂಬಂಧ ಲೇಖನಗಳು, ನಾಲ್ಕನೆಯದಾಗಿ ಅಭಿವೃದ್ಧಿ ಭಾರತ ಎಂಬ ಭಾಗದಡಿ ದೇಶ- ವಿದೇಶಗಳಲ್ಲಿ ಕನ್ನಡಗರಿಂದಾದ ಅಭಿವೃದ್ಧಿ ಕಾರ್ಯಗಳ ಹಾಗೂ ಅವುಗಳ ಇತಿಮಿತಿಗಳ ಸಂಬಂಧ ಲೇಖನಗಳು, ಐದನೇಯದಾಗಿ ಚಿತ್ರ ಸಂಪುಟ ಭಾಗದಲ್ಲಿ ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಮಹತ್ವ ತಿಳಿಸುವ ಘಟನಾವಳಿಗಳಿಗೆ ಸಂಬಂಧಿಸಿದ ಭಾವಚಿತ್ರಗಳ ಸಂಗ್ರಹದ ಸಂಚಿಕೆ ನಿರ್ಮಿಸಲಾಗುವುದು ಎಂದು ಹೇಳಿದರು.

ಸಂವಾದದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಸಾಹಿತಿ ಕೃಷ್ಣ ಸ್ವರ್ಣಸಂದ್ರ ಇದ್ದರು.