ಸಾರಾಂಶ
ಕಾರವಾರ: ಮುರುಡೇಶ್ವರ ಕಡಲತೀರದಲ್ಲಿ ಸ್ವಿಮ್ಮಿಂಗ್ ಝೋನ್, ನಾನ್ ಸ್ವಿಮ್ಮಿಂಗ್ ಝೋನ್ ಗುರುತಿಸಿ ಮಾರ್ಕಿಂಗ್ ಮಾಡುವ ಕೆಲಸ ಬುಧವಾರದಿಂದ ಆರಂಭಗೊಂಡಿದೆ. ನಂತರ ಉಳಿದ ತೀರಗಳಲ್ಲೂ ನಡೆಯಲಿದೆ.
ಸ್ಥಳೀಯ ಮೀನುಗಾರರ, ಲೈಫ್‌ಗಾರ್ಡ್ ಸಿಬ್ಬಂದಿಯಿಂದ ಮಾಹಿತಿ ಪಡೆದು ತೀರದಿಂದ ಎಷ್ಟು ದೂರದ ವರೆಗೆ ಈಜಲು ಅವಕಾಶವಿದೆ? ಯಾವ ಜಾಗದಲ್ಲಿ ಈಜಲು ಅವಕಾಶವಿಲ್ಲ ಎನ್ನುವುದನ್ನು ಮಾರ್ಕಿಂಗ್ ಮಾಡಲಾಗಿದ್ದು, ಹಗ್ಗಕ್ಕೆ ಫ್ಲೋಟಿಂಗ್ ಬಾಯ್ (ನೀರಿನಲ್ಲಿ ತೇಲುವ ಪ್ಲಾಸ್ಟಿಕ್ ಬಾಲ್) ಕಟ್ಟಿ ನೀರಿನಲ್ಲಿ ಇಳಿಬಿಟ್ಟು ಸೂಚನೆ ಅಳವಡಿಸಲಾಗುತ್ತಿದೆ. ಮುರುಡೇಶ್ವರದಲ್ಲಿ ಮೊದಲು ಆರಂಭಿಸಿದ್ದು, ಬಳಿಕ ಇತರ ಕಡೆ ಇದೇ ವ್ಯವಸ್ಥೆ ಮಾಡಲಾಗುತ್ತದೆ.ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಜಲಪಾತ, ಕಡಲತೀರಗಳಲ್ಲಿ ಈಜಲು, ಆಟವಾಡಲು ತೆರಳಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನದ ಹಿಂದೆ ನಾಲ್ವರು ವಿದ್ಯಾರ್ಥಿಗಳು ಮುರುಡೇಶ್ವರ ಕಡಲ ತೀರದಲ್ಲಿ ಜೀವ ಕಳೆದುಕೊಂಡಿದ್ದರು. ಪ್ರತಿವರ್ಷ ಒಂದಿಲ್ಲೊಂದು ಕಡೆ ಕಡಲತೀರ, ಜಲಪಾತಗಳಲ್ಲಿ ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಿರುವ, ಜೀವ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದ್ದು, ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಲು ಹೊರಟಿದೆ.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಪೊಲೀಸ್, ಮೀನುಗಾರಿಕಾ ಇಲಾಖೆ, ಕಂದಾಯ ಇಲಾಖೆ, ಕರಾವಳಿ ಕಾವಲು ಪಡೆ ಒಳಗೊಂಡು ವಿವಿಧ ಇಲಾಖೆ ಅಧಿಕಾರಿಗಳ ತಂಡ ರಚನೆ ಮಾಡಿದ್ದರು. ಈ ತಂಡ ಸ್ವಿಮ್ಮಿಂಗ್ ಝೋನ್, ನಾನ್ ಸ್ವಿಮ್ಮಿಂಗ್ ಝೋನ್ ಗುರುತು ಮಾಡಿದೆ. ಈಗ ಸೂಚನಾ ಫಲಕ ಅಳವಡಿಸುವ ಕಾರ್ಯ ನಡೆಯುತ್ತಿದೆ.ಪ್ರತಿವರ್ಷ ಸಾಕಷ್ಟು ಪ್ರವಾಸಿಗರು ಕಡಲಲ್ಲಿ, ಜಲಪಾತದಲ್ಲಿ ಸುಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದರು. ಇದನ್ನು ತಡೆಯುವ ನಿಟ್ಟಿನಲ್ಲಿ ೨೦೧೭- ೧೮ನೇ ಸಾಲಿನಲ್ಲಿ ಅಂದಿನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಕಡಲತೀರ, ಜಲಪಾತಗಳಿಗೆ ಲೈಫ್‌ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಿದ್ದರು. ನೀರಿನಲ್ಲಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡುವ ತರಬೇತಿ ನೀಡಿ ನಿಯೋಜನೆ ಮಾಡಲಾಗಿತ್ತು. ಆದರೂ ಕೆಲವು ಕಡೆ ಲೈಫ್‌ಗಾರ್ಡ್ ಮಾತು ಕೇಳದೇ ನೀರಿಗಿಳಿದು ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಕೆಲವರು ಲೈಫ್‌ಗಾರ್ಡ್ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿರುವ ಉದಾಹರಣೆಯೂ ಇದೆ.
ಉತ್ತರ ಕನ್ನಡದಲ್ಲಿ ಜಲಪಾತ, ಕಡಲತೀರವೇ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ನಿರ್ಬಂಧ ಹೇರಿದರೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲಿದೆ. ಕಡಲಲ್ಲಿ, ಜಲಪಾತದಲ್ಲಿ ನೀರಿಗೆ ಇಳಿಯಲು ಬಿಟ್ಟರೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಹೀಗಾಗಿ ಸ್ವಿಮ್ಮಿಂಗ್ ಝೋನ್, ನಾನ್ ಸ್ವಿಮ್ಮಿಂಗ್ ಝೋನ್ ಎಂದು ಗುರುತಿಸಿ ನಿಗದಿತ ಜಾಗಕ್ಕಿಂತ ಮುಂದೆ ಪ್ರವಾಸಿಗರು ಹೋಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ.