ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳು ಜಯದೇವ ಪ್ರಸಾದ ನಿಲಯದಲ್ಲಿಉಂಡು ಶೈಕ್ಷಣಿಕ ಉನ್ನತಿ ಸಾಧಿಸಿದ್ದಾರೆ. ಅದರಲ್ಲಿ ತಾವೂ ಒಬ್ಬರಾಗಿದ್ದೇವೆಂದು ಹರಿಹರ ಪಂಚಮಸಾಲಿ ಗುರುಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಶರಣಸಂಸ್ಕೃತಿ ನಡೆಯುತ್ತಿದೆ. ಈ ವರ್ಷ ವಿಶೇಷವಾಗಿ ಜಯದೇವ ಶ್ರೀಗಳ 150 ನೇ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದೆ. ನಾವೆಲ್ಲ ಬಹುಪಾಲು ಸಮಯವನ್ನು ಜಯದೇವ ಪ್ರಸಾದ ನಿಲಯದಲ್ಲಿ ಓದಿ ಬೆಳೆದಿದ್ದೇವೆ. ಬೃಹನ್ಮಠದಲ್ಲಿ ಮುರುಘೇಶನ ಸಾನ್ನಿಧ್ಯದಲ್ಲಿ ಮೂರು ವರ್ಷ ಓದಿ ಕಳೆದಿದ್ದೇವೆ ಎಂದರು.ಬಸವೇಶ, ಮುರುಘೇಶ, ಮಹಾಂತೇಶ ಸ್ಫೂರ್ತಿದಾಯಕ. ನಮಗೆ ಮುರುಘೇಶ ಮೂಲಪ್ರೇರಣೆ. ಮುರುಘೇಶನ ಶಕ್ತಿ ದೊಡ್ಡದು. ನಾಡಿನಲ್ಲಿ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಜಯದೇವ ಶ್ರೀಗಳು ನಾಡಿನಾದ್ಯಾಂತ ಜಯದೇವ ಪ್ರಸಾದ ನಿಲಯ, ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ಜಯದೇವಶ್ರೀಗಳಿಂದ ಸ್ಪೂರ್ತಿ ಪಡೆದು ಧಾರವಾಡದ ಮೃತ್ಯುಂಜಯಪ್ಪನವರು ಪ್ರಸಾದ ನಿಲಯ ಕಟ್ಟಿದರು ಎಂದು ತಿಳಿಸಿದರು.
ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ಓದಿ ಲಕ್ಷಾಂತರ ಕುಟುಂಬ ತಮ್ಮ ಬದುಕನ್ನು ಕಟ್ಟಿಕೊಂಡಿವೆ. ಬನಾರಸ್ ಹಿಂದೂ ವಿವಿಗೂ ಸಹ ಜಯದೇವ ಶ್ರೀ ಸಹಾಯ ಮಾಡಿದ್ದರು. ಹಿಂದಿನ ಕಾಲದಲ್ಲಿ ಶುದ್ಧವಾಗಿ ಕಾಯಕ ಮಾಡುತ್ತಿದ್ದರು. ಅದನ್ನೇ ಶಿವಯೋಗ ಎಂದು ಕರೆಯುತ್ತೇವೆ. ದಿನನಿತ್ಯ ಶಿವಯೋಗ ಮಾಡಬೇಕು. ಶುದ್ಧ ಕಾಯಕ ಮಾಡಬೇಕು. ಮುರುಘಾಮಠ ಮಾರ್ಗದರ್ಶನ ನೀಡುವಂತಹ ಮಠ. ಈ ಮಠದಲ್ಲಿ ಓದಿ ಬೆಳೆದಿರುವುದು ನಮ್ಮ ಪುಣ್ಯ ಎಂದರು.ಪತ್ರಕರ್ತೆ ಎಸ್.