ಪಾಲಕರ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ

| Published : Aug 24 2024, 01:23 AM IST

ಪಾಲಕರ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕವಿತಾಳದಲ್ಲಿ ಮಹಾಂತ ಶ್ರೀ ಪ್ರಶಸ್ತಿ ಪ್ರದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಂಗೀತ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕವಿತಾಳ

ಜೀವನವಿಡೀ ಮಕ್ಕಳ ಏಳಿಗೆ ಹಾಗೂ ಅವರ ಭವಿಷ್ಯಕ್ಕಾಗಿ ದುಡಿಯುವ ತಂದೆ-ತಾಯಿಯನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಎಂದು ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಆನ್ವರಿ ಹೇಳಿದರು.ಮಹಾಂತಸ್ವಾಮಿ ಮುಂಡರಗಿ ಮಠ ಅವರ 21ನೇ ಪುಣ್ಯ ಸ್ಮರಣೆ ಪ್ರಯುಕ್ತ ಮುಂಡರಗಿ ಮಠ ಪ್ರತಿಷ್ಠಾನದ ವತಿಯಿಂದ ಪಟ್ಟಣದ ಮಹಾಂತ ಕಲಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ‘ಮಹಾಂತ ಶ್ರೀ ಪ್ರಶಸ್ತಿ ಪ್ರದಾನ’ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಮಾನ ಗಳಿಸಿರುವ ಮಕ್ಕಳೇ ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಎಂ.ಕೆ.ಶ್ರೀವಾತ್ಸವ ಹಾಗೂ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಗಿರಿಜಾಪತಿ ಮಾತನಾಡಿದರು.

ಸಾಹಿತ್ಯ ಪಂಪಯ್ಯ ಸ್ವಾಮಿ ಅಳವಳ್ಳಿಮಠ, ಗಾಯಕ ಅಂಬಯ್ಯ ಮತ್ತು ರಂಗಭೂಮಿಯ ದಿ.ಹುಸೇನಪ್ಪ ಪುಲಮೇಶ್ವರ ದಿನ್ನಿ ಅವರಿಗೆ ಮರಣೋತ್ತರವಾಗಿ ‘ಮಹಾಂತ ಶ್ರೀ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಮತ್ತು ದೇವದುರ್ಗ ಶಿಖರ ಮಠದ ಕಪಿಲ ರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಕೆ.ಎಂ.ಪಾರ್ವತಮ್ಮ ಪುಷ್ಪೋದ್ಯಮಿ ಸತ್ಯೇಂದ್ರ ಕುಮಾರ, ಗದ್ರಟಗಿ ಮಹಾಂತಗೌಡ, ನಿವೃತ್ತ ಪ್ರಾಚಾರ್ಯ ಎಂ.ಭೀಮರಡ್ಡಿ, ವಿ.ಬಿ.ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಡಾ.ಡಿ.ಶ್ರೀನಿವಾಸನ್, ಕೆ.ಎಂ.ವಿಶ್ವನಾಥ, ಬಿ.ಅಬ್ದುಲ್ ಕರೀಂಸಾಬ್ ಉಪಸ್ಥಿತರಿದ್ದರು. ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.