ಭಾರತದ್ದು ವಿಶ್ವ ಶ್ರೇಷ್ಠ ಸಂವಿಧಾನ: ಮಾಜಿ ಸಚಿವ ಪ್ರಭು ಚವ್ಹಾಣ

| Published : Jan 27 2024, 01:15 AM IST

ಸಾರಾಂಶ

ಎಲ್ಲ ಧರ್ಮಿಯರು ವಾಸಿಸುವ ಭಾರತ ದೇಶದ ವಿವಿಧತೆಯಲ್ಲಿ ಏಕತೆ ವಿಶೇಷತೆಯಾಗಿದೆ. ಸಂವಿಧಾನವು ದೇಶದ ಎಲ್ಲ ನಾಗರಿಕರಿಗೂ ಸಮಾನವಾದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸಿದೆ ಎಂದು ಮಾಜಿ ಸಚಿವ ಪ್ರಭು ಚವ್ಹಾಣ ಹೇಳಿದರು.

ಕನ್ನಡಪ್ರಭ ವಾರ್ತೆ ಔರಾದ್

ಲಿಂಗ, ವರ್ಗ, ಧರ್ಮ ಮತ್ತು ಜನಾಂಗೀಯ ಆಧಾರಿತ ಕಾನೂನು, ನಿಯಮಗಳಿಂದ ನೈಜ ಸ್ವಾತಂತ್ರ್ಯ ನೀಡಿರುವ ಭಾರತ ದೇಶದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನವಾಗಿದೆ ಎಂದು ಮಾಜಿ ಸಚಿವ ಶಾಸಕ ಪ್ರಭು ಚವ್ಹಾಣ ಹೇಳಿದರು.

ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವ ನಿಮಿತ್ತ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಶುಕ್ರವಾರ ಜರುಗಿದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಎಲ್ಲ ಧರ್ಮಿಯರು ವಾಸಿಸುವ ಭಾರತ ದೇಶದ ವಿವಿಧತೆಯಲ್ಲಿ ಏಕತೆ ವಿಶೇಷತೆಯಾಗಿದೆ. ಸಂವಿಧಾನವು ದೇಶದ ಎಲ್ಲ ನಾಗರಿಕರಿಗೂ ಸಮಾನವಾದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸಿದೆ. ಡಾ.ಬಿ.ಆರ್ ಅಂಬೇಡ್ಕರ್ ಮಹೋನ್ನತ ಉದ್ದೇಶಗಳೊಂದಿಗೆ ಸಂವಿಧಾನ ರಚಿಸಿದ್ದಾರೆ. ನಮ್ಮ ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕೆಂದರು.

ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶ ಕಲ್ಪಿಸಿರುವ ಭಾರತದ ಸಂವಿಧಾನ ದೇಶದ ಆದರ್ಶಗಳಿಗೆ ಹಿಡಿದ ಕನ್ನಡಿ. ಶಿಕ್ಷಣ, ಆರೋಗ್ಯ, ಕೃಷಿ ಸೇರಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. 13 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಿಸುವುದು, ಕಾರಂಜಾ ಜಲಾಶಯದಿಂದ ಔರಾದ್ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ₹84 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ಪಡೆದಿದ್ದು, ಶೀಘ್ರ ಕೆಲಸ ಆರಂಭಿಸಲಾಗುತ್ತದೆ ಎಂದರು.

ಹೊರಂಡಿ, ಚಿಂತಾಕಿ ಹಾಗೂ ಬಲ್ಲೂರನಲ್ಲಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ₹73 ಕೋಟಿ ವಿವಿಧ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದ್ದು, ಕೆಲಸಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. ಔರಾದ್ ಪಟ್ಟಣದಲ್ಲಿ ಉದ್ಯಾನವನ ನಿರ್ಮಾಣವಾಗುತ್ತಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧ ಎಂದು ತಿಳಿಸಿದರು.

ರಾಯಣ್ಣ ಭಾವಚಿತ್ರಕ್ಕೆ ಪುಷ್ಪ ನಮನ:

ಕಾರ್ಯಕ್ರಮಕ್ಕೂ ಮುನ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೆ ನಿಮಿತ್ತ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಧ್ವಜಾರೋಹಣ ನೆರವೇರಿಸಿದರು.

ತೋರ್ಣಾ ಪ್ರಾಥಮಿಕ ಶಾಲೆ ಸಂಪನ್ಮೂಲ ಶಿಕ್ಷಕ ರವಿಕುಮಾರ ವರೂರ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಟಿಎಚ್‌ಒ ಡಾ.ಗಾಯತ್ರಿ, ಬಿಇಒ ವಿಜಯಲಕ್ಷ್ಮಿ, ಎಇಇ ವೆಂಕಟರಾವ ಶಿಂಧೆ, ಎಇಇ ವೀರಶೆಟ್ಟಿ ರಾಠೋಡ್, ಮಾಣಿಕ ನೇಳಗಿ ಸೇರಿ ಇತರರಿದ್ದರು.