ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಸಮಸ್ಯೆಗಳನ್ನು ಆಲಿಸಿ, ಕುಂದುಕೊರತೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪರಿಶಿಷ್ಟ ಪಂಗಡ ಹಿತರಕ್ಷಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಪಂಗಡದ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಂಬಂಧ ಹಿತರಕ್ಷಣಾ ಸಮಿತಿ ಸಭೆ ಏರ್ಪಡಿಸಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಪರಿಶಿಷ್ಟರ ದೂರು, ಸಮಸ್ಯೆ ಕಂಡುಬಂದರೂ ತುರ್ತಾಗಿ ಪರಿಹರಿಸಲು ಮುಂದಾಗಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ನಿರ್ದೇಶನ ನೀಡಿದರು.ಆರಂಭದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದ ಮುಖಂಡರಿಂದ ದೂರು, ಸಮಸ್ಯೆಗಳನ್ನು ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಕವಿತ ಎಡಿಸಿ ಗೀತಾ ಹುಡೇದ ಅವರು ಆಲಿಸಿದರು. ಸಮುದಾಯದ ಮುಖಂಡರು ಮಾತನಾಡಿ, ನಗರದ ಡಿವಿಯೇಷನ್ ರಸ್ತೆ ಅಗಲೀಕರಣ ಸಂಬಂಧ 2016-17ರಲ್ಲಿ ಚಾಮರಾಜನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಜನಾಂಗದವರು 100 ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು, ಬದಲಿಯಾಗಿ ಹಕ್ಕು ಪತ್ರ ನೀಡಲಾಗಿದೆ. ಉತ್ತವಳ್ಳಿ ಬಳಿ ಜಾಗ ಗುರುತಿಸಲಾಗಿದ್ದರೂ ಇದುವರೆಗೂ ನಿವೇಶನ ನೀಡಿರುವುದಿಲ್ಲ. ಉತ್ತುವಳ್ಳಿಯಲ್ಲಿ ಗುರುತಿಸಿರುವ ಸ್ಥಳ ವಾಸಿಸಲು ಯೋಗ್ಯವಾಗಿಲ್ಲ. ಮಾಲಗೆರೆ ಬಳಿ ಆದಷ್ಟು ಬೇಗ ನಿವೇಶನ ನೀಡಬೇಕು. ಮನೆ ಕಳೆದುಕೊಂಡಿರುವವರು ಕಡುಬಡವರಾಗಿದ್ದು, ತಮ್ಮ ಸಂಬಂಧಿಕರು ಹಾಗೂ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಮನೆ ಕಳೆದುಕೊಂಡ ಎಲ್ಲರಿಗೂ ಸೂಕ್ತ ಪರಿಹಾರ ಅಥವಾ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಮುಖಂಡರು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತ ರಾಮದಾಸ್ ಅವರು ರಸ್ತೆ ಅಗಲೀಕರಣದ ವೇಳೆ 363 ಕುಟುಂಬಗಳು ಮನೆ ಕಳೆದುಕೊಂಡಿದ್ದು, ಈ ಪೈಕಿ100 ಕುಟುಂಬಗಳು ನಾಯಕ ಜನಾಂಗಕ್ಕೆ ಸೇರಿದ್ದಾರೆ. ಉತ್ತವಳ್ಳಿ ಬಳಿ ನಿವೇಶನಕ್ಕಾಗಿ ಜಾಗ ಗುರುತಿಸಿ ಈಗಾಗಲೇ 292 ನಿವೇಶನ ನೀಡಲಾಗಿದೆ. ಬಡಾವಣೆ ಅಭಿವೃದ್ಧಿಗೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಬಳಿಕ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಕೊಡಲು ಕ್ರಮವಹಿಸಲಾಗುವುದು ಎಂದರು.ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ನೀಡಿರುವ ಸಾಕಷ್ಟು ಸ್ಮಶಾನಗಳು ಒತ್ತುವರಿಯಾಗಿವೆ. ಒತ್ತುವರಿಯಾಗಿರುವ ಸ್ಮಶಾನಗಳನ್ನು ತೆರವುಗೊಳಿಸಬೇಕು. ಫೆನ್ಸಿಂಗ್ ಮಾಡಿಸಬೇಕು. ಸ್ಮಶಾನಗಳ ಅಭಿವೃದ್ಧಿಯಾಗಬೇಕು. ಕಾಳನಹುಂಡಿ ರಸ್ತೆಯಲ್ಲಿರುವ ನಾಯಕ ಜನಾಂಗಕ್ಕೆ ಸೇರಿದ ಸ್ಮಶಾನ ಜಾಗವನ್ನು ಖಾತೆ ಮಾಡಿಕೊಡಬೇಕು. ಇಲ್ಲಿ ಬೇರೆ ಜನಾಂಗದವರು ಹೂಳುವುದರಿಂದ ಘೋರಿಗಳನ್ನು ಕಟ್ಟದಂತೆ ಸೂಚನೆ ನೀಡಬೇಕು. ಕಿಲಗೆರೆ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಈಗಾಗಲೇ ಅಡಿಪಾಯ ನಿರ್ಮಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಬೇಕು ಎಂದರು.
