ಸಾರಾಂಶ
ಬಾ.ರಾ.ಮಹೇಶ್
ಕನ್ನಡಪ್ರಭ ವಾರ್ತೆ ಚನ್ನಗಿರಿಚನ್ನಗಿರಿ ಪಟ್ಟಣ ಕೊಳಚೆ ಮುಕ್ತ ಪಟ್ಟಣವಾಗುತ್ತಿದ್ದು, ಒಳ ಚರಂಡಿ ವ್ಯವಸ್ಥೆ ಕೆಲಸ ಭರದಿಂದ ನಡೆಯುತ್ತಿದೆ. ಮುಂದಿನ 10ತಿಂಗಳಿನಲ್ಲಿ ಪಟ್ಟಣದ ಸಾರ್ವಜನಿಕರ ಬಳಕೆಗೆ ಸಿದ್ಧವಾಗುತ್ತಿದ್ದು, ಇದರಿಂದ ಪಟ್ಟಣದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಲಿದೆ.
ಕಳೆದ 30-40ವರ್ಷಗಳ ಹಿಂದೆ ಬಹುತೇಕ ಹೆಚ್ಚಿನ ನಾಗರಿಕರು ಬಯಲು ಶೌಚಾಲಯವನ್ನು ಬಳಸುತಿದ್ದರು. ಸ್ಥಿತಿ ವಂತರು, ಮಧ್ಯಮ ವರ್ಗದವರು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರು. ಉಳಿದವರು ಬಯಲು ಶೌಚಾಲಯವೇ ಗತಿಯಾಗಿತ್ತು.ಕಾಲಮಾನ ಕಳೆದಂತೆ ಸರ್ಕಾರಗಳ ಯೋಜನೆಗಳಿಂದ ಬಯಲು ಮುಕ್ತ ಶೌಚವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಸರ್ಕಾರ ಹಣದ ಸಹಾಯ ಮಾಡಿದ್ದರಿಂದ ಪ್ರತಿ ಮನೆಗಳಲ್ಲಿಯೂ ಶೌಚಾಲಯಗಳನ್ನು ಹೊಂದಿವೆ.2021ರಲ್ಲಿ ಆಗಿನ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಪಟ್ಟಣದ ಜನರು ಅನುಭವಿಸುತ್ತಿರುವ ಕಷ್ಟವನ್ನು ಅರಿತು, ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆಯನ್ನು ಮಾಡಿಸುವ ಸಲುವಾಗಿ ಪಟ್ಟಣದಲ್ಲಿ ಸರ್ವೆ ಕಾರ್ಯವನ್ನು ನಡೆಸಿ ಈ ಯೋಜನೆಯ ಕಾಮಗಾರಿ ಕೆಲಸಕ್ಕೆ ಬೇಕಾದ ₹86.65ಕೋಟಿ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದರು. ಅದರ ಪ್ರತಿಫಲವಾಗಿ ಚನ್ನಗಿರಿ ಪಟ್ಟಣ ಕೊಳಚೆ ಮುಕ್ತ ಪಟ್ಟಣವಾಗುತ್ತಿದೆ.ಒಳ ಚರಂಡಿ ನಿರ್ಮಾಣದ ಕಾಮಗಾರಿ ಕೆಲಸಕ್ಕೆ ಹೈದ್ರಾಬಾದ್ ಮೂಲದ ಅಯ್ಯಪ್ಪ ಇನ್ ಷ್ಟಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರಿಗೆ ನೀಡಿದ್ದು, 2023ರ ಮೇ ತಿಂಗಳಿನಿಂದ ಕಾಮಗಾರಿ ಕೆಲಸವನ್ನು ಭರದಿಂದ ಆರಂಭಿಸಿದ್ದಾರೆ.ಪಟ್ಟಣದ ಎಲ್ಲಾ ಬಡಾವಣೆ ಏರಿಯಾದಲ್ಲಿಯೂ 52ಕಿ.ಮೀ ವ್ಯಾಪ್ತಿಯ ಪೈಪ್ ಲೈನ್ ಅಳವಡಿಕೆ ಮಾಡಿ, ಚನ್ನಗಿರಿಯ 5500 ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಈಗಾಗಲೇ 32ಕಿ.ಮೀ ನಷ್ಟುಪೂರ್ಣಗೊಂಡಿದೆ. ಇದಕ್ಕಾಗಿ 1085 ಮಿಷನ್ ಹೋಲ್ ಗಳ ನಿರ್ಮಾಣಗೊಂಡಿದ್ದು ಇನ್ನು 800ಮಿಷನ್ ಹೋಲ್ ಗಳ ಕಾಮಗಾರಿ ಕೆಲಸ ನಡೆಯುತ್ತಿದೆ.ಮನೆಗಳಿಂದ ಸಂಗ್ರಹವಾಗುವಂತಹ ಶೌಚಾಲಯ, ಬಚ್ಚಲುಮನೆ, ಪಾತ್ರೆ ತೊಳೆದ ನೀರು, ಮಳೆಯ ನೀರು ಸರಾಗವಾಗಿ ಹರಿಯಲು 30ಮೀಟರ್ ಗೆ ಒಂದರಂತೆ ಮಿಷನ್ ಹೋಲ್ ಗಳನ್ನು ಮಾಡಲಾಗಿದೆ. ಪಟ್ಟಣದ ಎಲ್.ಐ.ಸಿ ಕಚೇರಿಯ ಮುಂಭಾಗದಿಂದ ಗರಗ ರಸ್ತೆ ಸೇತುವೆಯ ಪಕ್ಕದಿಂದ ಮಲೀನ ನೀರು ಹರಿದು, ನೀರು ಶುದ್ಧೀಕರಣದ ಘಟಕದ ವರೆಗೆ ರೈಸಿಂಗ್ ಪೈಪ್ ಲೈನ್ ಅಳವಡಿಕೆಯ ಕೆಲಸ ಬಾಕಿ ಉಳಿದಿದೆ.ಪಟ್ಟಣದ ಹತ್ತಿರದ ಗರಗ ಗ್ರಾಮದ ಬಳಿಯ ತೋಟಗಾರಿಕಾ ಇಲಾಖೆಯ ಪಕ್ಕದಲ್ಲಿ 3ಎಕರೆ ಪ್ರದೇಶದಲ್ಲಿ 5.20 ದಶಲಕ್ಷ ಲೀಟರ್ ನೀರಿನ ಶುದ್ಧೀಕರಣ ಘಟಕ 50*50 ಸುತ್ತಳತೆಯಲ್ಲಿ ನಿರ್ಮಾಣವಾಗುತ್ತಿದ್ದು, ಶುದ್ಧೀಕರಣಗೊಂಡ ನೀರು, ತೋಟಗಾರಿಕಾ ಫಾರಂನಲ್ಲಿ ಬೆಳೆಯುವ ಬೆಳೆಗಳಿಗೆ ಬಳಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.ಕರ್ನಾಟಕ ನೀರು ಸರಬರಾಜು ಒಳ ಚರಂಡಿ ಅಭಿಯಂತರರಾದ ಗುರುದತ್, ಎಂ.ಜಿ.ರವಿ ಮಾತನಾಡಿ, ಈ ಯೋಜನೆ ಕಾರ್ಯಗತಗೊಳ್ಳುವ ಸಂದರ್ಭದಲ್ಲಿ ಹಲವು ಅಡೆ ತಡೆಗಳು ಎದುರಾಗಿದ್ದವು. ಇವುಗಳ ನಿವಾರಣೆಯನ್ನು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಸಲಹಾ ಸಮಿತಿಯಲ್ಲಿ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಯೋಜನೆಗೆ ಯಾವುದೆ ಅಡೆ-ತಡೆಗಳು ಬಾರದಂತೆ ಕ್ರಮ ವಹಿಸುವಂತೆ ತಿಳಿಸಿದ್ದರು. ಎಲ್ಲಾ ಅದರ ಪರಿಣಾಮ ಸಮಸ್ಯೆಗಳು ಬಗೆಹರಿದಿವೆ ಎಂದರು.ಈ ಯೋಜನೆ ಪೂರ್ಣ ಗೊಳ್ಳುತ್ತಿದ್ದಂತೆಯೇ ಟಾರ್ ರಸ್ತೆ, ಕಾಂಕ್ರೀಟ್ ರಸ್ತೆಗಳನೆಲ್ಲ ಯಥಾಸ್ಥಿತಿಯಲ್ಲಿ ನಿರ್ಮಾಣ ಮಾಡಿಕೊಡಲಿದ್ದೇವೆ. 2025ರ ವೇಳೆಗೆ ಜನರ ಬಳಕೆಗೆ ನೀಡಲು ದೊಡ್ಡ-ದೊಡ್ಡ ಗಾತ್ರದ ಯಂತ್ರಗಳಿಂದ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.