ಸಾರಾಂಶ
ರಾಮನಗರ: ವಿದ್ಯಾರ್ಥಿ ಸಮುದಾಯವನ್ನು ಸರಿದಾರಿಯತ್ತ ಮುನ್ನಡೆಸುವ ಶಕ್ತಿ ಉಪನ್ಯಾಸಕರಿಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಅಭಿಪ್ರಾಯಪಟ್ಟರು.
ನಗರದ ಗೌಸಿಯಾ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಜಿಲ್ಲಾ ಪ್ರಾಂಶುಪಾಲರ ಸಂಘ, ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಆಯೋಜಿಸಿದ್ದ ಉಪನ್ಯಾಸಕರ ಒಂದು ದಿನದ ವಿಷಾಯಾಧಾರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನೆಟ್ಟ ಸಸಿಗೆ ನೀರು ಗೊಬ್ಬರ ಹಾಕಿ, ಪೋಷಣೆ ಮಾಡಿದರೆ, ಅದು ಹೇಗೆ ಹೆಮ್ಮರವಾಗಿ ಬೆಳೆದು ಸತ್ಫಲಗಳನ್ನು ನೀಡುತ್ತದೆಯೋ ಅದೇರೀತಿ ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕತೆ, ದೇಶ ಪ್ರೇಮ, ಶ್ರಮ ಸಂಸ್ಕೃತಿಯನ್ನು ಬೆಳೆಸಿದಾಗ ಅಸಾಮರಸ್ಯ ಮತ್ತು ಅಸಮಾನತೆ ಅಳಿದು ದೇಶ ಅಭಿವೃದ್ಧಿ ಸಾಧಿಸುತ್ತದೆ ಎಂದರು.ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ ನಿರತ ಉಪನ್ಯಾಸಕರಿಗೆ ತರಬೇತಿ ನೀಡುವುದು ಕೆಲಸದಲ್ಲಿ ನೈತಿಕತೆ, ಏಕಾಗ್ರತೆ ತರಲು, ಆಧುನಿಕ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳಲು, ಜ್ಞಾನದ ಬಳಕೆಯಲ್ಲಿ ನವೀನತೆ ರೂಢಿಸಲು, ಕೌಶಲಗಳನ್ನು ಕಲಿತು ವಿದ್ಯಾರ್ಥಿಗಳಿಗೂ ಕಲಿಸಿ, ಉತ್ತಮ ಫಲಿತಾಂಶ ಪಡೆಯಲು ಹಾಗೂ ಭವಿಷ್ಯದಲ್ಲಿ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ನೆರವಾಗುತ್ತದೆ. ಈ ದಿಶೆಯಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜಿಲ್ಲಾ ಪ್ರಾಂಶುಪಾಲರ ಸಂಘ ಉಪನ್ಯಾಸಕರಿಗೆ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ ಅಯೋಜಿಸಿರುವುದು ಶ್ಲಾಘನೀಯ ಎಂದರು.
ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ಅರ್ಥಶಾಸ್ತ್ರ ಪ್ರಸಕ್ತ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸುವ, ಸಮಸ್ಯೆಗಳನ್ನು ಪರಿಹರಿಸುವ ಸಮಾಜಿಕ ವಿಜ್ಞಾನವಾಗಿ ಕಾರ್ಯ ನಿರ್ವಹಿಸುವ ಪ್ರಧಾನ ಪಾತ್ರವಹಿಸುತ್ತದೆ. ದೇಶ ಪ್ರಸ್ತುತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪಠ್ಯ ಕ್ರಮಕ್ಕೆ ಸಂಯೋಜಿಸಿ ಬೋಧಿಸುವ ಕಲೆ ಉಪನ್ಯಾಸಕರಿಗೆ ಇದ್ದಾಗ, ವಿದ್ಯಾರ್ಥಿಗಳು ಪಾಠದತ್ತ ಅಸಕ್ತಿ ಹೊಂದುತ್ತಾರೆ ಎಂದು ತಿಳಿಸಿದರು.ಪ್ರತಿಯೊಬ್ಬ ಉಪನ್ಯಾಸಕರು ವಿದ್ಯಾರ್ಥಿಗಳ ಫಲಿತಾಂಶ ಉತ್ತಮಪಡಿಸುವ ನಿರ್ದಿಷ್ಟ ಗುರಿ ಮತ್ತು ಉದ್ದೇಶ ಹೊಂದಿರಬೇಕು. ಉಪನ್ಯಾಸಕರು ಒಂದು ಗಂಟೆ ಪಾಠ ಮಾಡಲು ಹತ್ತು ಗಂಟೆ ಓದಬೇಕು. ಕಥೆ, ಕಾದಂಬರಿ, ವೃತ್ತ ಪತ್ರಿಕೆಗಳನ್ನು ನಿತ್ಯ ಅಧ್ಯಯನ ಮಾಡಿ, ತಾವು ತಿಳಿದ ವಿಚಾರಗಳನ್ನು ವಿಭಿನ್ನ ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುವ ಜಾಣ್ಮೆ ಇರಬೇಕು. ಶಿಕ್ಷಣಕ್ಕೆ ಸಮಾಜವನ್ನು ಉನ್ನತೀಕರಿಸುವ ಶಕ್ತಿ ಇದೆ. ಶಿಕ್ಷಣವನ್ನು ಕಲಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಭಾವನೆ ಪ್ರತೀ ಉಪನ್ಯಾಸಕರಲ್ಲಿ ಇರಬೇಕು ಎಂದು ಹೇಳಿದರು.
