ಕನ್ನಡ ಸಾಹಿತ್ಯ ಮೌರ್ಯ ಸಾಮ್ರಾಜ್ಯಕ್ಕಿಂತ ಪ್ರಾಚೀನ

| Published : Oct 17 2024, 12:47 AM IST

ಕನ್ನಡ ಸಾಹಿತ್ಯ ಮೌರ್ಯ ಸಾಮ್ರಾಜ್ಯಕ್ಕಿಂತ ಪ್ರಾಚೀನ
Share this Article
  • FB
  • TW
  • Linkdin
  • Email

ಸಾರಾಂಶ

ಅಸಹಾಯಕತೆ ಮತ್ತು ನೋವು ಹೇಳಿಕೊಳ್ಳುವುದು ಶರಣಾಗತ ಸಾಹಿತ್ಯ, ಅಸ್ಮಿತೆ ಹುಡುಕಾಟಕ್ಕಾಗಿ ಬರೆದ ಸಾಹಿತ್ಯವನ್ನು ಸ್ವಾಭಿಮಾನದ ಸಾಹಿತ್ಯ ಎನ್ನಲಾಗುತ್ತದೆ

ಕನ್ನಡಪ್ರಭ ವಾರ್ತೆ ಜಮಖಂಡಿ

ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯ ಮೂರು ಮಾನದಂಡಗಳನ್ನು ಇಟ್ಟುಕೊಂಡು ಕನ್ನಡ ಸಾಹಿತ್ಯದ ಅವಲೋಕನ ಮಾಡಬೇಕು. ಮೌರ್ಯರ ಸಾಮ್ರಾಜ್ಯಕ್ಕಿಂತ ಹಿಂದೆಯೂ ಮತ್ತು ಸಿಂಧೂ ನಾಗರಿಕತೆ ನಂತರವೂ ಕನ್ನಡ ಸಾಹಿತ್ಯ ಇತ್ತು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ವೈ.ವೈ. ಕೊಕ್ಕನವರ ಹೇಳಿದರು.

ಇಲ್ಲಿನ ಬಸವ ಭವನ ಸಮುದಾಯ ಭವನದಲ್ಲಿ ನಡೆದ ಜಮಖಂಡಿ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದ ಅವಲೋಕನ ಕುರಿತು ಮಾತನಾಡಿದರು. ಚಿಂತಕ ಮಹಾಲಿಂಗಪ್ಪ ಆಲಬಾಳ ದಲಿತ ಸಾಹಿತ್ಯದ ನಿಲುವುಗಳು ಕುರಿತು ಮಾತನಾಡಿ, ಶರಣಾಗತ ಸಾಹಿತ್ಯ, ಸ್ವಾಭಿಮಾನದ ಸಾಹಿತ್ಯ ಹಾಗೂ ಬೇರೆ ಸಮುದಾಯದವರು ದಲಿತರ ಪರವಾಗಿ ಬರೆದ ಸಾಹಿತ್ಯ ಎಂದು ದಲಿತ ಸಾಹಿತ್ಯದಲ್ಲಿ ಮೂರು ಪ್ರಕಾರ ಗುರುತಿಸಬಹುದು ಎಂದರು.

ಅಸಹಾಯಕತೆ ಮತ್ತು ನೋವು ಹೇಳಿಕೊಳ್ಳುವುದು ಶರಣಾಗತ ಸಾಹಿತ್ಯ, ಅಸ್ಮಿತೆ ಹುಡುಕಾಟಕ್ಕಾಗಿ ಬರೆದ ಸಾಹಿತ್ಯವನ್ನು ಸ್ವಾಭಿಮಾನದ ಸಾಹಿತ್ಯ ಎನ್ನಲಾಗುತ್ತದೆ. ಬೇರೆ ಸಮುದಾಯದವರು ದಲಿತರ ಪರವಾಗಿ ಬರೆದ ಸಾಹಿತ್ಯದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತದೆ ಎಂದು ವಿಶ್ಲೇಷಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ಸುನಂದಾ ಶಿರೂರ ಸ್ತ್ರೀ ಸಂವೇದನೆಗಳು ಕುರಿತು ಮಾತನಾಡಿ, ಕುಟುಂಬದಲ್ಲಿ, ಸಾಹಿತ್ಯದಲ್ಲಿ ಹಾಗೂ ಸಮಾಜದಲ್ಲಿ ಸ್ತ್ರೀ ಸಂವೇದನೆ ಗುರುತಿಸಬಹುದು ಎಂದರು.

ಹುಟ್ಟಿದ ಮನೆ, ಕೊಟ್ಟ ಮನೆ ಬೇರೆಯಾಗಿದ್ದರೂ ಕುಟುಂಬದಲ್ಲಿ ಮೆಟ್ಟಿ ನಿಲ್ಲುವ ಸಾಮರ್ಥ್ಯ ಮಹಿಳೆಯರಿಗಿರುವ ಮೊದಲ ಸಂವೇದನೆ. ಜನಪದ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳನ್ನು ಕನಸು, ಆಲೋಚನೆಗಳನ್ನು ಹಾಡಿನ ಮೂಲಕ ಹೊರಹಾಕಿದ್ದಾರೆ. ನೆಲ ನೋಡಿಕೊಂಡು ನಡೆಯಬೇಕೆನ್ನುವ ಅರ್ಥದಲ್ಲಿ ಹೆಣ್ಣಿನ ಬುದ್ಧಿ ಮೊಳಕಾಲ ಕೆಳಗೆ ಎಂಬುದು ಸಮಾಜದಲ್ಲಿ ಮಹಿಳೆಯರ ಬಗೆಗಿನ ಅನಿಸಿಕೆಯಾಗಿದೆ ಎಂದರು.

ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಬಿ.ಪಿ. ನ್ಯಾಮಗೌಡ ಮಾತನಾಡಿ, ಶಬ್ಧ ಮತ್ತು ಅರ್ಥ ಇವು ಸಾಹಿತ್ಯದ ಕಚ್ಚಾ ವಸ್ತುಗಳು. ಶಬ್ಧ ಸಾಹಿತ್ಯದ ಶರೀರ. ಅರ್ಥ ಸಾಹಿತ್ಯದ ಆತ್ಮ. ಶಬ್ಧಗಳಿಗೆ ಮಿತಿಯಿದೆ. ಆದರೆ, ಅರ್ಥಕ್ಕೆ ಮಿತಿಯಿಲ್ಲ. ಶಬ್ಧ ಮತ್ತು ಅರ್ಥಗಳ ಅರ್ಥಮಾಡಿಕೊಂಡ ಬಳಿಕ ಸಾಹಿತ್ಯ ರಚನೆಗೆ ಇಳಿಯಬೇಕು ಎಂದರು.

ದಸಂಸ ರಾಜ್ಯ ಘಟಕದ ಸಂಚಾಲಕ ಯಮನಪ್ಪ ಗುಣದಾಳ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಸಹಜಾನಂದ ಅವಧೂತರು ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ರಬಕವಿ-ಬನಹಟ್ಟಿ ತಾಲೂಕು ಅಧ್ಯಕ್ಷ ಮ.ಕೃ. ಮೇಗಾಡಿ, ಬೀಳಗಿ ಅಧ್ಯಕ್ಷ ಗುರುರಾಜ ಲೂತಿ, ಉಪನ್ಯಾಸಕಿ ವಿಮಲಾ ಬೊಮ್ಮನಹಳ್ಳಿ ಇದ್ದರು. ಕಸಾಪ ಜಮಖಂಡಿ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿ, ಸಂಗಮೇಶ ಉಟಗಿ ನಿರೂಪಿಸಿ, ಸಂಗಮೇಶ ಕುಬಕಡ್ಡಿ ವಂದಿಸಿದರು.

