ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇರುವ ಬೆಳೆ ನಷ್ಟ, ರೈತರಿಗೆ ಸಂಕಷ್ಟ

| Published : Jul 26 2024, 01:31 AM IST

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇರುವ ಬೆಳೆ ನಷ್ಟ, ರೈತರಿಗೆ ಸಂಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮಳೆ ಹಾಗೂ ನದಿಗಳಲ್ಲಿ ನೀರಿನ ಹರಿವು ಇಳಿಮುಖವಾಗಿದ್ದು, ಹೊಲಗಳಿಗೆ ನುಗ್ಗಿದ್ದ ನದಿ ನೀರು ಕೂಡ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ, ಜಮೀನಿನಲ್ಲಿ ನಿಂತ ನೀರು ಇನ್ನೂ ಇಳಿಯದ್ದರಿಂದ ಬೆಳೆ ಕೊಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

ಹಾವೇರಿ: ಜಿಲ್ಲೆಯಲ್ಲಿ ಮಳೆ ಹಾಗೂ ನದಿಗಳಲ್ಲಿ ನೀರಿನ ಹರಿವು ಇಳಿಮುಖವಾಗಿದ್ದು, ಹೊಲಗಳಿಗೆ ನುಗ್ಗಿದ್ದ ನದಿ ನೀರು ಕೂಡ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ, ಜಮೀನಿನಲ್ಲಿ ನಿಂತ ನೀರು ಇನ್ನೂ ಇಳಿಯದ್ದರಿಂದ ಬೆಳೆ ಕೊಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬೀಳುತ್ತಿರುವ ಮಳೆ ಹಾಗೂ ತುಂಗಭದ್ರಾ, ವರದಾ, ಕುಮದ್ವತಿ, ಧರ್ಮಾ ನದಿಗಳಲ್ಲಿ ಕಳೆದ ಒಂದು ವಾರದಿಂದ ತುಂಬಿ ಹರಿಯುತ್ತಿದ್ದರಿಂದ ನದಿ ಪಾತ್ರದ ಹೊಲಗದ್ದೆಗಳು ಮುಳುಗಡೆಯಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ೩೮೨೮ರೈತರ ೩೩೦೪ ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಹಾಗೂ ೫೧೧ ರೈತರ ೨೧೮ ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಯಾಗಿರುವ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿದೆ.೧೭೮೧ ಹೆಕ್ಟೇರ್ ಮೆಕ್ಕೆಜೋಳ, ೫೬೯ ಹೆಕ್ಟೇರ್ ಸೋಯಾಬಿನ್, ೩೩೪ ಹೆಕ್ಟೇರ್ ಶೇಂಗಾ, ೪೮೫ ಹೆಕ್ಟೇರ್ ಹತ್ತಿ, ೩೫ ಹೆಕ್ಟೇರ್ ಹೆಸರು, ೧೨೦ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹುರುಳಿ, ಅವರೆ ಸೇರಿದಂತೆ ೩೩೦೪ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇನ್ನೂ ಹಲವು ಗ್ರಾಮಗಳ ಹೊಲದಲ್ಲಿ ನದಿ ನೀರು ತುಂಬಿ ನಿಂತಿದೆ. ಇನ್ನೂ ಹೆಚ್ಚಿನ ಬೆಳೆ ಹಾನಿಯಾಗುವ ಸಾಧ್ಯತೆಯಿದೆ. ಬೆಳ್ಳುಳ್ಳಿ, ಬಾಳೆ ತೋಟ, ಹಾಗಲಕಾಯಿ, ಮೆಣಸಿನಕಾಯಿ, ಕ್ಯಾಬೀಜ, ಶುಂಠಿ, ಟೊಮೊಟೊ, ಈರುಳ್ಳಿ ಮುಂತಾದ ೨೧೮ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಕೂಡ ಹಾಳಾಗಿದೆ. ಈ ಸಲ ಮುಂಗಾರು ವಿಳಂಬವಾದರೂ ಕೆಲ ದಿನಗಳಲ್ಲೇ ಸುರಿದ ಮಳೆ ಮಾಡಿದ ಅವಾಂತರದ ಪ್ರಮಾಣ ಮಾತ್ರ ಹೆಚ್ಚಿದೆ.