ಸಾರಾಂಶ
ದರ್ಶನ್ ಕೊಲೆ ಆರೋಪ ತಿಳಿದು ದಿಗ್ಭ್ರಮೆ
ಕನ್ನಡಪ್ರಭ ವಾರ್ತೆ ಹಾಸನಯಾರೇ ಪ್ರಭಾವಿ ವ್ಯಕ್ತಿ ಆಗಿರಲಿ ಅಪರಾಧ ಮಾಡಿದಾಗ ಖಂಡಿಸಲೇಬೇಕು. ಸಿನಿಮಾ ರೀತಿಯಲ್ಲೆ ಕೊಲೆ ಮಾಡಿರುವುದನ್ನು ನೋಡಿ ದಿಗ್ಬ್ರಮೆಯಾಗಿದೆ. ನಾಯಕ ನಟ ದರ್ಶನ್ ಅವರನ್ನು ಕನ್ನಡ ಚಲನಚಿತ್ರರಂಗದಿಂದ ಹೊರದಬ್ಬಬೇಕು. ಇವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕೆಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಸಮಾಜದಲ್ಲಿ ಯಾರೇ ಆಗಲಿ ಘೋರ ಅಪರಾಧಗಳನ್ನು ನಾವೆಲ್ಲರೂ ಖಂಡಿಸಲೇಬೇಕು. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಸಿನಿಮಾ ಶೈಲಿಯಲ್ಲಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದಾರೆ. ಆ ನಟ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಯಬೇಕಿತ್ತು. ಮೇರುನಟ ಎಂದು ಹೆಸರು ಪಡೆದಿದ್ದ ದರ್ಶನ್ ಕೊಲೆ ಮಾಡಿರುವುದು ಕೇಳಿ ನನಗೆ ದಿಗ್ಭ್ರಮೆಯಾಗಿದೆ. ಇಂತಹವರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಣ, ಹೆಸರುಗಳಿಸಿ ಇಂತಹ ಕೃತ್ಯ ಮಾಡಿರುವುದು ದುರದೃಷ್ಟಕರ. ಉರಿದವರು ಬೂದಿಯಾಗಲೇಬೇಕು. ಉರಿದವರು ಒಂದಲ್ಲ ಒಂದು ದಿನ ನಾಶ ಆಗುತ್ತಾರೆ ಎನ್ನುವುದಕ್ಕೆ ನಟ ದರ್ಶನ್ ಉದಾಹರಣೆ. ಹಣದಿಂದ ಇಂತಹ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಇದು ಕಾನೂನಿನ ದೌರ್ಬಲ್ಯವೋ ಗೊತ್ತಿಲ್ಲ. ಮೇರುನಟ, ಯುವ ರಾಜಕಾರಣಿ ಕೊಲೆ, ಅತ್ಯಾಚಾರದಲ್ಲಿ ಭಾಗಿಯಾಗಿರುವುದು ಕನ್ನಡ ನಾಡಿಗೆ ಶೋಭೆ ತರುವುದಿಲ್ಲ. ಸೆಲೆಬ್ರಿಟಿಗಳು ಪ್ರಖ್ಯಾತರಾಗಬೇಕು. ಆದರೆ ಕುಖ್ಯಾತರಾಗುತ್ತಿದ್ದಾರೆ. ಈ ಪ್ರಕರಣದಿಂದ ನಾಡಿನ ಸಂಸ್ಕೃತಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇದು ರಾಜ್ಯಕ್ಕೆ ತಂದಿರುವ ದೊಡ್ಡ ಕಳಂಕ’ ಎಂದು ಬೇಸರ ವ್ಯಕ್ತಪಡಿಸಿದರು.‘ಚಲನಚಿತ್ರ ವಾಣಿಜ್ಯ ಮಂಡಳಿ, ಇತರೆ ಸಂಘಗಳು ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಾಯಕ ನಟ ದರ್ಶನ್ ಹಿಂದೆ ಇಂತಹ ಹತ್ತಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆಗ ಅವರ ಮೇಲೆ ಕಠಿಣ ಕ್ರಮ ಆಗಿದ್ದರೆ ಇಂತಹ ಘಟನೆಗಳು ಮತ್ತೆ ನಡೆಯುತ್ತಿರಲಿಲ್ಲ. ಕಾನೂನಿನ ಕುಣಿಕೆ ಬಿಗಿ ಇಲ್ಲ. ಹಿಂದಿನ ಮೇರು ನಟರು ಮದ್ಯ ಸೇವಿಸುವುದು, ಸಿಗರೇಟ್ ಸೇದುವ ದೃಶ್ಯಗಳಲ್ಲಿ ನಟಿಸುವುದಿಲ್ಲ, ಆ ದೃಶ್ಯ ತೆಗೆಯಿರಿ ಎನ್ನುತ್ತಿದ್ದರು. ಅವರೆಲ್ಲಿ ಇವರೆಲ್ಲಿ, ಇದನ್ನು ಉಗ್ರ ಪದಗಳಲ್ಲಿ ಖಂಡಿಸುತ್ತೇನೆ’ ಎಂದು ಸಿಡಿಮಿಡಿಗೊಂಡರು.
ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು. ಹಿಂದೆ ಹಲವು ದೇಶದ್ರೋಹ, ಖೋಟಾ ನೋಟ ಮುದ್ರಣದಂತಹ ಪ್ರಕರಣಗಳು ಖುಲಾಸೆಯಾಗಿವೆ. ಸರ್ಕಾರ ಮತ್ತು ಇಲಾಖೆಗಳು ಕಾನೂನು ಕ್ರಮದ ಜತೆಗೆ ಎಷ್ಟು ಜನಕ್ಕೆ ಶಿಕ್ಷೆಯಾಯಿತು ಅನ್ನುವುದನ್ನು ಗಮನಿಸಬೇಕು. ಹಣದ ಮುಂದೆ ಕಾನೂನು ಮೂಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.‘ದುಡ್ಡಿನಿಂದ ಶಿಕ್ಷೆ ತಪ್ಪಿಸುವ ಸಂದರ್ಭಗಳೇ ಹೆಚ್ಚಿಗಿದ್ದು, ಇಂತಹ ಕೆಟ್ಟ ಹುಳುಗಳ ನಿಯಂತ್ರಣ ಆಗಬೇಕು. ಆದರೆ ಅವರೇ ಸರ್ಕಾರವನ್ನು ನಿಯಂತ್ರಣ ಮಾಡುತ್ತಿದ್ದಾರೆ. ಹಿಂದೆ ಇವರ ಮೇಲೆ ಬಂದಿದ್ದ ಪ್ರಕರಣಗಳಲ್ಲಿ ಕಠಿಣ ಕ್ರಮ ಆಗಲಿಲ್ಲ. ಹಾಗಾಗಿ ಇಂದು ಕೊಲೆಯ ಹಂತಕ್ಕೆ ಬಂದಿದೆ. ಈಗಲಾದರೂ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು. ಇಂತಹ ನಟರು ನಮ್ಮ ರೋಲ್ ಮಾಡೆಲ್‌ಗಳು. ಇವರೆಲ್ಲ ಕುಖ್ಯಾತರು’ ಎಂದು ಕುಟುಕಿದರು.