ಕಂಚಿ ಕಾಮಾಕ್ಷಿ ದೇಗುಲ: ತ್ರಿಪುರಾಸುರ ಸಂಹಾರ ಮಂಟಪ
KannadaprabhaNewsNetwork | Published : Oct 14 2023, 01:00 AM IST
ಕಂಚಿ ಕಾಮಾಕ್ಷಿ ದೇಗುಲ: ತ್ರಿಪುರಾಸುರ ಸಂಹಾರ ಮಂಟಪ
ಸಾರಾಂಶ
ಶ್ರೀ ಕಂಚಿಕಾಮಾಕ್ಷಿ ದೇವಾಲಯದ ವತಿಯಿಂದ 60ನೇ ವರ್ಷದ ಉತ್ಸವ ಆಚರಣೆ ಅಂಗವಾಗಿ ‘ಶಿವನಿಂದ ತ್ರಿಪುರಾಸುರನ ಸಂಹಾರ’ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಮಂಟಪ ಹೊರ ತರಲು ಪ್ರಯತ್ನಿಸುತ್ತಿರುವ ಸಮಿತಿ ಸುಮಾರು ರು.25 ಲಕ್ಷ ವೆಚ್ಚ ಮಾಡುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಕರಗ ದೇವತೆಗಳಲ್ಲಿ ಕಿರಿಯಕ್ಕಳೆಂದು ಕರೆಯಲಾಗುವ ನಗರದ ಗೌಳಿ ಬೀದಿಯ ಶ್ರೀ ಕಂಚಿಕಾಮಾಕ್ಷಿ ದೇವಾಲಯದ ವತಿಯಿಂದ 60ನೇ ವರ್ಷದ ಉತ್ಸವ ಆಚರಣೆ ಅಂಗವಾಗಿ ‘ಶಿವನಿಂದ ತ್ರಿಪುರಾಸುರನ ಸಂಹಾರ’ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಮಂಟಪ ಹೊರ ತರಲು ಪ್ರಯತ್ನಿಸುತ್ತಿರುವ ಸಮಿತಿ ಸುಮಾರು ರು.25 ಲಕ್ಷ ವೆಚ್ಚ ಮಾಡುತ್ತಿದೆ. ದಸರಾ ಮಂಟಪ ಸಮಿತಿ ಅಧ್ಯಕ್ಷರಾಗಿ ಜಿ.ಆರ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಕವನ್ ಕಾವೇರಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಶೋಮನ್ ಕ್ರಿಯೇಷನ್ ಕಥೆಯನ್ನು ನಿರ್ದೇಶಿಸಿದ್ದು, ತಮಿಳುನಾಡಿನ ಸನ್ ಬರ್ನ್ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದೆ. ದಿಂಡಿಗಲ್‌ನ ಡೇವಿಡ್ ಲೈಟಿಂಗ್ ಆರ್ಚ್ ಲೈಟಿಂಗ್ ಬೋರ್ಡ್ ವ್ಯವಸ್ಥೆ ನಿರ್ವಹಿಸಲಿದೆ. ಮಂಟಪದಲ್ಲಿ ಸುಮಾರು 30 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ತಂಡದಲ್ಲಿ ಸುಮಾರು 150 ಮಂದಿ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಚಲನವಲನ ಹಾಗೂ ಪ್ಲಾಟ್ ಫಾರ್ಮ್ ಸೆಟ್ಟಿಂಗ್ ನ್ನು ಬಿಪಿನ್ ಮತ್ತು ತಂಡ ವ್ಯವಸ್ಥೆ ಮಾಡಲಿದೆ. ಕೃಷ್ಣ 14 ಬೆಳಗಾಂ ಸೌಂಡ್ಸ್ ವ್ಯವಸ್ಥೆ, ತಮಿಳುನಾಡುವಿನ ಚೆನ್ನೈನ ಸನ್ ಬರ್ನ್ ಫೈಯರ್ ವರ್ಕ್ ಇರಲಿದೆ. ಮುಂಬೈನಿಂದ ಸ್ಪೇಷಲ್ ಎಫೆಕ್ಟ್ ಕೂಡ ಕಂಡುಬರಲಿದೆ. ಕಲಾಕೃತಿ ರಚನೆಯನ್ನು ಹುದುಗೂರಿನ ಮಾದೇವ ಅಂಡ್ ಸನ್ ಮಾಡಲಿದ್ದಾರೆ. ಪ್ರೈವೆಟ್ ಇವೆಂಟ್ ತಂಡದ ಪ್ರಮೋದ್ ಅವರು ಎಲ್‌ಇಡಿ ವರ್ಕ್ ಮಾಡಲಿದ್ದಾರೆ. ವಿಶೇಷವಾಗಿ ಬೆಂಗಳೂರಿನ ಮನೋಜ್ ತಂಡದಿಂದ ಲೇಸರ್ ಶೋ ಇರಲಿದೆ. ದೇವಾಲಯದ ಇತಿಹಾಸ: ಸೌಮ್ಯ ಸ್ವರೂಪಿಯಾದ ಕಂಚಿ ಕಾಮಾಕ್ಷಿಯಮ್ಮ ದೇವಾಲಯವು ಮಡಿಕೇರಿಯ ಗೌಳಿ ಬೀದಿಯಲ್ಲಿದೆ. ಉಗ್ರ ಸ್ವರೂಪಿಯಾದ ಮುತ್ತು ಮಾರಿಯಮ್ಮ ದೇವಿಯನ್ನು ಈ ದೇವಸ್ಥಾನದಲ್ಲಿ ಪ್ರತ್ಯೇಕವಾಗಿ ಗರ್ಭಗುಡಿ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ನಗರದ ನಾಲ್ಕು ಶಕ್ತಿ ದೇವಿಗಳಲ್ಲಿ ಒಂದಾಗಿರುವ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಿಯು ಪ್ರಜೆಗಳ ಕಷ್ಟ-ಕಾರ್ಪಣ್ಯಗಳ ನಿವಾರಕಿಯೆನಿಸಿಕೊಂಡಿದ್ದಾಳೆ. ಕೈಯಲ್ಲಿ ಗಿಣಿ ಹಿಡಿದುಕೊಂಡಿರುವುದು ಈ ಶಾಂತ ಸ್ವರೂಪಿಣಿಯ ವೈಶಿಷ್ಟತೆ. ಈ ಪುರಾತನ ದೇಗುಲವು ಕಾಲಾಂತರದಿಂದ ಹಲವಾರು ಮಾರ್ಪಾಡುಗಳನ್ನು ಹೊಂದುತ್ತಾ ಬಂದು ಪ್ರಸ್ತುತ ನಗರದ ಬೃಹತ್ ದೇವಾಲಯಗಳಲ್ಲಿ ಒಂದೆನಿಸಿದೆ. ಗರ್ಭಗುಡಿಯಲ್ಲಿ ಪುರಾತನ ಮೂಲ ವಿಗ್ರಹವಿದೆ. ನವೀಕರಣಗೊಂಡಿರುವ ಬೃಹತ್ ದೇಗುಲಕ್ಕೆ ವಿಶಿಷ್ಟವಾದ ರಾಜಗೋಪುರ ನಿರ್ಮಾಣವಾಗಿದೆ. ಈ ರಾಜಗೋಪುರ ಹೊಯ್ಸಳ ಶೈಲಿಯಲ್ಲಿದೆ. ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಅಯ್ಯಪ್ಪ ಸ್ವಾಮಿ ಪೂಜೆಗಳು ನಡೆಯುತ್ತವೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುವದರ ಜೊತೆಗೆ ಏಪ್ರಿಲ್ ತಿಂಗಳಲ್ಲಿ ಮಾರಿಯಮ್ಮ ಉತ್ಸವ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇಲ್ಲಿ ವ್ಯತ್ಯಾಸವೆಂದರೆ ಮಾರಿಯಮ್ಮ ಕರಗವನ್ನು ಹೂವಿನ ಬದಲು ಬೇವಿನ ಎಲೆಯಿಂದ ಅಲಂಕರಿಸಲಾಗುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ(ಯಾದವ)ಜನಾಂಗದವರು ನೆರವೇರಿಸುತ್ತಾರೆ. ಕರಗ ಆರಾಧನೆ: ಹಿಂದಿನ ಕಾಲದಲ್ಲಿ ಭೀಕರ ಸಾಂಕ್ರಮಿಕ ರೋಗಗಳಿಂದ ಊರಿನಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ರೋಗವನ್ನು ಹೋಗಲಾಡಿಸಲು ಊರಿನ ಹಿರಿಯರು ಸೇರಿ ನಾಡಿನ ಸುಭಿಕ್ಷೆಗಾಗಿ ಶಕ್ತಿ ದೇವತೆಗಳ ಪ್ರಾರ್ಥನೆಯೊಂದಿಗೆ ಕರಗ ಆರಾಧನೆ ಆರಂಭವಾಯಿತು. ಅದರಲ್ಲೂ ವಿಶೇಷವಾಗಿ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಆಗಿನ ಕಾಲದಿಂದಲೇ ಸಾಂಕ್ರಮಿಕ ರೋಗಗಳನ್ನು ಊರಿನಿಂದ ಹೊರಗಟ್ಟಲು ಬೇವಿನ ಸೊಪ್ಪಿನ ಶಕ್ತಿ ಕರಗೋತ್ಸವ ಆರಂಭಿಸಲಾಯಿತು ಎಂಬ ಪ್ರತೀತಿ ಇದೆ. ಈ ಬಾರಿಯ ಕರಗವನ್ನು ಮೊದಲ ಬಾರಿಗೆ ಪಿ.ಯು. ಕಾರ್ತಿಕ್ ಹೊರಲಿದ್ದಾರೆ. ಇವರು ಈ ಹಿಂದೆ ಕರಗ ಹೊರುತ್ತಿದ್ದ ಉಮೇಶ್ ಅವರ ಪುತ್ರ. ಈ ಬಾರಿ ಸುಮಾರು ರು.25 ಲಕ್ಷ ವೆಚ್ಚದಲ್ಲಿ ಶಿವನಿಂದ ತ್ರಿಪುರಾಸುರನ ಸಂಹಾರ ಎಂಬ ಕಥಾಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಶಮಂಟಪಗಳ ಶೋಭಾಯಾತ್ರೆಯಲ್ಲಿ ನಮ್ಮ ಮಂಟಪ ಉತ್ತಮ ಪೈಪೋಟಿ ನೀಡಲು ಸಜ್ಜಾಗಿದೆ. ಸರ್ಕಾರ ಈ ಸಲ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಬೇಕು. -ಜಿ.ಆರ್. ರಾಘವೇಂದ್ರ, ಅಧ್ಯಕ್ಷರು ಶ್ರೀ ಕಂಚಿ ಕಾಮಾಕ್ಷಿ ದೇವಾಲಯ ದಸರಾ ಸಮಿತಿ.