ರಶ್ಮಿ ಮಾತನಾಡಿ, ಆಚಾರ ಎಷ್ಟು ಮುಖ್ಯವೋ ವಿಚಾರವು ಅಷ್ಟೇ ಮುಖ್ಯ. ವಚನವೆಂದರೆ ಬರಿ ನುಡಿಗಲ್ಲ, ಅದು ಬದುಕು ರೂಪಿಸುವಂತಹದು. ನಮ್ಮ ಮನಸ್ಸು ಮಂಗನ ರೂಪದ್ದು. ಅದನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ಮಕ್ಕಳಿಗೆ ಚಿಕ್ಕಂದಿನಿಂದ ವಚನಪ್ರಜ್ಞೆ, ಸಂಸ್ಕಾರ ಕಲಿಸಬೇಕು. ಮಕ್ಕಳನ್ನು ಅಂಕದ ಬೆನ್ನತ್ತಲು ಬಿಡದೇ ಅನ್ನದ ಬೆಲೆಯನ್ನು ತಿಳಿಸಬೇಕು. ಶ್ರಮವಿಲ್ಲದ ದುಡಿಮೆ ಸತ್ಕಾರ್ಯಕ್ಕೆ ಬರುವುದಿಲ್ಲ. ಯಶಸ್ಸಿಗೆ ಪರಿಶ್ರಮವೇ ಗುಟ್ಟು ಎಂದು ಹೇಳಿದರು.ನಾಗನೂರು ಬಸವಧರ್ಮ ಪ್ರಚಾರಕ ಸಂಸ್ಥೆಯ ಕಾರ್ಯದರ್ಶಿ ಶರಣೆ ಡಿ.ಪಿ.ನಿವೇದಿತಾ ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀಯರ ಸಮಾನತೆಗಾಗಿ, ಸ್ವಾತಂತ್ರ್ಯಕ್ಕೆ ಹೋರಾಡಿದವರು. ಅಂದಿನ ಕಾಲದಲ್ಲಿ ಬಸವಣ್ಣ ಮಹಿಳೆಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ನೀಡಿದರು. ಅಂದಿನ ವಚನಗಾರ್ತಿಯರು ತಮ್ಮ ಅನುಭವಗಳನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದರು. ಆಯ್ದಕ್ಕಿ ಲಕ್ಕಮ್ಮ ಅತಿಯಾಸೆ ಮಾಡಬಾರದೆಂದು ತನ್ನ ಪತಿಗೆ ಮನದಟ್ಟು ಮಾಡಿದ್ದರು ಎಂದರು.
ಶರಣೆ ಸತ್ಯಕ್ಕ ಪರದ್ರವ್ಯ ಕಸಕ್ಕೆ ಸಮಾನವೆಂದು ಹೇಳಿದ್ದರು. ಶರಣಪರಂಪರೆಯಲ್ಲಿ ಅಕ್ಕಮಹಾದೇವಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ದಾನ ಕೊಟ್ಟವನು ದೊಡ್ಡವನು, ತೆಗೆದುಕೊಂಡವನು ಸಣ್ಣವನಾಗುತ್ತಾನೆ ಎಂಬ ಭಾವನೆ ತೊಲಗಿಸುವ ಕಾರಣದಿಂದ ಬಸವಣ್ಣ ದಾಸೋಹ ಸಂಸ್ಕೃತಿ ತಂದರು ಎಂದು ನುಡಿದರು.ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ, ಶಾಂತವೀರ ಗುರುಮುರುಘರಾಜೇಂದ್ರ ಶ್ರೀ, ಡಾ. ಬಸವಪ್ರಭು ಶ್ರೀ, ಡಾ. ಬಸವಕುಮಾರ ಶ್ರೀ, ಕಿರಣ್ ಮಾನ್ವಿ ಉಪಸ್ಥಿತರಿದ್ದರು.ಗದಗದ ಶ್ರೀ ಸಚ್ಚಿದಾನಂದ ಪ್ರಭು ಅನ್ನದಾನೇಶ್ವರ ತುಪ್ಪದ, ರಾಜು ಅಜ್ಜಪ್ಪ ಮಾನ್ವಿ, ಬಿಎಲ್ ಡಿ. ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ. ಜಯರಾಜ್, ಭರಮಸಾಗರದ ಶ್ರೀ ಶಿವಬಸಯ್ಯ ಹಿರೇಮಠ ಅವರುಗಳನ್ನು ಸನ್ಮಾನಿಸಲಾಯಿತು.