ಸಾರಾಂಶ
- ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 5 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ತಾಲೂಕಿನ ಎಲ್ಲಾ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡುತ್ತೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ಭರವಸೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 5 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ತಾ.ಪ್ರಾ.ಶಾಲಾ ಶಿಕ್ಷಕರ ಸಂಘದವರು ಪ್ರತಿ ವರ್ಷ ಗುಣಮಟ್ಟದ ಕ್ಯಾಲೆಂಡರ್ ಬಿಡುಗಡೆ ಮಾಡಿ ಎಲ್ಲಾ ಶಿಕ್ಷಕರಿಗೆ ನೀಡುತ್ತಿದ್ದಾರೆ. ಸಂಘದವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರಿಗೆ ಯಾವುದೇ ಸಮಸ್ಯೆ ಇದ್ದರೂ ಶಿಕ್ಷಣ ಇಲಾಖೆಯ ಮೂಲಕ ಅಥವಾ ನನಗೆ ನೇರವಾಗಿ ತಿಳಿಸಬಹುದು. ಗುರುಭವನದ ನವೀಕರಣಕ್ಕೆ ನನ್ನ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು. ನರಸಿಂಹರಾಜಪುರ ತಾಲೂಕಿನಲ್ಲಿ ಪ್ರತಿ ವರ್ಷ ಎಸ್‌ಎಸ್‌ಎಲ್ ಸಿ ಫಲಿತಾಂಶ ಏರಿಕೆಯಾಗುತ್ತಾ ಬಂದಿದ್ದು ಇದಕ್ಕೆ ಶಿಕ್ಷಕರ ಶ್ರಮ ಕಾರಣ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಶಿಕ್ಷಣ ಇಲಾಖೆ ಬಿಆರ್ ಸಿ ಕಚೇರಿ ನವೀಕರಣಕ್ಕೆ ಅನುದಾನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕುಡಿಯುವ ನೀರಿನ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ ಮಾತನಾಡಿ, ಪ್ರಸ್ತುತ ಶಿಕ್ಷಕರಿಗೆ ಬಿಎಲ್‌ಒ ಜವಾಬ್ದಾರಿ ನೀಡುತ್ತಿದ್ದು ಇದನ್ನು ಬಿಡುಗಡೆಗೊಳಿಸಬೇಕು ಎಂದರು.
ಸಭೆಯಲ್ಲಿ ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಸದಸ್ಯೆ ಜುಬೇದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ತಾ.ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿ ನಟರಾಜ್, ಶಿಕ್ಷಕರಾದ ತಿಮ್ಮೇಶ್, ನಾಗರಾಜ್ ಇದ್ದರು.