ಸಾರಾಂಶ
15 ತಿಂಗಳ ನಂತರ ಮಾಗಡಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದ್ದು, ಈ ಬಾರಿ ಅಧ್ಯಕ್ಷ ಸ್ಥಾನವನ್ನು ಮತ್ತೆ ಜೆಡಿಎಸ್ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದು, ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಪಡೆದುಕೊಳ್ಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದೆ.
ಎಚ್.ಆರ್.ಮಾದೇಶ್
ಕನ್ನಡಪ್ರಭ ವಾರ್ತೆ ಮಾಗಡಿ15 ತಿಂಗಳ ನಂತರ ಮಾಗಡಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದ್ದು, ಈ ಬಾರಿ ಅಧ್ಯಕ್ಷ ಸ್ಥಾನವನ್ನು ಮತ್ತೆ ಜೆಡಿಎಸ್ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದು, ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಪಡೆದುಕೊಳ್ಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದೆ. ಮಾಗಡಿ ಪುರಸಭೆಯಲ್ಲಿ ಒಟ್ಟು 23 ಸದಸ್ಯರುಗಳಿದ್ದು, ಜೆಡಿಎಸ್‌ದಿಂದ 12, ಕಾಂಗ್ರೆಸ್‌ನಿಂದ 10, ಬಿಜೆಪಿಯಿಂದ ಒಬ್ಬರು ಆಯ್ಕೆಯಾಗಿದ್ದು, ಶಾಸಕ ಬಾಲಕೃಷ್ಣ ಮತ ಹಾಗೂ ಸಂಸದ ಡಾ. ಸಿ ಎನ್ ಮಂಜುನಾಥ್ ಮತ ಸೇರಿ ಒಟ್ಟು 25 ಮತಗಳು ಇವೆ. ಜೆಡಿಎಸ್ ಮತ್ತು ಬಿಜೆಪಿ ಸೇರಿ ಮೊದಲ ಸಲ ಅಧ್ಯಕ್ಷ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯಿಂದ ಗೆದ್ದಿದ್ದ ಭಾಗ್ಯಮ್ಮ ನಾರಾಯಣಪ್ಪಗೆ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಮಾಡಲಾಗಿತ್ತು. ಎರಡನೆಯ ಅವಧಿಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿ ವಿಜಯಲಕ್ಷ್ಮಿ ರೂಪೇಶ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಯಲಿದ್ದು, ಜೆಡಿಎಸ್‌ನ ಬಲ 13ಕ್ಕೆ ಏರಿಕೆಯಾಗಿದ್ದು, ಬಿಜೆಪಿಯಿಂದ ಸಂಸದರಾಗಿ ಗೆದ್ದಿರುವುದರಿಂದ ಈ ಮತವು ಸೇರಿ ತನ್ನ ಬಲವನ್ನು 14ಕ್ಕೆ ಏರಿಸಿಕೊಂಡಿದೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಉಪಾಧ್ಯಕ್ಷರಾಗಿ ಎರಡುವರೆ ವರ್ಷ ಆಡಳಿತ ನಡೆಸಿದ 23 ನೇ ವಾರ್ಡಿನ ರಹಮತ್ ಜೆಡಿಎಸ್‌ದಿಂದ ಅಂತರ ಕಳೆದುಕೊಂಡು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಮಾಜಿ ಸಂಸದ ಡಿ.ಕೆ.ಸುರೇಶ್ ಪರವಾಗಿ ಕೆಲಸ ಮಾಡಿದ್ದು ಈಗ ಅವರ ನಡೆ ಕುತೂಹಲ ಮೂಡಿಸಿದೆ. ಜೆಡಿಎಸ್ ಪರವಾಗಿ ನಿಲ್ಲುತ್ತಾರೋ ಅಥವಾ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಳ್ಳುತ್ತಾರೋ ಅಥವಾ ಚುನಾವಣೆ ಗೈರು ಆಗುತ್ತಾರೋ ಎಂಬುದು ಚುನಾವಣೆಯಲ್ಲಿ ಬಹಿರಂಗವಾಗಲಿದ್ದು, ರಹಮತ್ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದರೆ ಕಾಂಗ್ರೆಸ್ ಬಲ 12 ಕ್ಕೆ ಏರಿಕೆ ಆಗಲಿದೆ. ಆಗ ಜೆಡಿಎಸ್ ಬಲ 13ಕ್ಕೆ ಕುಸಿಯಲ್ಲಿದ್ದು, ಆಗಲು ಕೂಡ ಜೆಡಿಎಸ್ ಒಂದು ಮತದ ಅಂತರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಬಹುದು. ಜೆಡಿಎಸ್‌ನಲ್ಲಿ ಮತ್ತೆ ಪೈಪೋಟಿ ಆರಂಭ: ಮಾಗಡಿ ಪುರಸಭೆ ಜೆಡಿಎಸ್ ವಶದಲ್ಲಿ ಇದ್ದು ಕಳೆದ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು. ಈ ಬಾರಿಯೂ ಕೂಡ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದರಿಂದ ಕಳೆದ ಬಾರಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ ಮಹಿಳಾ ಸದಸ್ಯರು ಈಗ ಮತ್ತೆ ಎರಡನೇ ಅವಧಿಗೆ ಅಧ್ಯಕ್ಷರಾಗಲು ಪೈಪೋಟಿಯಲ್ಲಿದ್ದಾರೆ. ಅಧ್ಯಕ್ಷರಾಗಲು ಒಂದನೇ ವಾರ್ಡಿನ ನಾಗರತ್ನ, 15ನೇ ವಾರ್ಡಿನ ಎಂ. ಆರ್. ರೇಖಾ ನವೀನ್, 16ನೇ ವಾರ್ಡಿನ ಹೇಮಲತಾ ಪೈಪೋಟಿಯಲ್ಲಿದ್ದಾರೆ. ಮಾಜಿ ಶಾಸಕ ಎ.ಮಂಜುನಾಥ್ ಯಾರಿಗೆ ಅಧ್ಯಕ್ಷರಾಗಿ ಸೂಚನೆ ನೀಡುತ್ತಾರೋ ಅವರು ಮೊದಲ ಅವಧಿಗೆ ಅಧ್ಯಕ್ಷರಾಗುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್‌ನಲ್ಲೂ ಪೈಪೋಟಿ: ಕಾಂಗ್ರೆಸ್‌ನಲ್ಲೂ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಶಾಸಕ ಬಾಲಕೃಷ್ಣ ಬಲದಿಂದ ಈ ಬಾರಿ ಪುರಸಭೆ ಗಾದಿಯನ್ನು ಕಾಂಗ್ರೆಸ್ ವಶಕ್ಕೆ ಪಡೆದುಕೊಳ್ಳಲು ಕಸರತ್ತನ್ನು ತೆರೆಮರೆಯಲ್ಲಿ ಆರಂಭಿಸಿದ್ದು, ಜೆಡಿಎಸ್ ನಲ್ಲಿ ಅಸಮಾಧಾನಗೊಂಡಿರುವ ಸದಸ್ಯರನ್ನು ಸೆಳೆದುಕೊಂಡು ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಗಾದಿಗೆ ಪ್ರಬಲವಾಗಿ 8ನೇ ವಾರ್ಡಿನ ಆಶಾರಾಣಿ ರಘು, 21ನೇ ವಾರ್ಡಿನ ಶಿವರುದ್ರಮ್ಮ ವಿಜಯಕುಮಾರ್, 22ನೇ ವಾರ್ಡಿನ ರಮ್ಯ ನರಸಿಂಹಮೂರ್ತಿ ಪ್ರಬಲ ಆಕಾಂಕ್ಷಿಯಾಗಿದ್ದು, 6ನೇ ವಾರ್ಡಿನ ಮಮತಾ ಗುರು ಕೂಡ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದು, ಶಾಸಕ ಬಾಲಕೃಷ್ಣ ಯಾರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಿದೆ. ವಿಪ್ ಜಾರಿ: ಪಕ್ಷದ ಚಿನ್ಹೆ ಮೇಲೆ ಗೆದ್ದಿರುವ ಸದಸ್ಯರಿಗೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ವಿಪ್ ಜಾರಿ ಮಾಡಲಿದ್ದು, ಪಕ್ಷದ ಪರವಾಗಿಯೇ ಸದಸ್ಯರು ಮತ ಚಲಾಯಿಸಬೇಕು. ಒಂದು ವೇಳೆ ತಾವು ಗೆದ್ದಿರುವ ಪಕ್ಷದ ವಿರುದ್ಧ ಬೇರೆ ಪಕ್ಷಕ್ಕೆ ಮತ ಚಲಾಯಿಸಿದರೆ ಅಂತಹ ವಿರುದ್ಧ ವಿಪ್ ಉಲ್ಲಂಘನೆ ಕಾಯ್ದೆ ಅಡಿ ಸದಸ್ಯತ್ವ ರದ್ದುಪಡಿಸಬಹುದು. ಈ ಹಿನ್ನೆಲೆಯಲ್ಲಿ ಸದಸ್ಯರುಗಳು ತಮ್ಮ ಪಕ್ಷದ ಪರವಾಗಿಯೇ ಮತ ಚಲಾಯಿಸುವ ಅನಿವಾರ್ಯತೆ ಎದುರಾಗಲಿದೆ. ಒಟ್ಟಿನಲ್ಲಿ ಜೆಡಿಎಸ್ ವಶದಲ್ಲಿರುವ ಮಾಗಡಿ ಪುರಸಭೆಯನ್ನು ಕಾಂಗ್ರೆಸ್ ಪಕ್ಷ ಹಿಡಿಯುವಲ್ಲಿ ಸಫಲರಾಗುತ್ತಾರೋ ಅಥವಾ ಜೆಡಿಎಸ್ ತನ್ನ ಬಲವನ್ನು ಉಳಿಸಿಕೊಂಡು ಮತ್ತೊಮ್ಮೆ ಆಡಳಿತ ಮಾಡುತ್ತಾರೋ ಕಾದು ನೋಡಬೇಕಿದೆ.