ಪಶ್ಚಿಮ ಘಟ್ಟಗಳ ಉಳಿವು ಹೋರಾಟಕ್ಕೆ ಜೈಕರ್ನಾಟಕ ಪರಿಷತ್ತು ಬೆಂಬಲ

| Published : Aug 22 2024, 12:45 AM IST

ಪಶ್ಚಿಮ ಘಟ್ಟಗಳ ಉಳಿವು ಹೋರಾಟಕ್ಕೆ ಜೈಕರ್ನಾಟಕ ಪರಿಷತ್ತು ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದ ವೈನಾಡಿನಲ್ಲಿ ನಡೆದ ಭೀಕರ ದುರಂತದ ಹಿನ್ನೆಲೆಯಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಪರಿಸರ ಸೂಕ್ಷ್ಮ ವಲಯಗಳನ್ನು ರಕ್ಷಿಸಿಕೊಳ್ಳಬೇಕಿದೆ. ಅದಕ್ಕಾಗಿ ಪಶ್ಚಿಮಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವವವನ್ನು ಅರಿತು ಪ್ರೊ.ಮಾಧವ ಗಾಡ್ಗಿಳ್ ಸಮಿತಿ ೨೦೧೧ರಲ್ಲಿ ಸಲ್ಲಿಸಿದ ವರದಿಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಪರಿಸರಕ್ಕಾಗಿ ನಾವು ಪರಿಸರ ಕಾರ್ಯಕರ್ತರ ಸಂಘಟನೆ ಹಮ್ಮಿಕೊಂಡಿರುವ ಹೋರಾಟಕ್ಕೆ ಜೈಕರ್ನಾಟಕ ಪರಿಷತ್ತು ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ನೇತೃತ್ವದಲ್ಲಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಸೇರಿದ ಕಾರ್ಯಕರ್ತರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಎಸ್.ನಾರಾಯಣ್, ಕೇರಳದ ವೈನಾಡಿನಲ್ಲಿ ನಡೆದ ಭೀಕರ ದುರಂತದ ಹಿನ್ನೆಲೆಯಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಪರಿಸರ ಸೂಕ್ಷ್ಮ ವಲಯಗಳನ್ನು ರಕ್ಷಿಸಿಕೊಳ್ಳಬೇಕಿದೆ. ಅದಕ್ಕಾಗಿ ಪಶ್ಚಿಮಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವವವನ್ನು ಅರಿತು ಪ್ರೊ.ಮಾಧವ ಗಾಡ್ಗೀಳ್ ಸಮಿತಿ ೨೦೧೧ರಲ್ಲಿ ಸಲ್ಲಿಸಿದ ವರದಿಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಬೇಕು. ಪರಿಸರ ಸೂಕ್ಷ್ಮ ವಲಯಗಳಾದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಣಿಜ್ಯ ಹಾಗೂ ಪ್ರವಾಸಿ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಾಗಿ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸಿದರು.