ಕಲಿಕೆಯಲ್ಲಿ ಹಿಂದುಳಿದವರನ್ನು ಗುರ್ತಿಸಿ, ವಿಶೇಷ ತರಗತಿ ತೆಗೆದುಕೊಳ್ಳಬೇಕು. ಗುಂಪು ಓದು, ಕಿರು ಪರೀಕ್ಷೆ ನಡೆಸಿ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ವಾಕ್ಯಗಳ ಬರೆವಣಿಗೆ, ವಿಚಾರ ಮಂಡನೆಯ ದೋಷಗಳನ್ನು ತಿದ್ದಿ, ಸರಿಪಡಿಸುವ ವ್ಯವದಾನ ಮತ್ತು ಹೃದಯ ಶ್ರೀಮಂತಿಕೆ ಉಪನ್ಯಾಸಕರಲ್ಲಿ ಇರಬೇಕು. ಅಂತಹ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಅನುಸರಿಸುವ, ಅವರ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ಉನ್ನತ ಶಿಕ್ಷಣದತ್ತ ಒಲವು ಬೆಳೆಸಿಕೊಳ್ಳುತ್ತಾರೆ. ಪದವೀಧರರಾಗಿ ಬದುಕು ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸುತ್ತಾರೆ ಎಂದರು.ಲೇಖಕ ಡಾ.ಎಚ್.ಆರ್.ಕೃಷ್ಣಯ್ಯಗೌಡ ಮಾತನಾಡಿ, ಭಾರತದ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಬದಲಾವಣೆ ತರಬೇಕು. ಪಠ್ಯದಲ್ಲಿ ಕಲಿತ ಜ್ಞಾನವನ್ನು ಆಯಾ ಭೂಪ್ರದೇಶಗಳ ಕೃಷಿ, ಕೈಗಾರಿಕೆ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವಂತೆ ರೂಪಿಸಬೇಕು. ಪ್ರಾಯೋಗಿಕವಾಗಿ ಅನ್ವಯಿಸುವಿಕೆಯ ನೆಲೆಯಲ್ಲಿ ಬೋಧಿಸುವ ಕೆಲಸ ಆಗಬೇಕು. ಪಠ್ಯಕ್ರಮ ಹಳೆಯದಾಗಿ, ಕಲಿತರೂ ಪ್ರಯೋಜನಕ್ಕೆ ಬಾರದಿದ್ದಾಗ ಅಧ್ಯಯನದ ಕಡೆಗೆ ವಿದ್ಯಾರ್ಥಿಗಳು ನಿರಾಸಕ್ತಿ ಹೊಂದುತ್ತಾರೆ. ಅದು ದೇಶದ ಶೈಕ್ಷಣಿಕೆ ಹಿನ್ನಡೆ ಮತ್ತು ಅನಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವಿಶ್ಲೇಷಣೆ ಮಾಡುವಿಕೆ, ಸಮಸ್ಯೆ ಪರಿಹರಿಸುವಿಕೆ, ವಿಮರ್ಶಿಸುವಿಕೆ, ತಾರ್ಕಿಕ ಚಿಂತನಶೀಲತೆ ಬೆಳೆಸುವ ಕಡೆಗೆ ಗಮನ ಹರಿಸಿದೆ ಎಂದರು.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ಕಳೆದ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ರಾಜ್ಯಮಟ್ಟದ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ 16 ನೇ ಸ್ಥಾನದಲ್ಲಿದೆ. ಅದನ್ನು ಈ ವರ್ಷ ಹತ್ತರೊಳಗೆ ತರುವ ಸದುದ್ದೇಶದಿಂದ ಎಲ್ಲಾ ವಿಷಯಗಳ ಉಪನ್ಯಾಸಕರಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಗೌಸಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಜರುಲ್ಲಾ ಖಾನ್, ಉಪನ್ಯಾಸಕರುಗಳಾದ ಸಿ.ಬೆಟ್ಟಸ್ವಾಮಿ, ಎಂ.ಪಿ.ವಿಜಯ್, ಡಾ.ಕೆ.ಎಂ.ಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಸದಾನಂದ, ಡಾ.ದೀಪಾ, ಧರ್ಮೇಂದ್ರ ಉಪಸ್ಥಿತರಿದ್ದರು.27ಕೆಆರ್ ಎಂಎನ್ 3.ಜೆಪಿಜಿರಾಮನಗರದ ಗೌಸಿಯಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ವಿಷಾಯಾಧಾರಿತ ಕಾರ್ಯಾಗಾರವನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಉದ್ಘಾಟಿಸಿದರು.