ರಾಸುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಆರಂಭ

| Published : Apr 02 2024, 01:01 AM IST

ಸಾರಾಂಶ

ರಾಸುಗಳನ್ನು ಕಾಲುಬಾಯಿ ರೋಗ ಸೇರಿದಂತೆ ವಿವಿಧ ರೋಗಗಳಿಂದ ಸಂರಕ್ಷಿಸುವ ಉದ್ದೇಶದಿಂದ ಪಶು ಸಂಗೋಪನೆ ಇಲಾಖೆ ಸೋಮವಾರದಿಂದ ಲಸಿಕಾ ಅಭಿಯಾನ ಪ್ರಾರಂಭ ಮಾಡಿದೆ.

73 ಸಾವಿರ ರಾಸುಗಳಿಗೆ ಲಸಿಕಾ ಗುರಿ ಲಸೀಕಾಕರಣಕ್ಕೆ 55 ಸಿಬ್ಬಂದಿ ನಿಯೋಜನೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ರಾಸುಗಳನ್ನು ಕಾಲುಬಾಯಿ ರೋಗ ಸೇರಿದಂತೆ ವಿವಿಧ ರೋಗಗಳಿಂದ ಸಂರಕ್ಷಿಸುವ ಉದ್ದೇಶದಿಂದ ಪಶು ಸಂಗೋಪನೆ ಇಲಾಖೆ ಸೋಮವಾರದಿಂದ ಲಸಿಕಾ ಅಭಿಯಾನ ಪ್ರಾರಂಭ ಮಾಡಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಪಶು ಚಿಕಿತ್ಸಾಲಯದಲ್ಲಿ ಹಾಗೂ ಕ್ಯಾಂಪ್ ಮಾಡುವ ಮೂಲಕ ರಾಸುಗಳಿಗೆ ಲಸಿಕೆ ಹಾಕುವ ಕಾರ್ಯವನ್ನು ಮಾಡುತ್ತಿದ್ದು, ಸುಮಾರು ಕುಷ್ಟಗಿ ತಾಲೂಕಿನಾದ್ಯoತ ಒಟ್ಟು 73000 ಸಾವಿರ ರಾಸುಗಳಿಗೆ ಕಾಲು ಮತ್ತು ಬಾಯಿ ಜ್ವರದ ವಿರುದ್ಧ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕಾ ಅಭಿಯಾನಕ್ಕೆ ಸುಮಾರು 55 ಲಸಿಕೆದಾರರನ್ನು ನಿಯೋಜಿಸುವ ಮೂಲಕ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ.

ಲಸಿಕೆ ಉದ್ದೇಶವೇನು:

ಲಸಿಕೆ ಹಾಕಿಸುವ ಮೂಲಕ ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಕಾಲು ಬಾಯಿ ರೋಗದಿಂದ ಮುಕ್ತ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಜಾನುವಾರು ಕಾಲು, ಬಾಯಿಗೆ ಅಂಟಿ ಜೀವ ಹಿಂಡುವ ಮಾರಕ ವೈರಸ್ ಕೊಲ್ಲಲು ಈ ಲಸಿಕೆಯನ್ನು ಹಾಕಿಸಬೇಕು, ಉಷ್ಣಾಂಶ ಹೆಚ್ಚಿರುವ ಪ್ರದೇಶದಿಂದ ಸೋಂಕು ಹರಡುತ್ತಿರುವುದರಿಂದ ಈ ಲಸಿಕೆ ಹಾಕಿಸುವ ಮೂಲಕ ನಿಯಂತ್ರಣಕ್ಕೆ ತರಬಹುದಾಗಿದೆ. ಕಾಲುಬಾಯಿ ರೋಗ ಹೆಚ್ಚಾಗಿ ಬೇಸಿಗೆಯಲ್ಲೇ ಉಲ್ಬಣವಾಗುವುದರಿಂದ ಈ ಲಸಿಕೆಯನ್ನು ಹಾಕಿಸಬೇಕಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣ ಕ್ರಮಕ್ಕೆ ಸಜ್ಜಾಗಿದೆ. 3 ತಿಂಗಳ ಎಳೆ ಕರುಗಳ ಮೇಲ್ಪಟ್ಟು ಉಳಿದೆಲ್ಲ ಜಾನುವಾರಿಗೂ ಲಸಿಕೆ ಹಾಕಿಸಬೇಕು. ಕಾಲುಬಾಯಿ ರೋಗ ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಆರ್ಥಿಕತೆ ನಷ್ಟ ಉಂಟುಮಾಡುವ ಮಾರಕ ರೋಗವಾಗಿದೆ. ಈ ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆ ಇದೆ. ರೋಗದಿಂದ ಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವುದು ಅತ್ಯಗತ್ಯವಾಗಿದೆ.

ಐದನೇ ಸುತ್ತಿನ ಲಸಿಕೆ ಹಾಕುವ ಅವಧಿ:

ಏಪ್ರಿಲ್ 1ರಿಂದ ಏಪ್ರಿಲ್ 30ರ ವರೆಗೆ ನೀಡಲಾಗುತ್ತಿದ್ದು, ಪಶು ಇಲಾಖೆ ಸಂಪರ್ಕ ಮಾಡುವ ಮೂಲಕ ಲಸಿಕೆ ಹಾಕಿಸಬಹುದಾಗಿದೆ.