ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ರಾತ್ರೋ ರಾತ್ರಿ ಬೀಗ - ಭಕ್ತರಲ್ಲಿ ಸಂಚಲನ

| N/A | Published : Jul 15 2025, 01:37 PM IST

duplicate key

ಸಾರಾಂಶ

ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಭಾನುವಾರ ರಾತ್ರೋ ರಾತ್ರಿ ಬೀಗ ಹಾಕಲಾಗಿದ್ದು, ಭಕ್ತರಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

  ಬಾಗಲಕೋಟೆ :  ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಭಾನುವಾರ ರಾತ್ರೋ ರಾತ್ರಿ ಬೀಗ ಹಾಕಲಾಗಿದ್ದು, ಭಕ್ತರಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಮಠದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದರಿಂದ ಈಗಾಗಲೇ ಗೇಟ್‌ಗಳನ್ನು ಅಳವಡಿಸಲಾಗಿದ್ದು, ರಕ್ಷಣೆಯ ದೃಷ್ಟಿಯಿಂದ ಇದಕ್ಕೆ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಬೀಗ ಹಾಕಿದ್ದು ಯಾರು? ಯಾಕೆ ಹಾಕಿದ್ದಾರೆ ಎಂಬುದು ನಿಗೂಢವಾಗಿದೆ. ಕೆಲವರು ಈ ಬೀಗವನ್ನು ಭಾನುವಾರ ಮಧ್ಯರಾತ್ರಿಯೇ ಮುರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಹುನಗುಂದ ಪೊಲೀಸ್‌ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.

ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರ ವಿವಾದ ತಣ್ಣಗಾಯಿತು ಎನ್ನುತ್ತಿರುವಾಗಲೇ ಮತ್ತೆ ಬೀಗ ಹಾಕುವ ಮಟ್ಟಕ್ಕೆ ಹೋಗಿರುವುದು ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ನಡುವೆ ಬಸವ ಜಯ ಮೃತ್ಯುಂಜಯ ಶ್ರೀಗಳು ಕೂಡ ಕಿಡಿಕಾರಿದ್ದು, ಹಾಕಿರುವ ಬೀಗವನ್ನು ತೆರವುಗೊಳಿಸುವಂತೆ ಪೊಲೀಸರಿಗೆ ತಿಳಿಸಿದ್ದಾರೆ.

 ಸುರಕ್ಷತೆ ಮುಖ್ಯ

ಮಠ ನಮ್ಮ ಸಂಪತ್ತು. ಅದರ ಟ್ರಸ್ಟಿ ಅಧ್ಯಕ್ಷನಾಗಿ ರಕ್ಷಣೆ ಮಾಡಬೇಕಾಗಿರುವುದು ನನ್ನ ಕರ್ತವ್ಯ. ಮಠದ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅದರ ಪಾವಿತ್ರ್ಯತೆ ಹಾಳಾಗಬಾರದು. ಈ ನಿಟ್ಟಿನಲ್ಲಿ ಅದರ ರಕ್ಷಣೆಗೆ ನಾವು ಸದಾ ಬದ್ಧರಾಗಿರಬೇಕಾಗುತ್ತದೆ. ಮಠದ ಸುರಕ್ಷತೆ ದೃಷ್ಟಿಯಿಂದ ಗೇಟ್‌ ಅಳವಡಿಸಲಾಗಿದೆ.

-ವಿಜಯಾನಂದ ಕಾಶಪ್ಪನವರ, ಶಾಸಕ.

 ಕಿಡಿಗೇಡಿಗಳ ಕೃತ್ಯ

ಯಾರೋ ಕಿಡಿಗೇಡಿಗಳು ಮಠಕ್ಕೆ ಬೀಗ ಹಾಕಿರುವ ವಿಚಾರ ಸೋಮವಾರ ಬೆಳಗ್ಗೆ ತಿಳಿಯಿತು. ಇದನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದೇನೆ. ಒಬ್ಬ ವ್ಯಕ್ತಿಯ ಹೋರಾಟ ಕುಂದಿಸುವ ಪ್ರಯತ್ನ ಮಾಡುತ್ತಾರೆ. ಇದು ಭಕ್ತರ ಭೌತಿಕ ಆಸ್ತಿ ಆಗಿದ್ದು, ಸಮಾಜಕ್ಕಾಗಿ ಬದುಕುತ್ತೇನೆ.

-ಬಸವಜಯ ಮೃತ್ಯುಂಜಯ ಶ್ರೀಗಳು, ಕೂಡಲಸಂಗಮ ಮಠ.

Read more Articles on