ಕನ್ನಡವನ್ನು ಡಿಜಿಟಲ್ ಫ್ಲಾಟ್‌ಫಾರಂಗೆ ಕೊಂಡೊಯ್ಯಬೇಕು: ಪ್ರೊ.ಕೃಷ್ಣೇಗೌಡ

| Published : Oct 30 2024, 12:43 AM IST

ಸಾರಾಂಶ

ಸಮಾಜದಲ್ಲಿ ನಡೆಯುವ ಬೆಳವಣಿಗೆಗಳು ಎಲ್ಲವೂ ನನ್ನಂತೆಯೇ ಇರಬೇಕು, ನನ್ನಿಷ್ಟದಂತೆಯೇ ನಡೆಯಬೇಕು ಎನ್ನಲಾಗುವುದಿಲ್ಲ. ಒಂದಲ್ಲಾ ಒಂದು ರೀತಿಯ ಅಸಮಾಧಾನಗಳು ವ್ಯಕ್ತವಾಗುತ್ತಿರುತ್ತವೆ. ಆ ಅಸಮಾಧಾನಗಳನ್ನು ಪ್ರಬುದ್ಧತೆಯಿಂದ ವ್ಯಕ್ತಪಡಿಸಬೇಕು ಎಂದು ಪ್ರೊ.ಕೃಷ್ಣೇಗೌಡರು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಭಾಷೆಯನ್ನು ಡಿಜಿಟಲ್ ಫ್ಲಾಟ್ ಫಾರಂಗೆ ಕೊಂಡೊಯ್ಯುವುದು ಭಾಷೆಯ ಬೆಳವಣಿಗೆ ದೃಷ್ಟಿಯಿಂದ ತುರ್ತು ಅವಶ್ಯವಾಗಿದೆ ಎಂದು ಹರಟೆಗಾರ ಪ್ರೊ.ಕೃಷ್ಣೇಗೌಡ ಹೇಳಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ವಾರದ ಅತಿಥಿ ಸಾಹಿತಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡದ ಕತೆ, ಕಾದಂಬರಿಗಳು, ಕಥಾ ಸಂಕಲನಗಳು ಇ-ಲೈಬ್ರರಿಯಲ್ಲಿ ಓದುಗರಿಗೆ ಸಿಗುವಂತಾಗಬೇಕು. ಡಿಜಿಟಲ್ ಮಾಧ್ಯಮದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ಕನ್ನಡ ಚಳವಳಿ, ಹೋರಾಟಗಳು, ಮಹತ್ವದ ಸಂಗತಿಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಬೇಕು. ಆಗ ಕನ್ನಡ ಎಲ್ಲರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.

ಕನ್ನಡ ಭಾಷೆಯನ್ನು ಡಿಜಿಟಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚು ಹೆಚ್ಚು ಬಳಸಿದಂತೆಲ್ಲಾ ಬಳಕೆದಾರರ ಸಂಖ್ಯೆ ಹೆಚ್ಚುತ್ತದೆ. ಅದಕ್ಕೆ ಪೂರಕವಾಗಿ ತಂತ್ರಾಂಶವೂ ಅಭಿವೃದ್ಧಿಗೊಳ್ಳುತ್ತದೆ. ಬಳಕೆದಾರರ ಸಂಖ್ಯೆಗೆ ಅನುಗುಣವಾಗಿ ಕನ್ನಡ ಹೊಸ ಹೊಸ ಅವಕಾಶಗಳನ್ನು ಜಾಗತಿಕ ಮಟ್ಟದಲ್ಲಿ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದರು.

ಸಾಹಿತಿಗಳೇ ಭೂಷಣ:

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳೇ ಭೂಷಣಪ್ರಾಯರಾಗಿದ್ದಾರೆ. ಸಮ್ಮೇಳನ ಆರಂಭ ಕಾಲದಿಂದ ಇಲ್ಲಿಯವರೆಗೆ ಸಾಹಿತಿಗಳೇ ಅಧ್ಯಕ್ಷರಾಗುತ್ತಾ ಬಂದಿದ್ದಾರೆ. ಸಾಹಿತ್ಯೇತರರು ಅಧ್ಯಕ್ಷರಾಗಬೇಕೆಂಬುದು ಅಪ್ರಸ್ತುತ. ಈ ಚರ್ಚೆಯನ್ನು ಗೊತ್ತಿಲ್ಲದೆ ಪರಿಷತ್ ಅಧ್ಯಕ್ಷರು ಹುಟ್ಟುಹಾಕಿದ್ದರೆ ಅಕ್ಷಮ್ಯ, ಗೊತ್ತಿದ್ದೂ ಹುಟ್ಟುಹಾಕಿದ್ದರೆ ಅದಕ್ಕೆ ಕ್ಷಮೆಯೇ ಇಲ್ಲ ಎಂದು ಹೇಳಿದರು.

