ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಹೆಚ್ಚಾಗುತ್ತಿರುವ ಜನಸಂಖ್ಯೆಗಾಗಿ ಇರುವ ಭೂಮಿ ಮತ್ತು ಶುದ್ಧ ಗಾಳಿಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಹೇಳಿದರು.ನಗರದ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಹಾಗೂ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಟಿಸಿ ಅವರು ಮಾತನಾಡಿದರು.
ಭೂಮಿ ದೊಡ್ಡದಾಗುವುದಿಲ್ಲ ಗಾಳಿ, ನೀರು, ಬೆಳಕು ಅಷ್ಟೇ ಇರುತ್ತದೆ. ಆದರೆ ಜನಸಂಖ್ಯೆ ಹೆಚ್ಚಾಗುತ್ತದೆ. ಅದನ್ನು ನಿಯಂತ್ರಣ ಮಾಡಬೇಕಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಪರಿಸರ ನಿರ್ಮಿಸಿಕೊಳ್ಳುವುದು ಅಗತ್ಯವಾಗಿದೆ. ಇದರ ಅರಿವು ಮೂಡಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ಆರಂಭವಾಗಬೇಕು. ತಾವೆಲ್ಲರೂ ಭವಿಷ್ಯದ ನಾಗರಿಕರು, ಇಂತಹ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದರು.ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್ ಮಾತನಾಡಿ, ಮಾನವ ತನ್ನ ದುರಾಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಅರಣ್ಯ ಪ್ರಮಾಣ ಹೆಚ್ಚಾದಾಗ ಮಳೆಯಾಗುತ್ತದೆ. ಮಳೆಯಿಂದ ಬೆಳೆಯಾಗುತ್ತದೆ. ಮಾನವ ಜೀವನದ ಅಗತ್ಯಕ್ಕೆ ಬೇಕಾದ ಪ್ರಮಾಣದಲ್ಲಿ ಅರಣ್ಯವಿಲ್ಲ. ಅದನ್ನು ಬೆಳೆಸುವ ಪ್ರಯತ್ನ ನಮ್ಮದಾಗಬೇಕು. ಸಾಕಷ್ಟು ಆಮ್ಲಜನಕ ದೊರೆಯಲು ಮರಗಳ ಅಗತ್ಯವಿದೆ ಎಂದರು.
ವಿಜಯನಗರ ಜಿಲ್ಲೆಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ. ದೊಡ್ಡಶಾನಯ್ಯ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಚನ್ನಬಸವ ಮಾತನಾಡಿದರು.ಐಶ್ವರ್ಯ, ಪ್ರತಿಭಾ, ಶಿಲ್ಪಾ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ. ನಾಗರಾಜ ದಂಡೋತಿ ನಿರೂಪಿಸಿದರು. ಕೊಪ್ಪಳ ಜಿಲ್ಲಾ ಪರಿಸರ ಅಧಿಕಾರಿ ಅಮರ್ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರವೀಣ ಹಾದಿಮನಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ. ಶಶಿಕಾಂತ ಉಮ್ಮಾಪುರೆ, ಶರಣಪ್ಪ ಚವ್ಹಾಣ, ಡಾ. ಕರಿಬಸವೇಶ್ವರ ಬಿ., ಶ್ರೀದೇವಿ, ಡಾ. ಜಾಲಿಹಾಳ ಶರಣಪ್ಪ, ಡಾ. ಅರುಣಕುಮಾರ ಎ.ಜಿ., ಡಾ. ವೆಂಕಟೇಶ ನಾಯ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.