ಸಾರಾಂಶ
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಕಳೆದ ಜೂನ್ ತಿಂಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ತಾಲೂಕಿನ ಕೃಷ್ಣಾ ನದಿಯ ನೀರಿನ ಹರಿವು ಹೆಚ್ಚಳಗೊಂಡಿದೆ.
ರಬಕವಿ-ಬನಹಟ್ಟಿ : ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಕಳೆದ ಜೂನ್ ತಿಂಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ತಾಲೂಕಿನ ಕೃಷ್ಣಾ ನದಿಯ ನೀರಿನ ಹರಿವು ಹೆಚ್ಚಳಗೊಂಡಿದೆ. ನೀರಿನ ಸೆಳೆತವೂ ತೀವ್ರವಾಗಿದ್ದು, ನದಿಪಾತ್ರದ ಜನತೆ ಯಾವುದೇ ಅಪಾಯಕ್ಕೆ ಆಹ್ವಾನ ನೀಡದೇ ಜನ-ಜಾನುವಾರುಗಳನ್ನು ನದಿಯತ್ತ ತೆರಳದಂತೆ ಜಾಗ್ರತೆ ವಹಿಸಬೇಕೆಂದು ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.
ಕೋಯ್ನಾ 38 ಮಿ.ಮೀ, ರಾಧಾನಗರಿ 79 ಮಿ.ಮೀ, ಮಹಾಬಳೇಶ್ವರ 42 ಮಿ.ಮೀ, ನವಜಾ 38 ಮಿ.ಮೀ, ಕರಾಡ 6 ಮಿ.ಮೀ, ಸಾಂಗಲಿ 2 ಮಿ.ಮೀ, ಕೊಲ್ಹಾಪುರ 5 ಮಿ.ಮೀ ಮಳೆಯಾಗಿದ್ದು, ಮಂಗಳವಾರ ಹಿಪ್ಪರಗಿ ಬ್ಯಾರೇಜ್‌ಗೆ 1,೦೭,೯೨೦ ಕ್ಯುಸೆಕ್ ಒಳಹರಿವಿದ್ದು, ೧,೦೭,೧೭೦ ಕ್ಯುಸೆಕ್ ಹೊರಹರಿವಿದೆ. ಮಳೆ ಪ್ರಮಾಣ ಹೆಚ್ಚಾದಲ್ಲಿ ನದಿಯು ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ತೀರ ಹತ್ತಿರದ ನದಿ ಪಾತ್ರದಲ್ಲಿ ವಾಸಿಸುವ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವುದು ಸೂಕ್ತವೆಂದು ಎಸಿ ಸೂಚಿಸಿದ್ದಾರೆ.
ಎಲ್ಲ ಗೇಟ್‌ಗಳಿಂದ ನೀರು ಬಿಡುಗಡೆ : ಹಿಪ್ಪರಗಿ ಬ್ಯಾರೇಜ್‌ನಲ್ಲಿರುವ ಎಲ್ಲ ೨೨ ಗೇಟ್‌ಗಳ ಮೂಲಕ ಬಂದಷ್ಟೇ ನೀರನ್ನು ಹೊರಕ್ಕೆ ಹಾಕಲಾಗುತ್ತಿದೆ. ಇದರಿಂದಾಗಿ ನದಿ ಸೆಳವಿನ ತೀವ್ರತೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಕ್ಷಣ ಕ್ಷಣದ ಮಾಹಿತಿ ಪಡೆಯುವ ಮೂಲಕ ನದಿ ಪಾತ್ರದ ಜನತೆ ಸುರಕ್ಷತೆ ಹಾಗೂ ಅಗತ್ಯವಾದಲ್ಲಿ ಸ್ಥಳಾಂತರಕ್ಕೆ ಸನ್ನದ್ಧವಿರುವಂತೆ ಎಸಿ ಶ್ವೇತಾ ಆದೇಶಿಸಿದ್ದಾರೆ.
ರಬಕವಿ ಜನತೆಗೆ ಪ್ರವಾಹ ಭೀತಿ : ರಬಕವಿಯ ಹೊಸಪೇಟೆ ಲೇನ್, ಮುತ್ತೂರ ಗಲ್ಲಿ, ಮಟ್ಟಿಕಲ್ಲಿ ಲೇನ್, ಬೀಳಗಿ ಗಲ್ಲಿ, ಯಾತಗೇರಿ ಓಣಿ, ಕಡಾಲಕಟ್ಟಿ ಲೇನ್ ಪ್ರದೇಶಗಳ ನಾಗರಿಕರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಪ್ರತಿ ಎರಡ್ಮೂರು ವರ್ಷಗಳಿಗೊಮ್ಮೆ ಪ್ರವಾಹದಿಂದ ಅಪಾರ ನಷ್ಟ ಅನುಭವಿಸುತ್ತಿರುವ ಜನತೆ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಶಕಗಳಿಂದಲೂ ನಮಗೆ ಪುನರ್ವಸತಿ ಕಲ್ಪಿಸಲು ಮೊರೆಯಿಟ್ಟರೂ ಪರಿಗಣಿಸುತ್ತಿಲ್ಲ. ಆದರೆ ಹನಿ ನೀರು ಸೊಂಕದ ಗ್ರಾಮವೊಂದನ್ನು ಸಂಪೂರ್ಣ ಮುಳುಗಡೆಯೆಂದು ಪರಿಗಣಿಸಿ ಪುನರ್ವಸತಿ ಜಾಗೆ ಕಾಯ್ದಿಟ್ಟಿದ್ದಾರೆ. ನಿಜಕ್ಕೂ ಬಾಧಿತ ಪ್ರದೇಶಗಳಾಗಿರುವ ಮತ್ತು ಈಗಾಗಲೇ ಕೊಳಚೆ ಪ್ರದೇಶವೆಂದು ಘೋಷಿತ ರಬಕವಿಯ ನಿವಾಸಿಗಳಿಗೆ ನ್ಯಾಯ ಒದಗಿಸಬೇಕೆಂದು ಮುಳುಗಡೆ ಸಂತ್ರಸ್ತರ ಹೋರಾಟ ಸಮೀತಿ ಧುರೀಣರಾದ ಪ್ರಕಾಶ ಬೀಳಗಿ, ಗಜಾನನ ತೆಗ್ಗಿ ಆಗ್ರಹಿಸಿದ್ದಾರೆ.