ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಈಡಿಸ್ ಸೊಳ್ಳೆಯಿಂದ ಹರಡುವ ಡೆಂಘೀ ಜ್ವರವು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ ಎಂದು ಜಿಲ್ಲಾ ಕೀಟಶಾಸ್ತ್ರಜ್ಞ ನಂದಿನಿ ಕಡಿ ಹೇಳಿದರು.ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್‌ವಿಬಿಡಿಸಿಪಿ ಅಧಿಕಾರಿಗಳ ಕಛೇರಿ ಚಿತ್ರದುರ್ಗ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯಧಿಕಾರಿಗಳ ಕಛೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಹೊಸದುರ್ಗ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಡೆಂಘೀ ದಿನದ ಪ್ರಯುಕ್ತ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಡೆಂಘೀ ನಿಯಂತ್ರಣದ ಬಗ್ಗೆ ಏರ್ಪಡಿಸಲಾಗಿದ್ದ ಅಡ್ವೊಕೆಸಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರಿನ ನಂತರದ ದಿನಗಳಲ್ಲಿ ಸೊಳ್ಳೆಗಳ ಸಾಂದ್ರತೆ ಜಾಸ್ತಿಯಾಗಿ ಡೆಂಘೀ ರೋಗ ಉಲ್ಬಣವಾಗುತ್ತದೆ. ಆದ್ದರಿಂದ ಸೊಳ್ಳೆ ನಿಯಂತ್ರಣಕ್ಕೆ ಕೀಟನಾಶಕ ಬಳಕೆ ಮಾಡಬಹುದು. ಲಾರ್ವ ಸಮೀಕ್ಷೆಗೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಬಂದಾಗ ಅವರೊಂದಿಗೆ ಸಹಕರಿಸುವುದರ ಜೊತೆಗೆ ಮನೆಗಳಲ್ಲಿ ನೀರಿನ ತಾಣಗಳಾದ ಡ್ರಮ್, ಬ್ಯಾರೆಲ್, ತೊಟ್ಟಿಗಳನ್ನು ವಾರಕ್ಕೊಮ್ಮೆ ತೊಳೆದು, ಒಣಗಿಸಿ ನೀರು ತುಂಬಿಸಬೇಕೆಂದು ಕರೆ ನೀಡಿದರು.ಸಾರ್ವಜನಿಕ ಅಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಕೇಶ್ ಮಾತನಾಡಿ, ವಿಪರೀತ ಜ್ವರ, ಕಣ್ಣುಗುಡ್ಡೆಗಳಲ್ಲಿ ನೋವು, ಮಾಂಸಖಂಡ ಮತ್ತು ಕೀಲು ನೋವು ಮುಂತಾದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಿರ್ಲಕ್ಷಿಸಿದೆರೆ ಡೆಂಘೀ ರಕ್ತ ಸ್ರಾವ ಮತ್ತು ಮೆದುಳು ಸೋಂಕು ಉಂಟಾಗಿ ಸಾವು ಸಹ ಸಂಬವಿಸಬಹುದು ಆದ್ದರಿಂದ ನಿರ್ಲಕ್ಷ್ಯ ವಹಿಸದೆ ವೈದ್ಯರ ಸಲಹೆ ಪಡೆದುಕೊಳ್ಳಲು ತಿಳಿಸಿದರು.
ಇದೇ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೆಂದ್ರ ಪಾಟೀಲ್ ಮಾತನಾಡಿದರು. ಕಾರ್ಯಾಗಾರದಲ್ಲಿ ಧೂಮಲೀಕರಣ ಯಂತ್ರ, ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗಾಂಭೂಷಿಯ ಮತ್ತು ಸೊಳ್ಳೆಗಳ ಉತ್ಪತ್ತಿಯ ಎರಡನೇ ಹಂತ ಲಾರ್ವಾಗಳ ಪ್ರಾತ್ಯಕ್ಷಿಕೆ ಮಾಡಲಾಯಿತು.ಈ ವೇಳೆ ಜಿಲ್ಲಾ ಮೇಲ್ವಿಚಾರಕ ನಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದರಾಮಪ್ಪ, ಬಿಪಿಎಂ ಕಿರಣ್, ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಆಶಾ ಮೇಲ್ವಿಚಾರಕಿ ಬಸವಲಿಂಗಮ್ಮ ಮತ್ತು ತಾಲೂಕಿನ ಎಲ್ಲಾ ಪ್ರೌಡಶಾಲೆಗಳ ವಿಜ್ಞಾನ ಶಿಕ್ಷಕರು ಪಾಲ್ಗೊಂಡಿದ್ದರು.