ಹೆಗ್ಗೋಠಾರದಲ್ಲಿಯೂ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣವಾಗಿದ್ದು ಫ್ಲಾಸ್ಟರಿಂಗ್ ಆಗಬೇಕಾಗಿದೆ. ಎರಡು ಸಮುದಾಯ ಭವನಗಳಿಗೂ ಸೂಕ್ತ ಅನುದಾನ ನೀಡಬೇಕು ಎಂದು ಮುಖಂಡರು ಮನವಿ ಮಾಡಿದರು. ಭವನ ನಿರ್ಮಾಣದ ಸ್ಥಳ ಪರಿಶೀಲಿಸಿ ಅಗತ್ಯವಾಗಿರುವ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಪಂ ಸಿಇಒ ಸೂಚಿಸಿದರು. ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕು ಪತ್ರ ಪಡೆದ 2228 ರೈತರ ಪೈಕಿ ಹಲವು ಮರಣ ಹೊಂದಿದ್ದಾರೆ. ಕೆಲವರ ಹೆಸರು ತಪ್ಪಾಗಿದೆ. ಈಗಾಗಲೇ 1915 ಹಕ್ಕು ಪತ್ರ ಹಿಡುವಳಿದಾರರು ಪಿಎಂ ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಾಗಿದ್ದಾರೆ. ಆದ್ದರಿಂದ 2059 ರೈತರಿಗೆ ಪಿಎಂ ಕಿಸಾನ್ ಯೋಜನೆ ಸವಲತ್ತು ನೀಡಬೇಕು ಎಂದು ಮುಖಂಡರೊಬ್ಬರು ಅಹವಾಲು ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಇನ್ನುಳಿದಂತೆ ನಗರ, ಸ್ಥಳೀಯ ಸಂಸ್ಥೆಗಳಿಂದ ಸಮುದಾಯದ ಜನರಿಗೆ ಮೂಲಸೌಲಭ್ಯಗಳ ತಲುಪುವಿಕೆ, ವಿದ್ಯಾರ್ಥಿವೇತನ, ಅದಿವಾಸಿ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳಿಗಾಗಿ ಸಂಚಾರಿ ಆರೋಗ್ಯ ಘಟಕ ಸ್ಥಾಪನೆ, ಆದಿವಾಸಿ ನಿರುದ್ಯೋಗಿಗಳಿಗೆ ನರ್ಸಿಂಗ್ ತರಬೇತಿ, ಸಮುದಾಯದ ಸ್ಥಳೀಯರಿಗೆ ಉದ್ಯೋಗ, ಸರ್ಕಾರದ ಸೌಲಭ್ಯಗಳಿಗೆ ಪಡಿತರಚೀಟಿ, ಆಧಾರ್ ಸೀಡಿಂಗ್, ಜೀತಪದ್ದತಿ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳು, ಗಿರಿಜನರಿಗೆ ಪೌಷ್ಠಿಕ ಆಹಾರ ಸಮರ್ಪಕ ಪೂರೈಕೆ, ಜಾತಿ ಪ್ರಮಾಣಪತ್ರದ ದುರುಪಯೋಗ, ದೌರ್ಜನ್ಯ ಪ್ರಕರಣಗಳು ಸೇರಿದಂತೆ ಹಲವಾರು ಸಮಸ್ಯೆಗಳು ಚರ್ಚೆಯಾದವು. ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು.
ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಮುಖಂಡರಾದ ಸುರೇಶ್‌ನಾಯಕ, ಸೋಮನಾಯಕ, ವಿರಾಟ್ ಶಿವು, ಬದನಗುಪ್ಪೆ ಶಿವರಾಮು, ಸುರೇಶ್ ನಾಗ್, ಅಗರ ರಾಜು, ಗುಂಡ್ಲುಪೇಟೆ ಮಲ್ಲೇಶ್ ನಾಯಕ, ರಾಮಸಮುದ್ರ ಜಿ. ಬಂಗಾರು, ಸಿ. ಮಾದೇಗೌಡ, ರತ್ಮಮ್ಮ, ಕೇತಮ್ಮ, ಹರದನಹಳ್ಳಿ ರಾಮಚಂದ್ರ, ಸಾಗಡೆ ನಂಜುಂಡ, ಇತರೆ ಮುಖಂಡರು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.