ಸಾರಾಂಶ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ೩೫ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನತಳ ಸಮುದಾಯದ ತಲ್ಲಣಗಳ ಅನಾವರಣವೇ ‘ಜಲದ ಮಂಟಪ’ ಕೃತಿಯಾಗಿದೆ. ಇದರಲ್ಲಿ ಸಾಮಾಜಿಕ ಮೌಢ್ಯಗಳ ಖಂಡನೆಯಿದೆ, ಸ್ವಾಸ್ಥ್ಯ ಸಮ ಸಮಾಜದ ಕನಸಿದೆ ಎಂದು ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಅಭಿಪ್ರಾಯಪಟ್ಟರು.
ಹಾಸನ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ನಗರದ ಗೌರಿಕೊಪ್ಪಲಿನ ಮುಖ್ಯ ರಸ್ತೆಯಲ್ಲಿರುವ ವಿಸ್ತಾರ ಅಕಾಡೆಮಿಯಲ್ಲಿ ಸಾಹಿತ್ಯಾಸಕ್ತರಾದ ಬಿ.ವಿ.ವೇದಶ್ರೀ ನಿಶಿತ್‌ರವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ೩೫ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಮಾಣಿಕ್ಯ ಪ್ರಕಾಶನ ಹೊರತಂದಿರುವ ಕವಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರವರ ‘ಜಲದ ಮಂಟಪ’ ಕೃತಿ ಕುರಿತು ಮಾತನಾಡಿದರು.ನಾಗರಾಜ್ ಹೆತ್ತೂರವರ ಕವಿತೆಗಳಲ್ಲಿ ಬಾಹ್ಯ ಬಣ್ಣಕ್ಕಿಂತಲೂ ಆಂತರಿಕ ವರ್ಣಕ್ಕೆ, ಮಾನವೀಯ ಮೌಲ್ಯಗಳಿಗೆ ಜೀವ ತುಂಬಿರುವುದನ್ನು ಕಾಣುತ್ತೇವೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ವೈಚಾರಿಕತೆ ಎಷ್ಟೇ ಬೆಳೆದಿದ್ದರೂ ಜಾತಿ ವ್ಯವಸ್ಥೆ ಮಾತ್ರ ದಿನದಿಂದ ದಿನಕ್ಕೆ ವಿವಿಧ ರೂಪಾಂತರಗಳನ್ನು ಕಾಣುತ್ತಿರುವುದು ದುರಂತ. ಇಲ್ಲಿನ ಎಲ್ಲಾ ಕವಿತೆಗಳಲ್ಲಿ ಬಂಡಾಯದ ಧ್ವನಿ ಮೊಳೆದಿರುವುದನ್ನು ಕಾಣುತ್ತೇವೆ. ನಾಗರಾಜ್‌ರವರು ಸಾಮಾಜಿಕ ತಲ್ಲಣ, ಶೋಷಣೆಗಳನ್ನು ನೇರ ಮಾತುಗಳಲ್ಲಿ ಒಡಮೂಡಿಸಿದ್ದಾರೆ. ಇವರ ಕವಿತೆಗಳಲ್ಲಿ ಮಾನವೀಯ ಮೌಲ್ಯಗಳ ಝೇಂಕಾರವಿದೆ. ಉಳ್ಳವರ ದರ್ಪಕ್ಕೆ ಧಿಕ್ಕಾರವಿದೆ. ಶೋಷಿತರಿಗೆ ಸಾಂತ್ವನವಿದೆ ಎಂದು ಕೃತಿ ಕುರಿತು ಮಾತನಾಡಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಅಧ್ಯಕ್ಷೆ ಕೆ.ಸಿ.