ಸಾರಾಂಶ
ಕನ್ನಡಪ್ರಭ ವಾರ್ತೆ
ಹುಬ್ಬಳ್ಳಿ: ಕಳೆದ ವರ್ಷ ರಣಜಿ ಟ್ರೋಫಿ ಟೂರ್ನಿಯ ಇನ್ನಿಂಗ್ಸ್‌ವೊಂದರಲ್ಲಿ ಒಮ್ಮೆ 5 ವಿಕೆಟ್ ಪಡೆದಿದ್ದೆ. ಈ ಬಾರಿ ಮೊದಲ ಪಂದ್ಯದಲ್ಲಿಯೇ 7 ವಿಕೆಟ್ ಪಡೆದಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಕರ್ನಾಟಕ ತಂಡದ ವೇಗಿ ವಾಸುಕಿ ಕೌಶಿಕ್ ಹೇಳಿದರು.
ಕರ್ನಾಟಕ-ಪಂಜಾಬ್ ತಂಡಗಳ ನಡುವೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದ ಮೊದಲ ದಿನದ ಆಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ತಂಡದವರು ಉತ್ತಮ ರನ್ ಧಾರಣೆಯಲ್ಲಿ ಸ್ಕೋರ್ ಮಾಡಲು ಬಯಸುತ್ತಾರೆ. ಅವರ ಈ ಧೋರಣೆ ನಮಗೆ ವಿಕೆಟ್ ಪಡೆಯಲು ಅವಕಾಶಗಳನ್ನು ಸೃಷ್ಟಿಸಿದವು ಎಂದರು.
ನಾನು 2ನೇ ಓವರ್‌ನಲ್ಲಿಯೇ ಲಯ ಕಂಡುಕೊಂಡೆ. ಆರಂಭಿಕ ಬ್ಯಾಟರ್ ಅಭಿಷೇಕ ಶರ್ಮಾರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ಸ್ಮರಣೀಯವಾದ ಎಸೆತ. ಪಿಚ್‌ನಲ್ಲಿ ಲೇಟ್ ಸ್ವಿಂಗ್ ಇತ್ತು. ಪ್ರಾರಂಭದಲ್ಲಿ ಮೈದಾನದಲ್ಲಿ ತೇವಾಂಶ ಇದ್ದು, ಅದರ ಪ್ರಯೋಜನ ಪಡೆಯುವಂತೆ ನಾಯಕ ಮಯಾಂಕ್ ಹೇಳಿದ್ದರು. ಸಮಯ ಕಳೆದಂತೆ ಪಿಚ್ ನಿಧಾನವಾಗುತ್ತ ಹೋಯಿತು. ಹಾಗಾಗಿ ನಾವು ಬೌನ್ಸರ್ ಹಾಕಲು ಪ್ರಯತ್ನಿಸಲಿಲ್ಲ ಎಂದರು.
2019ರ ಬಳಿಕ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಈ ವರ್ಷ ಕರ್ನಾಟಕ ತಂಡದ ಕೊನೆಯ ಲೀಗ್ ಪಂದ್ಯ ಇಲ್ಲಿಯೇ ಚಂಡಿಗಢ ವಿರುದ್ಧ ಆಡಲಿದೆ. ಇಲ್ಲಿ ರಣಜಿ ಪಂದ್ಯ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಖುಷಿಯ ವಿಚಾರ.
ಕರ್ನಾಟಕ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದಿದ್ದು 1973-74ರಲ್ಲಿ. ಅದರ 50ನೇ ವರ್ಷವನ್ನು ಸ್ಮರಣೀವಾಗಿಸುವ ಉದ್ದೇಶದಿಂದ ಈ ಬಾರಿ ರಣಜಿ ಟ್ರೋಫಿ ಗೆಲ್ಲುವ ಇಚ್ಛೆ ಹೊಂದಿದ್ದೇವೆ ಎಂದರು.