ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಳೆ ಕೊರತೆಯಿಂದಾಗಿ ತೀವ್ರ ನೀರಿನ ಬರಗಾಲ ಎದುರಾಗುವ ಸಂಭವಗಳಿರುವ ಈ ಬೇಸಿಗೆಯಲ್ಲಿ ಸಂಭವನೀಯ ನೀರಿನ ಸಂಕಷ್ಟ ಎದುರಿಸಲು ಕಲಬುರಗಿ ಮಹಾನಗರ ಪಾಲಿಕೆ 11.25 ಕೋಟಿ ರು. ವೆಚ್ಚದ ಸಂಕಷ್ಟ ಕ್ರಿಯಾ ಯೋಜನೆ ಸಿದ್ಧಪಡಿಸಿಟ್ಟುಕೊಂಡಿದೆ.ನಗರದಲ್ಲಿರುವ ಎಲ್ಲಾ 55 ವಾರ್ಡ್‌ಗಳಲ್ಲಿ ಕೆಟ್ಟು ನಿಂತಿರೋ ಕೊಳವೆ ಬಾವಿ ನಿರ್ವಹಣೆ- 2.86 ಕೋಟಿ ರು., ಕೊಳವೆ ಬಾವಿಗಳಿಗೆ 25.5 ಕಿಮೀ ಉದ್ದದ ಜಿಐ ಪೈಪ್‌ಲೈನ್ ಅಳವಡಿಕೆ- 1 46 ಕೋಟಿ ರು., ಪರಿಸ್ಥಿತಿ ನೋಡಿಕೊಂಡು ಟ್ಯಾಂಕರ್ ನೀರು ಪೂರೈಕೆ- 5.14 ಕೋಟಿ ರು. ಸೇರಿದಂತೆ ಬೇಸಿಗೆಯ 4 ತಿಂಗಳಿಗಾಗಿ 11.25 ಕೋಟಿ ಮೊತ್ತದ ಸಂಕಷ್ಟ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಪಾಲಿಕೆ ಹಾಗೂ ಕೆಯುಐಎಫ್‌ಡಿಸಿ ಅಧಿಕಾರಿಗಳು ಟೌನ್ ಹಾಲ್‌ನಲ್ಲಿ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹ್ಮದ್ ಸಿದ್ದಿ ಶಾರಿಪೂರ ರಹಮಾನ್ ಇವರು ಮಂಡಿಸಿರುವ ನಗರ ನೀರು ನಿರ್ವಹಣೆಯ ಕುರಿತಾದ ಪ್ರಸ್ತಾವನೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅಧಿಕಾರಿಗಳು ಮಾಹಿತಿ ನೀಡಿದರು.ಕಲಬುರಗಿ ನಗರಕ್ಕೆ ನಿತ್ಯ 108.68 ಎಂಎಲ್‌ಡಿ (ಪ್ರತಿದಿನ ದಶಲಕ್ಷ ಲೀಟರ್) ನೀರು ಬೇಕು, ಸರಡಗಿ ಭೀಮಾ ಬಾಂದಾರಲ್ಲಿ 1.8 ಟಿಎಂಸಿ ನೀರಿರೋದರಿಂದ ಜನೇವರಿ ಅಂತ್ಯದವರೆಗಂತೂ ಯಾವುದೇ ಸಮಸ್ಯೆ ಇಲ್ಲ. ನಂತರದ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆ ನಿಭಾಯಿಸಲು ನಾರಾಯಣಪೂರ ಸಮತೋಲನ ಜಲಾಶಯದಿಂದ 2 ಟಿಎಂಸಿ ನೀರು ಕೇಳಿ ಪತ್ರ ಬರೆದಿದ್ದೇವೆ. ಅಲ್ಲಿಂದ ನೀರು ಸರಡಗಿ ಬಂದಾರು ಬಂದು ಸೇರಲು 2 ವಾರ ಬೇಕು. ಇವನ್ನೆಲ್ಲ ತಾಂತ್ರಿಕ ಅಂಶ ಗಮನದಲ್ಲಿಟ್ಟುಕೊಂಡು ನಗರ ನೀರು ಪೂರೈಕೆಯಲ್ಲಿ ವ್ಯತ್ಯಟವಾಗದಂತೆ ನಿಭಾಯಿಸುವ ಭರವಸೆ ಕೆಯುಐಎಪ್‌ಡಿಸಿ ಹಾಗೂ ನೀರು ಪೂರೈಕೆ ಹೊಣೆ ಹೊತ್ತಿರುವ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.
ಭೀಮಾ ನದಿಯಿಂದ 44 ವಾರ್ಡ್‌ಗಳಿಗೆ ಭೀಮಾ ಹಾಗೂ 11 ವಾರ್ಡ್‌ಗಳಿಗೆ ಬೆಣ್ಣೆತೊರಾ ನೀರನ್ನು ಪೂರೈಸಲಾಗುತ್ತಿದೆ. ಬೆಣ್ಣೆತೊರೆಯಲ್ಲಿಯೂ ನೀರಿನ ಕೊರತೆ ಕಾಡಿದರೆ ತುರ್ತು ಸಂದರ್ಭದಲ್ಲಿರಲಿ ಎಂದು ಅದಾಗಲೇ ಗಂಜೋರಿ ನಾಲಾದಿಂದಲೂ ನೀರನ್ನು ಬೆಣ್ಣೆತೊರೆಗೆ ಹರಿಸಲು ಕ್ರಮಕ್ಕೆ ಮುಂದಾಗಿದ್ದಾಗಿ ಹೇಳಿದರು.ಒಟ್ಟು 1,950 ಬೋರ್‌ವೆಲ್, 165 ಕೆಟ್ಟು ನಿಂತಿವೆ:
ನಗರದಲ್ಲಿ ನೀರಿನ ಇನ್ನೂ ಕಾಡುತ್ತಿಲ್ಲ, 1,950 ಬೋರ್‌ವೆಲ್‌ಗಳ ಪೈಕಿ 165 ಕೆಟ್ಟು ಹೋಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಆಯಾ ವಾರ್ಡ್‌ಗಳ ಅಗತ್ಯತೆ ಆಧರಿಸಿ ಟ್ಯಾಂಕರ್ ನೀರು ಪೂರೈಕೆಗೂ ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ ಅಂತರ್ಜಲ ಮಟ್ಟ 250 ಅಡಿಯಿಂದ 300 ಅಡಿವರೆಗೂ ಇದೆ. ಇನ್ನೂ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಸಮಸ್ಯೆ ಶುರುವಾಗಿಲ್ಲವೆಂದೂ ಅಧಿಕಾರಿಗಳು ತಿಳಿಸಿದರು.ಮಾಜಿ ಮೇಯರ್ ಸೈಯ್ಯದ್ ಅಹ್ದಮ್, ವಿಪಕ್ಷ ನಾಯಕ ಅಜ್ಮಲ್ ಗೋಲಾ, ಆಡಳಿತ ಪಕ್ಷ ನಾಯಕ ಕೃಷ್ಣಾ ನಾಯಕ್, ವಿಜಯ ಸೇವಲಾನಿ, ಯಲ್ಲಪ್ಪ ನಾಯಿಕೋಡಿ, ಲತಾ ರಾಠೋಡ, ಸಚೀನ್ ಸೇರಿದಂತೆ ಹಲವರು ಪುರಪಿತೃಗಳು ಸದನದ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು.ಸರಡಗಿ ಬಾಂದಾರು ಹೂಳೆತ್ತುವ ಕೆಲಸವಾಗಲಿ:
ವಿಷಯದ ಪ್ರಸ್ತಾವನೆ ಮಂಡಿಸಿದ್ದ ಸದಸ್ಯ ರಿಯಾಜ್ ಅಹ್ಮಜ್ ಸಿದ್ದಿ ಇವರು ಮಾತನಾಡುತ್ತ ಸರಡಗಿ ಬಾಂದಾರು ಬಲಪಡಿಸುವ ಅಗತ್ಯವಿದೆ. ನಗರದಲ್ಲಿನ ಶೇ.80ರಷ್ಟು ಜನಕ್ಕೇ ಇದೇ ಕುಡಿಯುವ ನೀರಿನ ಮೂಲವಾಗಿರೋದರಿಂದ ಅಲ್ಲಿ ತುಂಬಿರುವ ಹೂಳೆತ್ತಬೇಕು, ಬಾಂದಾರು ಗೇಟ್‌ಗಳನ್ನು ಗಟ್ಟಿಗೊಳಿಸಿ ಹೆಚ್ಚಿನ ನೀರು ಸಂಗ್ರಹಿಸುವಂತೆ ಕ್ರಮಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.ನಗರ ನೀರು ಪೂರೈಕೆಯನ್ನ ಎಲ್ ಆಂಡ್ ಟಿ ಕಂಪನಿ ವಹಿಸಿಕೊಂಡ ನಂತರದಲ್ಲಿ ವಾಲಮನ್ ಸಮಸ್ಯೆ ಕಾಡುತ್ತಿದ್ದು ಇದರಿಂದ ನೀರಿನ ಕೃತಕ ಬರ ಕಾಡುತ್ತಿದೆ. ಮೊದಲು ವಾಲ್‌ಗಳು, ಅವುಗಳ ಆಪರೇಟರ್‌ಗಳ ಪಟ್ಟಿ ಮಾಡಿ ಪಾಲಿಕೆ ಸದಸ್ಯರಿಗೆ ಕೊಡಿ. ನಾವು ರಿಪೇರಿ, ಇತರೆ ಸಮಸ್ಯೆ ಎದುರಾದಾಗ ಇವರಿಗೆ ಸಂಪರ್ಕಿಸುವಂತಾಗಲಿ. ಇವರ ಬೆನ್ನು ಬೀಳೋದೇ ದುಸ್ತರವಾಗಿದೆ ಎಂದರಲ್ಲದೆ ಕಂಪನಿಯ ಕಾರ್ಯಾಚರಣೆ ಹಾಗೂ ನಿರ್ವಹಣೆ ಇಂಜಿನಿಯರ್‌ಗಳು ಬೇಸಿಗೆ ಅವಧಿಯಲ್ಲಿ ಸದಾ ಲಭ್ಯವಿರುವಂತೆ ಅವರಿಗೆ ಹೊಣೆಗಾರಿಕೆ ವಹಿಸಿರೆಂದು ಕಮೀಷ್ನರ್ ಹಾಗೂ ಮೇಯರ್‌ಗೆ ಸದಸ್ಯ ರಿಯಾಜ್ ಸಿದ್ದಿ ಆಗ್ರಹಿಸಿದರು.
