ಸಾರಾಂಶ
ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು ಜನರು ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದಾರೆ. ಜನರು ಬಾಯಾರಿಕೆ ತಣಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪರಿಣಾಮ ಬಡವರ ಫ್ರಿಡ್ಜ್ ಮಡಿಕೆಗೆ ಈಗ ಭಾರಿ ಬೇಡಿಕೆ ಬಂದಿದೆ.
ಶಿವರಾತ್ರಿ ಮುನ್ನ ಶಿವಶಿವಾ ಎನಿಸಿದ ಬಿಸಿಲ ಧಗೆ ದಿನಗಳೆದಂತೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಕಾಮದಹನ ಹಬ್ಬದಲ್ಲಿ ತಾಪಮಾನ ಮಿತಿಮೀರಿದೆ. ಬಿಸಿಲ ಧಗೆ ತಾಳಲಾರದೇ ಜನತೆ ಬೊಬ್ಬೆ ಹಾಕುವಂತಾಗಿದೆ. ಏರು ಬಿಸಿಲಿನ ಪ್ರಬಲ ಹೊಡೆತಕ್ಕೆ ಹೊಟ್ಟೆಗೆ ತಂಪು ನೀರು, ಪಾನೀಯ ಬೇಕೆನಿಸುತ್ತಿದೆ. ಇದೇ ಕಾರಣಕ್ಕೆ ಅವಳಿ ನಗರದಲ್ಲಿ ಮಣ್ಣಿನ ಮಡಿಕೆಗೆ ಬೇಡಿಕೆ ಹೆಚ್ಚಿದೆ. ಬಡವರ ಫ್ರಿಡ್ಜ್ ಎಂದೇ ಹೆಸರಾಗಿರುವ ಮಣ್ಣಿನ ಮಡಿಕೆಗಳನ್ನು ಅನಾದಿ ಕಾಲದಿಂದಲೂ ಬಡವರು ಬಳಸುತ್ತಿದ್ದಾರೆ. ಆಧುನಿಕತೆಯ ಭರಾಟೆ ನಡುವೆಯೂ ಮಣ್ಣಿನ ಮಡಿಕೆಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.ಯಂತ್ರೋಪಕರಣದ ಫೈಬರ್ ಫ್ರಿಡ್ಜ್, ಕೂಲರ್‌ಗಳ ನಡುವೆಯೂ ಮಣ್ಣಿನ ಮಡಿಕೆ ತನ್ನ ಬೇಡಿಕೆ ಉಳಿಸಿಕೊಂಡಿದೆ. ಬಿರುಬೇಸಿಗೆಯಲ್ಲಿ ನೀರು ಕಾಯಿಸಬೇಕಾಗಿಲ್ಲ. ವಾತಾವರಣದ ತಾಪಮಾನಕ್ಕೆ ನೀರು ತನ್ನಿಂತಾನೆ ಬೆಚ್ಚಗಾಗುತ್ತವೆ. ಬಾಯಾರಿದಾಗ ಬಯಸಿ ಕುಡಿಯುವ ನೀರು ಬಿಸಿಯಾಗುವುದರಿಂದ ಹೊಟ್ಟೆಗೆ ಮತ್ತಷ್ಟು ಕಿಚ್ಚು ಹೆಚ್ಚಿದಂತಾಗುತ್ತದೆ. ಹೊಟ್ಟೆ ತಣ್ಣಗಾಗಿಸಲು ಮತ್ತು ದಣಿವು ನಿವಾರಣೆಗೆ ಪ್ರತಿಯೊಬ್ಬರೂ ತಂಪು ನೀರು ಬಯಸುತ್ತಾರೆ. ಮಣ್ಣಿನ ಮಡಿಕೆ ಬೇಸಿಗೆಯಲ್ಲಿ ನೀರನ್ನು ತಣ್ಣಗೆ ಇಡಬಲ್ಲದು. ಒಮ್ಮೆ ಖರೀದಿಸಿದರೆ ಸಾಕು, ಅದು ಬಾಳಿಕೆ ಬರುವಷ್ಟು ದಿನ ನೀರನ್ನು ತಣ್ಣಗೆ ಇಡುತ್ತದೆ. ಅಲ್ಲದೆ ಈಚೆಗೆ ಜನರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಕೃತಕ ತಂಪು ಪಾನೀಯಕ್ಕಿಂತ ನೈಸರ್ಗಿಕವಾಗಿ ತಂಪಾಗುವ ಮಡಿಕೆಯ ನೀರಿನ ಮೊರೆ ಹೋಗುತ್ತಿದ್ದಾರೆ.