ಕಾವ್ಯ ಜೀವದ ದ್ರವ್ಯ: ಡಾ.ಶಾರದಾ

ಜಮಖಂಡಿ:

ಕವಿತೆ ಮನಸ್ಸಿನ ಒಳನೋಟ ತೆರೆದಿಡುತ್ತದೆ. ಕಾವ್ಯ ಎಂದರೆ ಹರಿಯುವ ಝರಿ. ಕಾವ್ಯ ಜೀವದ ದ್ರವ್ಯ. ಕಾವ್ಯ ಬದುಕಿಗೆ ಸತ್ವ ನೀಡಬೇಕು ಎಂದು ಸಾಹಿತಿ, ಮುಖ್ಯ ಶಿಕ್ಷಕಿ ಡಾ.ಶಾರದಾ ಮುಳ್ಳೂರ ಹೇಳಿದರು.

ಸಾಹಿತ್ಯ ಸಮ್ಮೇಳನದ 2ನೇ ಗೋಷ್ಠಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆ ಎಂದರೆ ಕಾಮನಬಿಲ್ಲು. ಕಾವ್ಯ ಸಂಪರ್ಕ ಸೇತುವೆ. ಕಾವ್ಯ ಹೋರಾಟದ ಹಾದಿ. ಕಾವ್ಯ ಮಾನಸಿಕ ಸ್ಥಿತಿ ಉತ್ಕೃಷ್ಟ ಉನ್ನತಿ ಎಂದರು. ಸಾಹಿತಿ, ನಿವೃತ್ತ ಶಿಕ್ಷಕ ಗುರುನಾಥ ಸುತಾರ ಕವಿತೆ ಎಂದರೇನು? ಕವಿತೆ ಹುಟ್ಟುವ ಬಗೆ ಕುರಿತು ಆಶಯ ಭಾಷಣ ಮಾಡಿದರು. ಸಮ್ಮೇಳನಾಧ್ಯಕ್ಷ ಪೂಜ್ಯಶ್ರೀ ಸಹಜಾನಂದ ಅವಧೂತರು ಸಾನ್ನಿಧ್ಯ ವಹಿಸಿದ್ದರು.

ಬಾಹುಬಲಿ ಬಿರಾದಾರಪಾಟೀಲ, ಗಣಪತಿ ಗಲಗಲಿ, ಮುರಳಿ ಮೀಸಿ, ಚಂದ್ರಕಲಾ ಜನಗೌಡ, ಬಸಮ್ಮ ಬಾಗೋಜಿ, ಭಾಗ್ಯಶ್ರೀ ಕೋಟಿ, ಪ್ರವೀಣ ಕುಲಕರ್ಣಿ, ಗುರುಲಿಂಗಪ್ಪ ಹಾದಿಮನಿ, ಸರಿತಾ ಶಿರಗುಪ್ಪಿ, ಹನಮಂತ ಬಟಕುರ್ಕಿ, ಅನಿತಾ ಪಾಟೀಲ, ಶ್ರೀಶೈಲ ಕಾಂಬಳೆ, ಪದ್ಮಶ್ರೀ ತಳಕೇರಿ, ಚಂದ್ರಕಾಂತ ಜಡಿಮಠ, ಭಾರತಿ ಮದಿನವರ, ರವಿ ರತ್ನಾಕರ, ಸಂಗಪ್ಪ ಗುಗ್ಗರಿ, ಮುತ್ತು ಕಾಂಬಳೆ, ವೈಷ್ಣವಿ ದೇವನಾಳ ಸ್ವರಚಿತ ಕವನಗಳನ್ನು ವಾಚನ ಮಾಡಿದರು.

ನರಸಿಂಹ ಕಲ್ಲೋಳ್ಳಿ ಸ್ವಾಗತಿಸಿ, ಡಾ.ಮೃತ್ಯುಂಜಯ ಗವಿಮಠ ನಿರೂಪಿಸಿ, ಪಿ.ಆರ್.ರಾಮತಾಳ ವಂದಿಸಿದರು.