೭೪೬ ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಮುಂಗಾರು ಮಳೆಗೆ ೭೪೬ ಮೆನಗಳು ಧರೆಗುರುಳಿವೆ. ಮಳೆಯಿಂದ ತೇವಗೊಂಡ ಗೋಡೆ, ಚಾವಣಿಗಳು ಬೀಳುತ್ತಲೇ ಇವೆ. ಗುರುವಾರ ೩ ಮನೆ ತೀವ್ರ ಹಾನಿ ಹಾಗೂ ೧೩೩ ಮನೆ ಭಾಗಶಃ ಹಾನಿಯಾದ ಬಗ್ಗೆ ವರದಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಇದುವರೆಗೆ ೭೪೬ ಮನೆಗಳಿಗೆ ಹಾನಿಯಾಗಿದ್ದು, ೮ ದನದ ಕೊಟ್ಟಿಗೆಗಳು ಹಾನಿಗೀಡಾಗಿವೆ.ಜೀವಹಾನಿ: ಸವಣೂರು ತಾಲೂಕಿನ ಮಾದಾಪುರದಲ್ಲಿ ಮನೆ ಚಾವಣಿ ಕುಸಿದು ಮೂವರು, ಹಿರೇಕೆರೂರಿನಲ್ಲಿ ಮರ ಬಿದ್ದು ಇಬ್ಬರು ಸೇರಿದಂತೆ ಐದು ಜನರು ಮೃತಪಟ್ಟಿದ್ದರೆ, ನಾಲ್ವರು ಗಾಯಗೊಂಡಿದ್ದಾರೆ. ಮೂರು ಜಾನುವಾರುಗಳು ಮೃತಪಟ್ಟಿದ್ದು, ಗುರುವಾರ ಹಾನಗಲ್ಲ ತಾಲೂಕಿನ ಸಾವಿಕೇರಿ ಗ್ರಾಮದಲ್ಲಿ ದನದ ಕೊಟ್ಟಿಗೆ ಬಿದ್ದು ಆಕಳು ಮೃತಪಟ್ಟಿದೆ.ತೆರವಾಗದ ಸೇತುವೆ ಮೇಲಿನ ನೀರು: ವರದಾ, ತುಂಗಭದ್ರ, ಕುಮದ್ವತಿ, ಧರ್ಮಾ ನದಿಯಲ್ಲಿ ನೀರಿನ ಅಬ್ಬರ ಕಡಿಮೆಯಾಗಿದೆ. ಆದರೂ, ಕಳೆದ ಕೆಲ ದಿನಗಳಿಂದ ಮುಳುಗಡೆಯಾಗಿರುವ ಹಾವೇರಿ ತಾಲೂಕಿನ ನಾಗನೂರು- ಕೂಡಲ, ಕರ್ಜಗಿ ಚಿಕ್ಕಮುಗದೂರು, ಸವಣೂರು ತಾಲೂಕಿನ ಕಳಸೂರು-ಕೋಳೂರು, ಚಿಕ್ಕಮುಗದೂರು-ಕರ್ಜಗಿ, ಕೋಣನತಂಬಗಿ-ಹಿರೇಮರಳಿಹಳ್ಳಿ, ಹಾನಗಲ್ಲ ತಾಲೂಕಿನ ಆಡೂರು-ತುಮರಿಕೊಪ್ಪ, ಬಾಳಂಬೀಡ-ಲಕಮಾಪುರ, ಕೂಡಲ-ನಾಗನೂರು, ರಾಣೆಬೆನ್ನೂರು ತಾಲೂಕಿನ ಹೊಳೆಅನ್ವೇರಿ- ಮುಷ್ಟೂರು, ಅಂತರವಳ್ಳಿ-ಲಿಂಗದಹಳ್ಳಿ, ಹಿರೇಮಾಗನೂರು-ಕೋಣನತಲಿ, ರಟ್ಟೀಹಳ್ಳಿ ತಾಲೂಕಿನಿಂದ ಯಲಿವಾಳ-ರಟ್ಟೀಹಳ್ಳಿ ಸೇತುವೆ ಮುಳುಗಡೆಯಾಗಿವೆ. ಹೀಗಾಗಿ ಈ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಪಾರ್ಯಯ ಮಾರ್ಗವಾಗಿ ಸಂಪರ್ಕಿಸಲಾಗುತ್ತಿದೆ. ಮಳೆ ಹೀಗೆ ತಗ್ಗಿದರೆ ಎರಡ್ಮೂರು ದಿನಗದಲ್ಲಿ ನದಿ ನೀರಿನ ಹರಿವು ಮತ್ತಷ್ಟು ತಗ್ಗಿ ಸೇತುವೆ ಮೇಲೆ ರಸ್ತೆ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.ನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಇಳಿಕೆಯಾಗಿದ್ದು, ವರದಾ ಮತ್ತು ತುಂಗಭದ್ರಾ ನದಿ ಪಾತ್ರದ ಹೊಲಗಳಲ್ಲಿ ನೀರು ತುಂಬಿ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗುವ ಸಂಭವವಿದೆ. ಜಮೀನುಗಳಲ್ಲಿ ಮಳೆ ನೀರು ಇಳಿದ ಮೇಲೆ ನಿಖರವಾದ ಹಾನಿ ಎಷ್ಟು ಎಂಬುದು ಗೊತ್ತಾಗಲಿದೆ. ಮುಳುಗಡೆಯಾದ ಸೇತುವೆಗಳ ಮೇಲೆ ಸಾರ್ವಜನಿಕರು ಓಡಾಡದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಜಿಲ್ಲಾಡಳಿತದ ಪಿಡಿ ಖಾತೆಯಲ್ಲಿ ೧೬.೪೩ಕೋಟಿ, ತಹಸೀಲ್ದಾರ್ ಖಾತೆಯಲ್ಲಿ ೫.೭೫ಕೋಟಿ ಸೇರಿ ಒಟ್ಟು ೨೨.೧೮ಕೋಟಿ ರು. ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.