ಯಳಂದೂರಿನಲ್ಲಿ ಸಂಭ್ರಮದ ಸುಬ್ರಹ್ಮಣ್ಯ ಷಷ್ಠಿ ಹಬ್ಬ

| Published : Dec 08 2024, 01:20 AM IST

ಯಳಂದೂರಿನಲ್ಲಿ ಸಂಭ್ರಮದ ಸುಬ್ರಹ್ಮಣ್ಯ ಷಷ್ಠಿ ಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಯಳಂದೂರು, ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತ ಶನಿವಾರ ಸಂಭ್ರಮ ಸಡಗರಗಳಿಂದ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ನಿಮಿತ್ತ ಬೆಳಗ್ಗೆಯಿಂದಲೇ ಈಶ್ವರ ದೇಗುಲ, ನಾಗರ ಕಲ್ಲುಗಳು ಹಾಗೂ ಹುತ್ತಕ್ಕೆ ಭಕ್ತರು ಹೂವು, ಹಣ್ಣು, ಹಾಲು ಎರೆದು ಭಕ್ತಿ ಮೆರೆದರು. ಸರತಿ ಸಾಲಿನಲ್ಲಿ ಪೂಜೆಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಯಳಂದೂರು: ಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತ ಶನಿವಾರ ಸಂಭ್ರಮ ಸಡಗರಗಳಿಂದ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಆಚರಿಸಲಾಯಿತು.

ಹಬ್ಬದ ನಿಮಿತ್ತ ಬೆಳಗ್ಗೆಯಿಂದಲೇ ಈಶ್ವರ ದೇಗುಲ, ನಾಗರ ಕಲ್ಲುಗಳು ಹಾಗೂ ಹುತ್ತಕ್ಕೆ ಭಕ್ತರು ಹೂವು, ಹಣ್ಣು, ಹಾಲು ಎರೆದು ಭಕ್ತಿ ಮೆರೆದರು. ಸರತಿ ಸಾಲಿನಲ್ಲಿ ಪೂಜೆಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಲಿನೊಂದಿಗೆ ಕೋಳಿ, ಮೊಟ್ಟೆ ಅರ್ಪಿಸಿದ ಭಕ್ತರು ಕೆಲವೆಡೆ ಹುತ್ತದ ಬಾಯಿಗೆ ಭಕ್ತರು ಕೋಳಿಗಳನ್ನು ಬಲಿ ಕೊಟ್ಟು ಕತ್ತುಗಳನ್ನು ಅದರೊಳಗೆ ಇಡುತ್ತಿದ್ದರೆ, ಕೆಲವರು ಮೊಟ್ಟೆಗಳನ್ನು ಹುತ್ತದೊಳಗೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಕೆಲವೆಡೆ ಇನ್ನೂ ಕೂಡ ಆಚರಣೆಯಲ್ಲಿದೆ. ಇದು ಬೇರೆ ಜಿಲ್ಲೆಗಳಲ್ಲಿ ಕಾಣಸಿಗುವುದಿಲ್ಲ.

ಹಾವಿಗೆ ಹಾಲೆರೆದು ಹಣ್ಣು ಕಾಯಿ, ಅರಿಶಿನ, ಕುಂಕುಮ, ಎಲೆ ಅಡಿಕೆ ಇಡುವುದು ಸಾಮಾನ್ಯ ಸಂಪ್ರದಾಯವಾಗಿದೆ. ಆದರೆ ಹುತ್ತದ ಬಾಯಿಗೆ ಕೋಳಿ ಮೊಟ್ಟೆ ಇಡುವುದು, ಕೋಳಿಗಳ ಕತ್ತನ್ನು ಕೊಯ್ದು ಇದರ ಬಿಸಿ ರಕ್ತವನ್ನು ಹುತ್ತದ ಬಾಯಿಗೆ ಹಾಕಿ, ಅದರ ಕತ್ತನ್ನು ಹುತ್ತದ ಬಾಯಿಯೊಳಗೆ ಇಟ್ಟು ರುಂಡವನ್ನು ತೆಗೆದುಕೊಂಡು ಹೋಗಿ ಅಡುಗೆ ಮಾಡಿ ತಿನ್ನುವ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಕೆಲವಡೆ ಇನ್ನೂ ಜೀವಂತವಾಗಿದೆ.

ಸುಬ್ರಹ್ಮಣ್ಯ ಷಷ್ಠಿಯ ನಿಮಿತ್ತ ಪಟ್ಟಣದ ಗೌರೇಶ್ವರ ದೇಗುಲ, ಇದರ ಬಳಿಯಲ್ಲೇ ಇರುವ ಮಂಟಪದ ನಾಗರಕಲ್ಲು ಸೇರಿದಂತೆ ತಾಲೂಕಿನ ಕಂದಹಳ್ಳಿ, ಸಂತೆಮರಹಳ್ಳಿಯ ಮಹದೇಶ್ವರ ದೇಗುಲದಲ್ಲಿ ಹಬ್ಬದ ನಿಮಿತ್ತ ನೂರಾರು ಭಕ್ತರು ದೇವರ ದರ್ಶನ ಪಡೆದರು. ಈ ದೇಗುಲಗಳಲ್ಲಿ ಹಬ್ಬದ ನಿಮಿತ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಗುಂಡ್ಲುಪೇಟೆಯಲ್ಲಿ ಸಂಭ್ರಮ, ಸಡಗರದಿಂದ ಷಷ್ಠಿ ಹಬ್ಬ ಆಚರಣೆಗುಂಡ್ಲುಪೇಟೆ: ಷಷ್ಠಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಸಂಭ್ರಮ, ಸಡಗರದಿಂದ ಹುತ್ತಕ್ಕೆ ತನಿ ಎರೆದು ಭಕ್ತಿ ಭಾವದಿಂದ ಆಚರಿಸಿದರು. ಪಟ್ಟಣದ ದುಂದಾಸನಪುರ ರಸ್ತೆಯ ಬಳಿಯ ದೊಡ್ಡ ಆಲದ ಮರದ ಬಳಿಯಿರುವ ಹುತ್ತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಆಗಮಿಸಿ ಹಾಲು, ತುಪ್ಪ ಸುರಿದು ಭಕ್ತಿಯನ್ನು ಮೆರೆದರು. ತಾಲೂಕಿನ ಬೇಗೂರು, ಹಂಗಳ, ತೆರಕಣಾಂಬಿ ಹಾಗೂ ಕಸಬಾ ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ಜನರು ಬೆಳಗಿನ ಉಪವಾಸದೊಂದಿಗೆ ಷಷ್ಠಿ ಹಬ್ಬದಲ್ಲಿ ಭಾಗವಹಿಸಿದ್ದರು. ಗುಂಡ್ಲುಪೇಟೆ ಬಳಿಯ ದೊಡ್ಡ ಆಲದ ಮರದ ಬಳಿ ಕುಳಿತಿದ್ದವರಿಗೆ ಷಷ್ಠಿ ಹಬ್ಬದ ಹಿನ್ನೆಲೆಯಲ್ಲಿ ಬಾಳೆ ಹಣ್ಣು, ವಡೆ ಹಾಗೂ ಕಾಸು ನೀಡಿ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಪಟ್ಟಣದ ಬಳಿಯ ಕಬ್ಬೇಕಟ್ಟೇ ಶನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಹ ಜನರು ಹುತ್ತಕ್ಕೆ ತನಿ ಎರೆಯಲು ಮುಗಿ ಬಿದ್ದಿದ್ದರು.