ನಗರದಲ್ಲಿ 37 ಮೇಲ್ಮಟ್ಟದ ನೀರು ಸಂಗ್ರಹಾಗಾರ, 17 ಜಿಎಸ್‌ಎಲ್‌ಆರ್‌ಗಳಿದ್ದು ಎಲ್ಲವನ್ನೂ ಸ್ವಚ್ಚಗೊಳಿಸಲಾಗಿದೆ. ಕೋಟನೂರ್ ಡಿ ಮಧ್ಯಂತರ ನೀರೆತ್ತುವ ಕೇಂದ್ರದ ಹೂಳೆತ್ತಲಾಗಿದೆ. ಸರಡಗಿ ಮುಖ್ಯ ಪಂಪಿಂಗ್ ಕೇಂದ್ರದಲ್ಲಿ ನೀರೆತ್ತುವ 2 ಪಂಪ್‌ಗಳಿರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ನೀರಿನ ಸಮಸ್ಯೆ ಕಾಡದಂತೆ ಕೈಗೊಂಡ ಕ್ರಮಗಳನ್ನು ವಿವರಿಸುತ್ತಲೇ ಮುಂದಿನ ತಮ್ಮ ಯೋಜನೆ ಸಭೆಯ ಮುಂದಿಟ್ಟರು.ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಮಾತನಾಡಿ, ಎಲ್ಲಾ ಟ್ಯಾಂಕ್, ಪಂಪಿಂಗ್ ಕೇಂದ್ರಗಳನ್ನು ಹೂಳೆತ್ತಿ ಸ್ವಚ್ಛಮಾಡಲಾಗಿದೆ. ವಾಲ್‌ಮನ್‌ಗಳ ಪಟ್ಟಿ ಸಿದಧಪಡಿಸಿ ನೀಡುತ್ತೇವೆ. ನಾರಾಯಣಪೂರದಿಂದ ಸಾಕಷ್ಟು ಮುಂಚೆಯೇ ನೀರು ತರಿಸಿ ಸಂಗ್ರಹಿಸುತ್ತೇವೆ. ಬೇಸಿಗೆಯಲ್ಲಿ ನಗರ ನೀರಿನ ಸಮಸ್ಯೆ ಕಾಡದಂತೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲರ ಸಹಕಾರ ಬೇಕೆಂದು ಕೋರಿದರು. ಕಲಬುರಗಿ ಮಹಾ ನಗರ ಪಾಲಿಕೆ 2014-15ನೇ ಸಾಲಿನಿಂದ ಇಲ್ಲಿಯವರೆಗಿನ ಲೆಕ್ಕ ಪರಿಶೋಧನೆ ವರದಿ ಕುರಿತು ಚರ್ಚಿಸಬೇಕೆಂಬ ಹಿರಿಯ ಸದಸ್ಯ ಯಲ್ಲಪ್ಪ ನಾಯಿಕೋಡಿ ಇವರ ಪ್ರಸ್ತಾವನೆ ಮೇಲೆ ಚರ್ಚೆ ಶುರುವಾಯಿತಾದರೂ ಮುಖ್ಯ ಲೆಕ್ಕಾಧಿಕಾರಿಗಳು ಸಬೆಗೆ ಗೈರಾಗದ್ದ ಕಾರಣ ಸದರಿ ವಿಷಯ ತುಂಬ ಆಳವಾಗಿದ್ದು ಇದರ ಬಗ್ಗೆ ಪ್ರತ್ಯೇಕ ಸಭೆ ಕರೆಯುವ ನಿರ್ಣಯ ಕೈಗೊಂಡು ವಿಷಯದ ಮೇಲಿನ ಚರ್ಚೆ ಮುಂದೂಡಲಾಯ್ತು.