ಸಾರಾಂಶ
ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಯುವ ನ್ಯಾಯವಾದಿ ಶ್ರೀನಿಧಿ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಸ್ವಾತಂತ್ರ್ಯ ಪಡೆದು ಬ್ರಿಟಿಷರ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಏರಿಸಿದ ಪ್ರತೀಕವಾಗಿ ಆ.15ರಂದು ಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಸುಮಾರು 2 ವರ್ಷ 11 ತಿಂಗಳು 18 ದಿನದಲ್ಲಿ ರಚನೆಯಾದ ಸಂವಿಧಾನವನ್ನು ಅಂಗೀಕರಿಸಿ, ರಾಜತಂತ್ರದಿಂದ ಗಣತಂತ್ರ ವ್ಯವಸ್ಥೆಗೆ ಬದಲಾದ ಪ್ರತೀಕವಾಗಿ ಜ.26ರಂದು ಧ್ವಜ ಅನಾವರಣಗೊಳಿಸಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಧ್ವಜ ಆರೋಹಣ ಹಾಗೂ ಅನಾವರಣಕ್ಕೆ ವ್ಯತ್ಯಾಸವಿದೆ ಎಂದು ಯುವ ನ್ಯಾಯವಾದಿ ಶ್ರೀನಿಧಿ ಹೆಗ್ಡೆ ತಿಳಿಸಿದರು.ಅವರು ಇಲ್ಲಿನ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಆ.15 ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದ ದಿನ. ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸಿದ ಕ್ಷಣ. ಬ್ರಿಟಿಷರ ಧ್ವಜ ಇಳಿಸಿ ಭಾರತದ ಹೊಸ ಬಾವುಟ ಹಾರಿಸಿದ ದಿನ. ಹೀಗಾಗಿ ಆ ದಿನದಂದು ಧ್ವಜವನ್ನು ಹಗ್ಗದಿಂದ ಕೆಳಗಿನಿಂದ ಮೇಲಕ್ಕೆ ಎಳೆಯಲಾಗುತ್ತದೆ, ನಂತರ ಅದನ್ನು ಬಿಚ್ಚಲಾಗುತ್ತದೆ ಮತ್ತು ಹಾರಿಸಲಾಗುತ್ತದೆ ಇದನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಫ್ಲಾಗ್ ಹೋಸ್ಟಿಂಗ್ ಎನ್ನುತ್ತಾರೆ.ಆದರೆ ಜ.26 ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ಅದಾಗಲೇ ಸ್ವಾತಂತ್ರ್ಯ ಬಂದಾಗಿತ್ತು. ಹೀಗಾಗಿ, ತಳದಿಂದ ಮೇಲಕ್ಕೆ ಬಾವುಟ ಹಾರಿಸಬೇಕಿಲ್ಲ. ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಿ ನಂತರ ಅದನ್ನು ಬಿಚ್ಚಲಾಗುತ್ತದೆ ಮತ್ತು ಹಾರಿಸಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಧ್ವಜ ಅನಾವರಣ ಎಂದು ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಫ್ಲ್ಯಾಗ್ ಆನ್ ಫರ್ಲಿಂಗ್ ಎಂದು ಕರೆಯಲಾಗುತ್ತದೆ ಎಂದರು.ಆ.15ರಂದು ಸರ್ಕಾರದ ಮುಖ್ಯಸ್ಥ ಪ್ರಧಾನ ಮಂತ್ರಿ, ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ದೇಶದಲ್ಲಿ ಸಂವಿಧಾನದ ಅನುಷ್ಠಾನದ ಆಚರಣೆ ಜ.26ರ ಗಣರಾಜೋತ್ಸವದಲ್ಲಿ ಸಂವಿಧಾನದ ಮುಖ್ಯಸ್ಥರಾದ ರಾಷ್ಟ್ರಪತಿ ಅವರು ನವದೆಹಲಿಯ ಕರ್ತವ್ಯ ಪಥ್‌ನಲ್ಲಿ ಧ್ವಜ ಅನಾವರಣ ಮಾಡುತ್ತಾರೆ. ಅವರು ಒಂದು ದಿನ ಮುಂಚಿತವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ವಿವರಣೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ ವಹಿಸಿದ್ದರು. ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷ ಶಶಿರಾಜ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ವಿಭಾಗ ಮುಖ್ಯಶಿಕ್ಷಕಿ ರೇಷ್ಮಾ ಪ್ರಭು, ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು, ಪಾಲಕರು, ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿ ದಿಶಾ ಸಾಲ್ವಂಕರ್ ಸ್ವಾಗತಿಸಿದರು. ಲಿಖಿತಾ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.