ಗೀತಾ ಮಾತನಾಡಿ, ‘ನಮ್ಮ ವೇದಿಕೆಯಿಂದ ಕೃತಿ ವಿಮರ್ಶೆಗಳು, ಕವಿಗೋಷ್ಠಿಗಳು, ಸಂವಾದಗಳು, ಕಮ್ಮಟಗಳು ಹೀಗೆ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ನಿಟ್ಟಿನಲ್ಲಿ ಇಂದು ಹೆತ್ತೂರು ನಾಗರಾಜ್‌ರವರ ಬಂಡಾಯ ಕೃತಿ ‘ಜಲದ ಮಂಟಪ’ ಕೃತಿಯ ವಿಮರ್ಶೆಯನ್ನು ಹಮ್ಮಿಕೊಂಡಿದ್ದೇವೆ. ಈ ಮುಖೇನ ನಮ್ಮ ವೇದಿಕೆ ಕೃತಿಗೂ ಹಾಗೂ ಕೃತಿಕರ್ತರಿಗೂ ನ್ಯಾಯ ಒದಗಿಸುವ ಹಾಗೂ ಅದರಲ್ಲಿನ ಮೌಲ್ಯಗಳನ್ನು ಅನಾವರಣಗೊಳಿಸುವ ಕೈಂಕರ್ಯವನ್ನು ಮಾಡುತ್ತಿದ್ದೇವೆ’ ಎಂದು ತಿಳಿಸಿದರು.ಕೃತಿಕರ್ತ ನಾಗರಾಜ್ ಹೆತ್ತೂರ್ ಮಾತನಾಡಿ, ‘ಶೋಷಣೆ, ಅವಮಾನ, ತಲ್ಲಣಗಳನ್ನು ಸಮಾಜದಲ್ಲಿ ನೇರಾನೇರ ಅನುಭವಿಸಿದವನು ನಾನು, ತುಳಿತಕ್ಕೊಳಗಾಗಿ ನರಳಿದವನು, ನನ್ನ ಸಮುದಾಯದ ಮೂಕ ವೇದನೆಯಲ್ಲಿ ಭಾಗಿಯಾದವನು. ನನ್ನೊಳಗಿನ ಆಂತರ್ಯದ ತಲ್ಲಣಗಳನ್ನೇ ಕವಿತೆಯ ರೂಪದಲ್ಲಿಳಿಸಲು ಪ್ರಯತ್ನಿಸಿದ, ಆಗಾಗ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ ಕವಿತೆಗಳಿವು. ಮನುಷ್ಯರನ್ನು ಮೊದಲು ಮನುಷ್ಯರನ್ನಾಗಿ ನೋಡುವುದನ್ನು ನಾವೆಲ್ಲಾ ಕಲಿಯಬೇಕಿದೆ. ಜಾತೀಯತೆ, ಧರ್ಮಿಕ ಅಂಧ ಶ್ರದ್ಧೆ, ಉಚ್ಚ, ನೀಚ ಭಾವಗಳೆಂದು ವಿದ್ಯಾವಂತರಲ್ಲಿಯೇ ಗಣನೀಯವಾಗಿ ಹೆಚ್ಚುತ್ತಿರುವುದು ದುರಂತವಾಗಿದೆ. ನಾವೆಲ್ಲಾ ಮನುಷ್ಯರು ಎನ್ನುವ ಅಂತಿಮ ಸತ್ಯವನ್ನ ಅರಿತು ಬಾಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸದ ಮೇಲೆ ನಡೆದ ಸಂವಾದದಲ್ಲಿ ಹಿರಿಯ ಸಾಹಿತ್ಯಾಸಕ್ತರಾದ ಜಯದೇವಪ್ಪ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಸಂಸ್ಥಾಪಕ ಟ್ರಸ್ಟಿ ನಾಗರಾಜ್ ದೊಡ್ಡಮನಿ, ಬಿ.ವಿ.ವೇದಶ್ರೀ ನಿಶಿತ್ ಸೇರಿ ಹಲವರು ಭಾಗವಹಿಸಿದರು.ನಂತರ ನಡೆದ ಕವಿಗೋಷ್ಠಿಯಲ್ಲಿ ಎಚ್.ಬಿ.ಚೂಡಾಮಣಿ, ಗಿರಿಜಾ ನಿರ್ವಾಣಿ, ಹೇಮಾರಾಗ, ಸಿ.ಎನ್.ನೀಲಾವತಿ, ಎಚ್.ಕೆ.ಯಮುನಾ ಮುಂತಾದವರು ಕವಿತೆ ವಾಚಿಸಿದರು. ವಿದುಷಿ ಶಶಿಚಂದ್ರಿಕಾ, ಸುನಂದಾ ಕೃಷ್ಣ ಗೀತ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಚ್.ಎಸ್.ಭಾನುಮತಿ, ರಾಜೇಶ್ವರಿ ಹುಲ್ಲೇನಹಳ್ಳಿ, ಜಯದೇವಪ್ಪ, ಸುರೇಶ್ ಸೇರಿ ಹಲವರು ಇದ್ದರು.