ಮಹತ್ವ ಕಳೆದುಕೊಂಡ ಕುಂಬಾರಿಕೆ:ಹಿಂದೆ ಕುಂಬಾರಿಕೆ ನಡೆಯುತ್ತಿತ್ತು. ಆಗ ಮನೆಗೆ ಅಗತ್ಯವಿರುವ ಮಡಿಕೆಗಳನ್ನು ಕುಂಬಾರರಿಂದ ನೇರವಾಗಿ ಖರೀದಿಸಿ ತಂದು ಬಳಸಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕುಂಬಾರಿಕೆ ಮಹತ್ವ ಕಳೆದುಕೊಂಡಿದೆ. ಆದರೂ ರಬಕವಿಯ ಹಿರಿಯ ಬಸಪ್ಪ ಕುಂಬಾರ ಕುಟುಂಬ ಇದೀಗ ಸ್ವತಃ ತಯಾರಿಸಿದ ತರಹೇವಾರಿ ಮಡಿಕೆಗಳನ್ನು ಮಳಿಗೆ ಮೂಲಕ ಮಾರಾಟಕ್ಕೆ ಮುಂದಾಗಿರುವುದು ವಿಶೇಷ. ಮಡಿಕೆಗಳ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಬೆಲೆ ಹೆಚ್ಚಾಗಿದ್ದರೂ ಜನರು ಸಂತೆ ಹಾಗೂ ಮಾರುಕಟ್ಟೆಗೆ ಹೋಗಿ ಖರೀದಿಸುತ್ತಿದ್ದಾರೆ. ಈ ಹಿಂದೆ ಕಪ್ಪು ಬಣ್ಣದ ಮಡಿಕೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈಗ ಕೆಂಪು ಬಣ್ಣದ ಮಡಿಕೆಗಳು ಮಾರುಕಟ್ಟೆಗೆ ಬಂದಿವೆ.ಮಣ್ಣಿನ ಕೊಡಗಳಿಗೆ ಬೇಡಿಕೆ: ಮಾರುಕಟ್ಟೆಗೆ ಬರುತ್ತಿರುವ ಮಡಿಕೆಗೆ ನಲ್ಲಿಯನ್ನು ಅಳವಡಿಸಲಾಗಿದೆ. ಹೂಜಿಗಳು ಸಹ ಲಭ್ಯ. ಕಲಾತ್ಮಕ ಕುಂಡಗಳಿಗಾದರೆ ದುಪ್ಪಟ್ಟು ಬೆಲೆ ತೆರಬೇಕಾಗುತ್ತದೆ. ಬೇಸಿಗೆ ಮುಗಿಯುವವರೆಗೂ ಮಣ್ಣಿನ ಕೊಡಗಳಿಗೆ ಬೇಡಿಕೆ ಹೆಚ್ಚಿದೆ.
ಮಣ್ಣಿನ ಮಡಿಕೆಗಳ ಮಾರಾಟ: ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅದರಲ್ಲೂ ಮಡಿಕೆಗಳನ್ನು ಖರೀದಿಸುತ್ತಿದ್ದಾರೆ. ಬೇಸಿಗೆ ಧಗೆ ಹೆಚ್ಚಿರುವುದರಿಂದ ಮಡಿಕೆ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಇದರಿಂದ ಕುಂಬಾರರ ವ್ಯಾಪಾರ ಗರಿಗೆದರಿದೆ.ನಿರಂತರ ಬೇಡಿಕೆ: ಈ ಮೊದಲು ಬೇಸಿಗೆಯಲ್ಲಿ ಮಾತ್ರ ಮಡಿಕೆಗಳಿಗೆ ಬೇಡಿಕೆಯಿರುತ್ತಿತ್ತು. ಉಳಿದಂತೆ ಮೊಹರಂ, ಹಬ್ಬ ಹಾಗೂ ಜಾತ್ರೆಗಳಲ್ಲಿ ಮಾರಾಟವಾಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಜನತೆ ಸಂಪ್ರದಾಯಿಕ ವಸ್ತುಗಳತ್ತ ವಾಲುತ್ತಿದ್ದು, ಆರೋಗ್ಯಪೂರ್ಣ ಬದುಕಿಗೆ ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ನಾವು ಮನೆಗಳಲ್ಲಿಯೇ ಮಡಿಕೆಗಳನ್ನು ಮಾಡುತ್ತೇವೆ. ಈಗ ವಿಧ ವಿಧವಾದ ಮಡಿಕೆಗಳು ತಯಾರಾಗುತ್ತಿರುವ ಕಾರಣ ಬೇರೆ ಊರುಗಳಿಂದ ತಂದು ಮಾರಾಟ ಮಾಡುತ್ತಿದ್ದೇವೆ. ಒಂದು ಮಡಿಕೆಗೆ ₹೧೫೦ ರಿಂದ ₹ ೧೨೦೦ರವರೆಗೆ ದರ ಇದೆ. ಹೂಜಿ ₹೩೫೦ ರಿಂದ ₹೭೦೦, ಮಣ್ಣಿನ ಫಿಲ್ಟರ್ ₹೭೫೦ - ೧೫೦೦, ಮಣ್ಣಿನ ಕುಕ್ಕರ್ ₹೧೨೦೦- ೩೦೦೦ ಹಾಗೂ ಮಣ್ಣಿನ ಫ್ರಿಡ್ಜ್ ₹೧೫೦೦೦ ವರೆಗೆ ಹೀಗೆ ಹಲವಾರು ವಿಧದಲ್ಲಿ ಮಣ್ಣಿನಿಂದಲೇ ತಯಾರಿಸಲ್ಪಟ್ಟ ವಸ್ತುಗಳು ಮಾರುತ್ತಿದ್ದೇವೆ.
-ಪ್ರಕಾಶ ಕುಂಬಾರ. ಮಡಿಕೆ ವ್ಯಾಪಾರಿ;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))