ಕನ್ನಡಿಗರೇ ಕನ್ನಡವನ್ನು ಮರೆಯುತ್ತಿರುವುದು ಬೇಸರದ ಸಂಗತಿ

| Published : Nov 03 2025, 01:30 AM IST

ಸಾರಾಂಶ

ಇಡೀ ದೇಶದಲ್ಲಿ ಅತ್ಯಂತ ಸಂಪದ್ಭರಿತ ಹಾಗೂ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಇಲ್ಲಿ ಹುಟ್ಟಲು ಪ್ರತಿಯೊಬ್ಬರು ಪುಣ್ಯ ಮಾಡಿರಬೇಕು. ಹಲವು ಪ್ರಾಚೀನ ಭಾಷೆಗಳಲ್ಲಿ ಕನ್ನಡವು ಒಂದಾಗಿದೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಇಂದು ಕನ್ನಡಿಗರೇ ಕನ್ನಡವನ್ನು ಮರೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ನಾವು ನಮ್ಮ ನಾಡು, ನುಡಿಯನ್ನು ಪ್ರೀತಿ ಮಾಡಬೇಕು. ಆಗ ಭಾಷೆಯ ಬೆಳವಣಿಗೆ ಸಾಧ್ಯ, ವಿದೇಶಗಳಲ್ಲಿ ಧರ್ಮ, ಜಾತಿ ಭೇದಗಳನ್ನು ಮೀರಿ ಕನ್ನಡ ಕಲಿಸುವ ಕೆಲಸವಾಗುತ್ತಿದೆ. ಆದರೆ ಇಲ್ಲಿ ಮಾತ್ರ ಭಾಷೆಯ ಬಗ್ಗೆ ಉಡಾಫೆ ತೋರುತ್ತಿರುವುದು ಕಂಡು ಬರುತ್ತಿದೆ ಎಂದು ಬೇಸರಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕನ್ನಡ ಭಾಷೆಯನ್ನು ಹೊರದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ಕಲಿಸುವ ಕೆಲಸವಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಸುಭಾಷ್ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಇಡೀ ದೇಶದಲ್ಲಿ ಅತ್ಯಂತ ಸಂಪದ್ಭರಿತ ಹಾಗೂ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಇಲ್ಲಿ ಹುಟ್ಟಲು ಪ್ರತಿಯೊಬ್ಬರು ಪುಣ್ಯ ಮಾಡಿರಬೇಕು. ಹಲವು ಪ್ರಾಚೀನ ಭಾಷೆಗಳಲ್ಲಿ ಕನ್ನಡವು ಒಂದಾಗಿದೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಇಂದು ಕನ್ನಡಿಗರೇ ಕನ್ನಡವನ್ನು ಮರೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ನಾವು ನಮ್ಮ ನಾಡು, ನುಡಿಯನ್ನು ಪ್ರೀತಿ ಮಾಡಬೇಕು. ಆಗ ಭಾಷೆಯ ಬೆಳವಣಿಗೆ ಸಾಧ್ಯ, ವಿದೇಶಗಳಲ್ಲಿ ಧರ್ಮ, ಜಾತಿ ಭೇದಗಳನ್ನು ಮೀರಿ ಕನ್ನಡ ಕಲಿಸುವ ಕೆಲಸವಾಗುತ್ತಿದೆ. ಆದರೆ ಇಲ್ಲಿ ಮಾತ್ರ ಭಾಷೆಯ ಬಗ್ಗೆ ಉಡಾಫೆ ತೋರುತ್ತಿರುವುದು ಕಂಡು ಬರುತ್ತಿದೆ ಎಂದು ಬೇಸರಿಸಿದರು.ಇಂದು ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿಯಾಗಿದೆ ಅಲ್ಲದೆ ಕನ್ನಡ ಲಿಪಿಯ ಬಳಕೆ ಸಹ ಅತ್ಯಂತ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಕಲಿಕೆಯ ಜೊತೆಗೆ ಕನ್ನಡ ಲಿಪಿಯ ಬಳಕೆಯನ್ನು ಹೆಚ್ಚು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಮಣ್ಣಿನಲ್ಲಿ ಹುಟ್ಟಿರುವ ಪ್ರತಿಯೊಬ್ಬ ಕನ್ನಡಿಗನಿಗೂ ತನ್ನ ಭಾಷೆಯ ಉಳಿವಿನ ಬಗ್ಗೆ ಜವಾಬ್ದಾರಿ ಇರಬೇಕು ಎಂದು ಅಭಿಪ್ರಾಯಿಸಿದರು. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸುವ ಮೂಲಕ ಇಂಗ್ಲೀಷ್‌ ಬಗ್ಗೆ ಹೆಚ್ಚು ಆಕರ್ಷಿತರಾಗಿ ಮಕ್ಕಳಿಗೆ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಲಿಯದೆ ಮುಂದಿನ ದಿನಗಳಲ್ಲಿ ಮಕ್ಕಳು ಕನ್ನಡ ಭಾಷೆಯನ್ನು ಮರೆಯುವ ಸ್ಥಿತಿಗೆ ನಾವೇ ಮುನ್ನುಡಿ ಬರೆಯುತ್ತಿದ್ದೇವೆ. ಇಂಗ್ಲಿಷ್‌ ಕಲಿಯಬಾರದು, ಮಾತನಾಡಬಾರದು ಎಂಬ ಅಭಿಪ್ರಾಯವಲ್ಲ. ಇಂಗ್ಲೀಷನ್ನು ವ್ಯವಹಾರಿಕ ಭಾಷೆಗಳಿಗೆ ಸೀಮಿತಗೊಳಿಸಿ ನಮ್ಮ ಕನ್ನಡವನ್ನು ಹೆಚ್ಚು ಪ್ರೋತ್ಸಾಹಿಸುವ ಮಾತನಾಡುವ ಆಸಕ್ತಿಯನ್ನು ಬೆಳೆಸಬೇಕು. ಹಲವು ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿ ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕರ್ನಾಟಕ ರಾಜ್ಯ ಕಟ್ಟುವಲ್ಲಿ ಮೈಸೂರು ಮಹಾರಾಜರ ಪಾತ್ರ ಅನನ್ಯವಾಗಿದೆ. ಮೈಸೂರು ಮಹರಾಜರು ಅನೇಕ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ಕಷ್ಟಕಾಲದಲ್ಲೂ ಸಹ ಆಣೆಕಟ್ಟೆಯನ್ನು ಕಟ್ಟಿ ಲಕ್ಷಾಂತರ ರೈತರ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ರಾಜರು ಹುಟ್ಟಿದ ನಾಡು ಕರ್ನಾಟಕವಾಗಿದೆ ಎಂದರು. ಉಪ ವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ಸ್ವಾತಂತ್ರ್ಯ ನಂತರ ೧೯೫೦ರಲ್ಲಿ ಭಾರತ ದೇಶದಲ್ಲಿ ಚದುರು ಹೋಗಿದ್ದ ಪ್ರಾಂತ್ಯವಾರುಗಳನ್ನು ಒಗ್ಗೂಡಿಸಿ ೧ ನವೆಂಬರ್ ೧೯೫೦ರಲ್ಲಿ ಮೈಸೂರು ರಾಜ್ಯವನ್ನು ಉದಯ ಮಾಡಲಾಯಿತು. ಈ ಹೆಮ್ಮೆಯ ದಿನವನ್ನು ನಾವು ಕನ್ನಡ ರಾಜ್ಯೋತ್ಸವ ಎಂದು ಆಚರಿಸಿಕೊಂಡು ಬರುತ್ತಿದ್ದೇವೆ. ಈ ಏಕೀಕರಣಕ್ಕೆ ೧೯೦೫ರಲ್ಲಿ ಮುನ್ನುಡಿ ಬರೆದವರು ಆಲೂರು ವೆಂಕಟರಾಯರು ಇವರ ಜೊತೆಗೆ ಅ.ನ.ಕೃ, ಶಿವರಾಂ ಕಾರಂತರು, ಕುವೆಂಪು, ಮತ್ತು ಬಿ ಎಂ ಶ್ರೀ ಅವರು ಕೈಜೋಡಿಸಿ ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ರನ್ನ, ಪೊನ್ನ, ಹರಿಹರ, ರಾಘವಾಂಕರು, ೧೨ನೇ ಶತಮಾನದಲ್ಲಿ ಅಲ್ಲಮಮ ಬಸವಣ್ಣನವರ ವಚನಗಳು ಆಡುಭಾಷೆಯಾಗಿ ಬಳಸಲು ಮುನ್ನುಡಿಯಾಗಿವೆ. ಅಲ್ಲದೆ ಸಾಮಾಜಿಕ, ಆರ್ಥಿಕ ಕ್ರಾಂತಿಗೆ ಸಹಕಾರಿಯಾಗಿದೆ ಭಕ್ತಿ ಪರಂಪರೆಯ ದಾಸ ಸಾಹಿತ್ಯ, ನವ್ಯ ಬಂಡಾಯ, ದಲಿತ ಸಾಹಿತ್ಯ ಸಮೃದ್ಧ ಭಾಷೆಯಾಗಿ ಇಂದು ಕಂಗೊಳಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕುವೆಂಪು, ಬೇಂದ್ರೆ ಒಳಗೊಂಡಂತೆ ೮ ಕನ್ನಡ ಕವಿಗಳು ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು ಇದು ಈ ನಾಡಿನ ಕವಿಗಳ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತ್ಯ ಶಿಕ್ಷಣ ಮಾಧ್ಯಮ ಮತ್ತು ಸಮಾಜ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಪಟ್ಟಣದ ವಿವಿಧ ಶಾಲೆಯ ಮಕ್ಕಳು ಕನ್ನಡ ನಾಡು ನುಡಿಗೆ ಸಂಬಂಧಿಸಿದೆ ಹಾಡುಗಳಿಗೆ ನೃತ್ಯ ಮಾಡಿದ್ದು ಆಕರ್ಷಣೀಯವಾಗಿತ್ತು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ಉಪಾಧ್ಯಕ್ಷೆ ಜರೀನಾ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಸೀಲ್ದಾರ್ ಸುಪ್ರೀತಾ, ಕಸಪಾ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್‌, ನಗರ ವೃತ್ತ ನಿರೀಕ್ಷಕ ವನರಾಜು, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ಸೇರಿದಂತೆ ಪುರಸಭೆಯ ಸದಸ್ಯರು ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

====

ಫೋಟೋ:

೨ಎಸ್.ಕೆ.ಪಿ.ಪಿ ೧:

ಸಕಲೇಶಪುರ ಪಟ್ಟಣದ ಸುಭಾಷೆ ಮೈದಾನದಲ್ಲಿ ನಡೆದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಉಪವಿಭಾಗಾಧಿಕಾರಿ ರಾಜೇಶ್ ಭಾಗಿಯಾಗಿದ್ದು ಶಾಸಕ ಸಿಮೆಂಟ್ ಮಂಜು ಕನ್ನಡ ಧ್ವಜಾರೋಹಣ ನಡೆಸಿದರು.