ಸಾರಾಂಶ
ರಾಮನಗರ: ಬೊಂಬೆನಗರಿ ಎಂದೇ ಖ್ಯಾತಿಗಳಿಸಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಈ ಕ್ಷೇತ್ರದಲ್ಲಿ ಇಲ್ಲಿವರೆಗೆ ನಡೆದಿರುವ ಸಾರ್ವತ್ರಿಕ ಮತ್ತು ಪಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿಗಳೇ ಸೆಡ್ಡು ಹೊಡೆದು ಗಮನ ಸೆಳೆದಿದ್ದಾರೆ.
ಚನ್ನಪಟ್ಟಣ ಕ್ಷೇತ್ರ ಈವರೆಗೆ 18 ಸಾರ್ವತ್ರಿಕ ಮತ್ತು 2 ಉಪಚುನಾವಣೆ ಸೇರಿ ಒಟ್ಟು 20 ಚುನಾವಣೆಗಳನ್ನು ಕಂಡಿದೆ. ಇದರಲ್ಲಿ ಕಾಂಗ್ರೆಸ್ - 6, ಜನತಾ ಪರಿವಾರ - 7, ಬಿಜೆಪಿ - 2 ಬಾರಿ ಗೆಲುವು ಸಾಧಿಸಿದ್ದರೆ, ಪಕ್ಷದ ಅಸ್ತಿತ್ವವೇ ಇಲ್ಲದಿದ್ದರೂ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ , ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಒಂದೊಂದು ಬಾರಿ ಗೆದ್ದಿದ್ದಾರೆ. ಇಷ್ಟೇ ಅಲ್ಲದೆ ರಾಜಕೀಯ ಪಕ್ಷದ ಚಿಹ್ನೆಯೇ ಇಲ್ಲದೆ ಪಕ್ಷೇತರರು ಮೂರು ಬಾರಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.ಟಿ.ವಿ.ಕೃಷ್ಣಪ್ಪ ಪಕ್ಷೇತರರಾಗಿ ಗೆದ್ದು ದಾಖಲೆ:
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ 1951ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿ.ವೆಂಕಟಪ್ಪ ಚುನಾಯಿತರಾಗಿದ್ದರು. ಬಳಿಕ 1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಕೆ.ಪುಟ್ಟರಾಮಯ್ಯ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಗೆಲುವು ಸಾಧಿಸಿದರೆ, 1962ರಲ್ಲಿ ಬಿ.ಜೆ.ಲಿಂಗೇಗೌಡ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಆನಂತರ 1967 ಮತ್ತು 1972ರ ಚುನಾವಣೆಯಲ್ಲಿ ಟಿ.ವಿ.ಕೃಷ್ಣಪ್ಪ ಪಕ್ಷೇತರರಾಗಿ ಗೆದ್ದು ದಾಖಲೆಗೆ ಮುನ್ನುಡಿ ಬರೆದರು.1978ರಲ್ಲಿ ಡಿ.ಟಿ.ರಾಮು ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ ತರುವಾಯ 1983 ಮತ್ತು 1985ರ ಚುನಾವಣೆಯಲ್ಲಿ ಜನತಾ ಪಕ್ಷದ ವರದೇಗೌಡರವರು ಗೆದ್ದು ಕಾಂಗ್ರೆಸ್‌ನಿಂದ ಕ್ಷೇತ್ರವನ್ನು ಕಸಿದುಕೊಂಡರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಾದತ್ ಅಲಿ ಖಾನ್ ಗೆಲುವು ಕಂಡರೆ, ಮರು ಚುನಾವಣೆಯಲ್ಲಿಯೇ ಅಂದರೆ 1994ರಲ್ಲಿ ಜನತಾ ದಳದಿಂದ ವರದೇಗೌಡ ಶಾಸಕರಾಗಿ ಆಯ್ಕೆಯಾದರು. 1999ರ ಚುನಾವಣೆಯಿಂದ ಚನ್ನಪಟ್ಟಣದ ರಾಜಕೀಯ ತೆರೆಯ ಮೇಲೆ ಕಾಣಿಸಿಕೊಂಡು ಸಿ.ಪಿ.ಯೋಗೇಶ್ವರ್ ಮೊದಲ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
2004 ಮತ್ತು 2008ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಅವಕಾಶ ಸಿಗುವುದನ್ನು ಕಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಆದರೆ, 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದರು. 2011ರಲ್ಲಿ ನಡೆದ ಮತ್ತೊಂದು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಯೋಗೇಶ್ವರ್ ಅರಣ್ಯ ಖಾತೆ ಸಚಿವರಾದರು.2013ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದರೂ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿ ಕ್ಷೇತ್ರದ ಮೇಲೆ ತಮ್ಮ ಪ್ರಾಬಲ್ಯ ಉಳಿದಿರುವುದನ್ನು ತೋರಿಸಿದ್ದರು. 2018 ಹಾಗೂ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎದುರು ಸೋತು ರಾಜಕೀಯವಾಗಿಯೂ ಹಿನ್ನಡೆ ಅನುಭವಿಸಿದರು.
ಬಾಕ್ಸ್.........ರಾಜಕೀಯ ಸ್ವರೂಪ ಬದಲಿಸಿದ ಸಿಪಿವೈ!
ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದನ್ನು ತೋರಿಸಿದ ಕ್ಷೇತ್ರಗಳ ಸಾಲಿನಲ್ಲಿ ಚನ್ನಪಟ್ಟಣವೂ ಒಂದು. ಆರಂಭದಲ್ಲಿ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಈ ಕ್ಷೇತ್ರದ ರಾಜಕೀಯ ಸ್ವರೂಪ ಬದಲಿಸಿದವರು ಸಿ.ಪಿ.ಯೋಗೇಶ್ವರ್, ಸಿನಿಮಾ ನಟನಾಗಿ ಹೆಸರು ಮಾಡಿದ್ದ ಯೋಗೇಶ್ವರ್ ಹಲವು ಬಾರಿ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಅವರು, 2004 ಮತ್ತು 2008ರಲ್ಲಿ ಕಾಂಗ್ರೆಸ್ ಉಮೇದುವಾರರಾಗಿ ಜಯಗಳಿಸಿದ್ದರು. ಒಂದರ್ಥದಲ್ಲಿ ವ್ಯಕ್ತಿಗತ ಹ್ಯಾಟ್ರಿಕ್ ಸಾಧನೆ.ರಾಜಕೀಯ ಪಲ್ಲಟದ ಕಾರಣ ಶಾಸಕರಾಗಿದ್ದ ಯೋಗೇಶ್ವರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕ್ಷೇತ್ರ ಉಪಚುನಾವಣೆ ಕಾಣುವಂತಾಯಿತು.
2009ರ ಉಪಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಸಿ.ಅಶ್ವತ್ಥ ಯೋಗೇಶ್ವರ್‌ಗೆ ಸೋಲುಣಿಸಿದ್ದರು. ಬಳಿಕ ನಡೆದ 2011ರ ಚುನಾವಣೆಯಲ್ಲಿ ಬಿಜೆಪಿ ಹಾಗೂ 2013ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ವಿಜಯ ಪತಾಕೆ ಹಾರಿಸಿದ ಯೋಗೇಶ್ವರ್ ಪಕ್ಷಕ್ಕಿಂತಲೂ ವ್ಯಕ್ತಿಯೇ ಪ್ರಮುಖ ಎನ್ನುವುದನ್ನು ಸಾಕ್ಷೀಕರಿಸಿದರು.ಬಾಕ್ಸ್........
ನಾಲ್ಕು ಚುನಾವಣೆಗಳ ಬಲಾಬಲ:2011ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಎಸ್.ಎಲ್.ನಾಗರಾಜು ವಿರುದ್ಧ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಯೋಗೇಶ್ವರ್ 75,275 ಮತ ಪಡೆದರೆ, ಎಸ್ ಎಲ್ ನಾಗರಾಜು 57,472 ಮತಗಳನ್ನು ಗಳಿಸಿ 17,803 ಮತಗಳಿಂದ ಯೋಗೇಶ್ವರ್ ಎದುರು ಸೋತರು. 2013ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಉಮೇದುವಾರರಾಗಿದ್ದ ಸಿ.ಪಿ. ಯೋಗೇಶ್ವರ್, ತಮ್ಮ ಎದುರಾಳಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಎದುರು 6,464 ಮತಗಳ ಅಲ್ಪ ಅಂತರದಿಂದ ಜಯ ಪಡೆದಿದ್ದರು.ಈ ಚುನಾವಣೆಯಲ್ಲಿ ಯೋಗೇಶ್ವರ್ 80,099ಮತ ಪಡೆದರೆ, ಅನಿತಾ ಕುಮಾರಸ್ವಾಮಿ, 73,635 ವೋಟು ಗಳಿಸಿದ್ದರು. 2018ರ ಚುನಾವಣೆಯ ಹಣಾಹಣಿಯ ವೇಳೆಗೆ ಮರಳಿ ಪಕ್ಷ ಬದಲಾವಣೆ ಮಾಡಿದ ಯೋಗೇಶ್ವರ್ ಬಿಜೆಪಿ ಸೇರಿ ಅಲ್ಲಿಂದ ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್‌ನ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್.ಡಿ .ಕುಮಾರಸ್ವಾಮಿ ಎದುರು ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಇಲ್ಲಿ ಕುಮಾರಸ್ವಾಮಿ 87,995 ಮತಗಳನ್ನು ಪಡೆದಿದ್ದರೆ, ಯೋಗೇಶ್ವರ್ 66465 ಮತಗಳನ್ನು ಗಳಿಸಿದ್ದರು. ಪ್ರತಿಷ್ಠೆಯ ಪೈಪೋಟಿಯಲ್ಲಿ ಯೋಗೇಶ್ವರ್ 21,530 ವೋಟುಗಳ ಅಂತರದ ಸೋಲು ಕಂಡಿದ್ದರು. 2023ರ ಚುನಾವಣೆಯಲ್ಲಿಯೂ ಕುಮಾರಸ್ವಾಮಿ ಎದುರು ಯೋಗೇಶ್ವರ್ ಪರಾಭವಗೊಂಡರು.
22ಕೆಆರ್ ಎಂಎನ್ 3.ಜೆಪಿಜಿಚನ್ನಪಟ್ಟಣ ಕ್ಷೇತ್ರದ ಚಿತ್ರ.