ವಯನಾಡಿನ ದುರಂತ ನಮಗೆಲ್ಲರಿಗೂ ಪಾಠವಾಗಬೇಕು. ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ಅಮೂಲ್ಯ ಜೀವ ಹಾಗೂ ಆಸ್ತಿ ನಷ್ಟ ಸಂಭವಿಸಿದ್ದನ್ನು ದಿನಕಳೆದಂತೆ ಮರೆಯದೆ ದುರಂತಕ್ಕೆ ಮೂಲ ಕಾರಣ ಏನೆಂಬುದನ್ನು ಸರ್ಕಾರ ಅರಿತು ನಡೆಯಬೇಕಿದೆ. ಮುಖ್ಯವಾಗಿ ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್, ಹೋಮ್‌ಸ್ಟೇ, ಹೊಟೇಲ್‌ಗಳ ಅಕ್ರಮ ನಿರ್ಮಾಣ, ರಸ್ತೆ ಅಗಲೀಕರಣಕ್ಕೆ ಮರಗಳ ಹನನ, ರೈಲು, ರಸ್ತೆ, ವಿದ್ಯುತ್ ಮಾರ್ಗಗಳಿಗೆ ಬೇಕಾಬಿಟ್ಟಿ ಗುಡ್ಡ ಕಡಿತ, ಮನೆ, ಕಾರ್ಖಾನೆ ಮತ್ತಿತರ ಕಾಮಗಾರಿಗಳಿಗೆ ಬುಲ್ಡೋಜರ್‌ಗಳ ಬಳಕೆಯಿಂದ ನೀರಿನ ಸಹಜವಾದ ಹರಿವಿಕೆ ತಡೆಯುವುದು, ಜೀವವೈವಿಧ್ಯವನ್ನು ನಾಶಗೊಳಿಸುತ್ತಿರುವುದು ಮುಂತಾದ ಚಟುವಟಿಕೆಗಳು ಭೂಕುಸಿತದಂತಹ ದುರಂತ ಘಟನೆಗಳಿಗೆ ಕಾರಣವಾಗುತ್ತಿವೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಪ್ರೊ.ಮಾಧವ ಗಾಡ್ಗೀಳ್ ವರದಿ ಬಗ್ಗೆ ಜನರಲ್ಲಿ ತಪ್ಪು ಗ್ರಹಿಕೆ ಹೋಗಲಾಡಿಸಬೇಕು. ಪ್ರವಾಸೋಧ್ಯಮ ಜಿಡಿಪಿ ವೃದ್ಧಿಯ ಒಂದು ಸಾಧನವಾಗಬಾರದು. ಇದಕ್ಕೆ ಸರ್ಕಾರದ ಪ್ರೋತ್ಸಾಹವೂ ಇರಬಾರದು. ಒಟ್ಟಾರೆ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಸೋಧ್ಯಮವನ್ನೇ ನಿಷೇಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ಸೂಕ್ಷ್ಮ ಪರಿಸರ ವಲಯದಲ್ಲಿ ಕಟ್ಟಡ ನಿರ್ಮಾಣ, ಮೂಲ ಸೌಕರ್ಯ ನಿರ್ಮಾಣ ತಡೆಗಟ್ಟುವುದರಿಂದ ಸಹಜ ಪರಿಸರವನ್ನು ಕಾಪಾಡಿಕೊಳ್ಳಬಹುದು. ಶೇ.೨೧ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ.೧೦ರಷ್ಟಾದರೂ ಹೆಚ್ಚು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಸಿದ ಗುಡ್ಡಗಳಿಗೆ ತುರ್ತಾಗಿ ತಡೆಗೋಡೆ ಕಟ್ಟಬೇಕು. ಗುಡ್ಡ ಕಡಿಯುವ ಸಂದರ್ಭ ಬಂದಾಗ ಪರಿಸರ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯವಾಗಬೇಕು. ಒಟ್ಟಾರೆ ಜನಸಾಮಾನ್ಯರಿಗೆ ಹಿತ ಕೊಡುವ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕೆಂಬುದು ಪರಿಸರಕ್ಕಾಗಿ ನಾವು ಸಂಘನೆಯ ಆಗ್ರವಾಗಿದೆ ಎಂದರು.

ಜೈ ಕರ್ನಾಟಕ ಪರಿಷತ್‌ನ ಪದಾಧಿಕಾರಿಗಳಾದ ಕೆ.ಬಸವರಾಜು, ಎ.ಆರ್.ಪ್ರಸಾದ್, ಕೆ.ವಿ.ಕೆಂಪೇಗೌಡ, ಪುಟ್ಟಸ್ವಾಮಿ, ಲಲಿತಾ ರಾಜ್‌ಕುಮಾರ್, ಬಿ.ಪುಟ್ಟಸ್ವಾಮಿ, ಬಸವೇಗೌಡ, ನಿಂಗೇಗೌಡ, ಪುಟ್ಟಸ್ವಾಮಿ, ಶಿವಕುಮಾರ್ ಇತರರಿದ್ದರು.