ಕಾಲಕಾಲಕ್ಕೆ ಜಾನುವಾರುಗಳಿಗೆ ಲಸಿಕೆ ಹಾಕುವುದು ಅಗತ್ಯ-ಡಿಸಿ ದಾನಮ್ಮನವರ

| Published : Oct 18 2024, 12:12 AM IST

ಕಾಲಕಾಲಕ್ಕೆ ಜಾನುವಾರುಗಳಿಗೆ ಲಸಿಕೆ ಹಾಕುವುದು ಅಗತ್ಯ-ಡಿಸಿ ದಾನಮ್ಮನವರ
Share this Article
  • FB
  • TW
  • Linkdin
  • Email

ಸಾರಾಂಶ

ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತವಾಗಿ ಕಾಲ ಕಾಲಕ್ಕೆ ಲಸಿಕೆ ಹಾಕುವುದು ಮತ್ತು ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತೀ ಅವಶ್ಯ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಹಾವೇರಿ: ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತವಾಗಿ ಕಾಲ ಕಾಲಕ್ಕೆ ಲಸಿಕೆ ಹಾಕುವುದು ಮತ್ತು ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತೀ ಅವಶ್ಯ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೬ ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯ ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡದ ಅವರು, ಲಸಿಕಾ ಕಾರ್ಯಕ್ರಮದಿಂದ ಯಾವುದೇ ಜಾನುವಾರು ಹೊರಗುಳಿಯದಂತೆ ಶೇ. ೧೦೦ರಷ್ಟು ಲಸಿಕೆ ಹಾಕಬೇಕು ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ರೈತಾಪಿ ಜನರ ಸಹಕಾರ ಅತ್ಯಗತ್ಯವಾಗಿದೆ. ಜಾನುವಾರು ಮಾಲಿಕರು ತಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಬದಿಗೊತ್ತಿ ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದರು. ಈ ೬ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕಾ ಕಾರ್ಯಕ್ರಮವನ್ನು ನಿಗದಿಪಡಿಸಿದ ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ, ಅ. ೨೧ರಿಂದ ನ.೨೦ರ ವರೆಗೆ ಕಾಲು ಬಾಯಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಅಂದಾಜು ೩.೦೫ ಲಕ್ಷ ಜಾನುವಾರುಗಳನ್ನು ಗುರುತಿಸಲಾಗಿದೆ. ೬ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮನೆ ಬಾಗಿಲಿಗೆ ಹೋಗಿ ಕಾಲುಬಾಯಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ಕೈಗೊಳ್ಳಲಿದ್ಧಾರೆ ಎಂದರು.ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೧೫೦ ತಂಡಗಳನ್ನು ರಚಿಸಿ ಪ್ರತಿ ತಾಲೂಕಿನಲ್ಲಿ ಲಸಿಕಾ ವೇಳಾ ಪಟ್ಟಿ ಮತ್ತು ಜಾನುವಾರು ಹೊಂದಿರುವ ರೈತರ ಮಾಹಿತಿಯನ್ನು ಗ್ರಾಮವಾರು ತಯಾರಿಸಿಟ್ಟುಕೊಳ್ಳಲಾಗಿದೆ. ಗ್ರಾಮಗಳ ಹೆಸರು, ಜಾನುವಾರುಗಳ ಸಂಖ್ಯೆ, ಜಾನುವಾರು ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಲಸಿಕಾದಾರರ ವಿವರ ಹಾಗೂ ಜಾನುವಾರುವಿನ ಕಿವಿ ಓಲೆ ಸಂಖ್ಯೆ ವಿವರಗಳು ಲಭ್ಯವಿರುತ್ತವೆ. ಪ್ರತಿ ಗ್ರಾಮ ಅಥವಾ ನಗರ ಪ್ರದೇಶವನ್ನು ೧೦೦ ರಿಂದ ೧೨೦ ಜಾನುವಾರುಗಳಿಗೆ ಒಂದು ಬ್ಲಾಕ್ ಎಂದು ವರ್ಗೀಕರಿಸಿ ಒಟ್ಟು ೩೦೩೦ ಬ್ಲಾಕ್‌ಗಳಲ್ಲಿ ಲಸಿಕಾದಾರರು ಲಸಿಕೆಯನ್ನು ಹಾಕಲಿದ್ದಾರೆ. ಪ್ರತಿ ಜಾನುವಾರಿಗೆ ಒಂದರಂತೆ ಸೀರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ ಅದರಂತೆ ಜಿಲ್ಲೆಗೆ ಈಗಾಗಲೇ ೩,೦೭,೯೦೦ ಡೋಸ್ ಲಸಿಕೆ ಸರಬರಾಜಾಗಿದೆ. ಈ ಲಸಿಕೆಯನ್ನು ತಾಲ್ಲೂಕಿನಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮರು ಹಂಚಿಕೆ ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.ಜಿಲ್ಲೆಗೆ ಸರಬರಾಜಾದಂತಹ ಪೋಸ್ಟರ್‌, ಬ್ಯಾನರ್ಸ್‌ಗಳನ್ನು ಹಾಗೂ ವ್ಯತಿರಿಕ್ತ ಪರಿಣಾಮಗಳ ನಿರ್ವಹಣೆಗೆ ಅವಶ್ಯವಿರುವ ತುರ್ತು ಔಷಧಿ/ರಾಸಾಯನಿಕಗಳನ್ನು ಹಂಚಿಕೆ ಮಾಡಿ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ವಿವರಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ೬ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಪೋಸ್ಟರ್‌ ಮತ್ತು ಬ್ಯಾನರ್ಸ್‌ಗಳನ್ನು ಬಿಡುಗಡೆಗೊಳಿಸಿದರು.