ಸಾರಾಂಶ
ಹಾನಗಲ್ಲ: ಅಂತರಂಗ ಬಹಿರಂಗಗಳ ಶುಚಿತ್ವ, ನಡೆ ನುಡಿಯ ಏಕತ್ವ, ಅಹಂಭಾವವಿಲ್ಲದ ಕಾಯಕ ದಾಸೋಹಕ್ಕೆ ಮೆಚ್ಚುವ ಹಾಗೆ ಮಹಾಮನೆ ಕಟ್ಟಿ ಬೆಳೆಸಿದ ಜಗಜ್ಯೋತಿ ಬಸವಣ್ಣ ಇಡೀ ಜಗತ್ತಿನ ಕಣ್ಣಾಗಿ ಸ್ಮರಣೆಯಲ್ಲಿದ್ದಾರೆ ಎಂದು ಉಪನ್ಯಾಸಕ ಪ್ರೊ. ಹೊನ್ನಪ್ಪ ಭೋವಿ ತಿಳಿಸಿದರು. ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ವಚನ ಶ್ರಾವಣ ಹಾಗೂ ಶರಣ ಸಂಗಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಾಮಾಜಿಕ ನ್ಯಾಯ, ಮಹಿಳಾ ಸಮಾನತೆ, ಕಾಯಕ ಸಿದ್ಧಾಂತವನ್ನು ಜನ ಮನದಲ್ಲಿ ಬಿತ್ತಿ ಬೆಳೆದ ಶರಣರ ಕಾಲ ಬಸವಣ್ಣನವರ ಮಾರ್ಗದರ್ಶನದಲ್ಲಿ ಮೌನವೀಯ ಮೌಲ್ಯದ ತಳಹದಿಯ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಯಿತು. ಹಡಪದ ಅಪ್ಪಣ್ಣನಂತಹವರು ಬಸವಣ್ಣನವರ ಚಿಂತನೆಗಳನ್ನು ಸಮಾಜದಲ್ಲಿ ಸಕಾರಾತ್ಮಕವಾಗಿ ನೆಲೆಗೊಳ್ಳಲು ಅವರಿತ ಶ್ರಮಿಸಿದರು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಇವ ನಮ್ಮವ ಎಂಬ ಭಾವಕ್ಕೆ ಸಾಕ್ಷಿಯಾಗಿ, ಶರಣ ತತ್ವದಲ್ಲಿನ ಸತ್ಯಾಸತ್ಯತೆಗಳನ್ನು ಬಿತ್ತರಿಸಿದ ಮಹಾತ್ಮರಾಗಿದ್ದಾರೆ. ಕಾಯಕವನ್ನೇ ನಂಬಿದ ಶರಣರು ಎಲ್ಲ ಕಾಲಕ್ಕೂ ಸಲ್ಲುವ ಚಿಂತನೆಗಳನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಸದಸ್ಯೆ ವೀಣಾ ಗುಡಿ, ಸದಾಕಾಲವೂ ಮಹಿಳೆ-ಪುರುಷರೆಂಬ ಭೇದಕ್ಕೆ ಅವಕಾಶವಿಲ್ಲದಂತೆ ಸತ್ಸಮಾಜ ಕಟ್ಟಿದ ಶರಣರ ಚಿಂತನೆಗಳು ಕಾಲ-ದೇಶ ಮೀರಿದ ಸತ್ಯಗಳಾಗಿವೆ. ಸದಾಚಾರದ ಸಿದ್ಧ ಸೂತ್ರಗಳನ್ನು ಸರಳವಾಗಿ ತಿಳಿಸಿದ ಶರಣರು, ಸಮಾಜವನ್ನು ಸ್ವಾರ್ಥ ಸಂಕುಚಿತತೆಯಿಂದ ಹೊರ ತರಲು ಶ್ರಮಿಸಿದರು. ಈಗ ಇಡೀ ಜಗತ್ತು ಶರಣ ತತ್ವಗಳನ್ನು ಪಾಲಿಸುವತ್ತ ಮುನ್ನಡೆಯುತ್ತಿದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಪ್ರೊ. ಸಿ. ಮಂಜುನಾಥ, ಇಂದಿನ ಸಾಮಾಜಿಕ ವ್ಯವಸ್ಥೆಗೆ ಸರಿಯಾದ ಮಾರ್ಗದರ್ಶನ ಮಾಡುವ ಶಕ್ತಿ ವಚನಗಳಿಗಿದೆ. ಮಾನವತ್ವದ ಹಿತ ಚಿಂತನೆ ವಚನಗಳ ಧ್ಯೇಯವಾಗಿದೆ ಎಂದರು.
ಆದ್ಯಾ ಹಾಗೂ ಆದಿತ್ಯಾ ಡೂಗೂರಮಠ ವಚನಗಳನ್ನು ಹಾಡಿದರು. ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ, ನಗರ ಘಟಕದ ಉಪಾಧ್ಯಕ್ಷ ಅಶೋಕ ದಾಸರ, ಎಸ್.ಎನ್. ಹೇಮಗಿರಿಮಠ, ಮಲ್ಲಿಕಾರ್ಜುನ ಅಮರದ, ಎಚ್.ಎನ್. ಪಾಟೀಲ, ಸುಪ್ರಿತಾ ಮಹಾರಾಜಪೇಟ, ಕಸ್ತೂರಿ ಆಸಂಗಿ, ಲಕ್ಷ್ಮೀ ಹಳ್ಳೀಕೇರಿ, ಅನಿತಾ ಕಿತ್ತೂರ, ಶ್ರೀದೇವಿ ಕೋರಿ, ಶಿಲ್ಪಾ ಡೂಗೂರಮಠ, ಸುವರ್ಣಾ ಹಿರೇಗೌಡರ, ಕಮಲಾಕ್ಷಿ ಕೊಂಡೋಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸುಜಾತಾ ನಂದೀಶೆಟ್ಟರ ವಚನ ಪ್ರಾರ್ಥನೆ ಹಾಡಿದರು. ನಿರ್ಮಲಾ ಮಹಾರಾಜಪೇಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಭಾಸ ಹೊಸಮನಿ ವಂದಿಸಿದರು.