ಸಾಹಿತ್ಯ ಆರಂಭವಾದ ಕಾಲದಲ್ಲಿ ಅದು ಯಾವುದನ್ನೂ ಒಳಗೊಂಡಿರಲಿಲ್ಲ. ಮೋಕ್ಷ, ಪುಣ್ಯಕ್ಕಾಗಿ ಸಾಹಿತ್ಯ ರಚನೆ ಮಾಡುತ್ತಿದ್ದರು. ಆನಂತರದಲ್ಲಿ ಖುಷಿಗಾಗಿ ಸಾಹಿತ್ಯ ರಚನೆ ಶುರುವಾಯಿತು. ಬಳಿಕ ಸಾಹಿತ್ಯ ಎನ್ನುವುದು ಸಮಾಜಮುಖಿಯಾಯಿತು. ನವ್ಯ, ನವೋದಯದ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪ್ರಗತಿಪರ ಸಾಹಿತ್ಯ, ಸಮಾಜದಲ್ಲಿರುವ ಶೋಷಣೆ ವಿರುದ್ಧ ದಲಿತ ಬಂಡಾಯ ಸಾಹಿತ್ಯ ಆರಂಭಗೊಂಡಿತು ಎಂದು ವಿವರಿಸಿದರು.

ಒಡೆದುಹೋಗಿರುವ ಸಾಹಿತ್ಯ ಜಗತ್ತು:

ಸಮಾಜದಲ್ಲಿ ನಡೆಯುವಂತಹ ವಿದ್ಯಮಾನಗಳಿಗೆ ಸಾಹಿತಿಗಳು ಪ್ರತಿಕ್ರಿಯಿಸಬೇಕು. ಆದರೆ, ಇಂದಿನ ಸಾಹಿತಿಗಳಿಗೆ ಆ ತಾಕತ್ತು ಇಲ್ಲ. ಸಾಹಿತ್ಯ ಜಗತ್ತು ಎಡ-ಬಲ ಎಂದು ಒಡೆದುಹೋಗಿದೆ.. ಅಧಿಕಾರ- ಸ್ಥಾನಮಾನಗಳನ್ನು ಗಳಿಸುವತ್ತ ಓಡಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಮುಖ ನೋಡದ, ಸಾಮಾನ್ಯರಂತೆ ಜಗಳವಾಡುವ ಸ್ಥಿತಿಗೆ ಬಂದು ನಿಂತಿದ್ದಾರೆ. ಸಾಹಿತಿಗಳಾದವರು ತೋಳಂತರದಲ್ಲಿ ಅಧಿಕಾರವನ್ನು ಇಡಬೇಕಿದ್ದರೂ ಎಲ್ಲರೂ ಅದನ್ನೇ ಆಶ್ರಯಿಸುತ್ತಿದ್ದಾರೆ. ಈ ಕಾರಣದಿಂದ ಸಾಹಿತ್ಯೇತರರು ಅಧ್ಯಕ್ಷರಾಗಬೇಕೆಂಬ ಚರ್ಚೆ ಹುಟ್ಟುಕೊಂಡಿರಬಹುದು ಎಂದು ವಿಶ್ಲೇಷಿಸಿದರು.

ಸಾಹಿತ್ಯಕ್ಕೆ ಘನತೆ ಇದೆ:

ಸಾಹಿತಿಗಳಿಗೆ ಘನತೆ ಇಲ್ಲದೇ ಹೋದರೂ ಸಾಹಿತ್ಯಕ್ಕೆ ಘನತೆ ಇದೆ. ಸಾಹಿತ್ಯ ಎನ್ನುವುದು ಸತ್ಯಾನ್ವೇಷಣೆಯಾಗಿದೆ. ಆಯಾಯ ಕಾಲಘಟ್ಟದಲ್ಲಿ ಸಮಾಜದಲ್ಲಿ ನಡೆಯುವ ಬೆಳವಣಿಗೆಗಳನ್ನು, ಸಂಗತಿಗಳನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ಕೆಲಸ ನಮ್ಮಲ್ಲಿ ಆಗಲಿಲ್ಲ. ಇದು ಭಾಷಾ ಬೆಳವಣಿಗೆ ದೃಷ್ಟಿಯಿಂದ ದೊಡ್ಡ ಹಿನ್ನಡೆ ಎಂದು ಹೇಳಿದರು.

ಪಕ್ಕದ ದೇಶಗಳೇ ಇಂಗ್ಲೀಷ್‌ನ್ನು ಅಪ್ಪಲಿಲ್ಲ:

ಫ್ರಾನ್ಸ್ ಮತ್ತು ಜರ್ಮನ್ ದೇಶಗಳು ಬ್ರಿಟನ್‌ಗೆ ಹತ್ತಿರದಲ್ಲಿದ್ದರೂ ಅವು ಇಂಗ್ಲೀಷ್‌ನ್ನು ಅಪ್ಪಿಕೊಳ್ಳಲಿಲ್ಲ. ವರ್ಷಕ್ಕೊಮ್ಮೆ ನಡೆಯುವ ಸಮಾವೇಶದಲ್ಲಿ ವಿಶ್ವ ಮತ್ತು ತಮ್ಮ ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಫ್ರಾನ್ಸ್ ಮತ್ತು ಜರ್ಮನ್ ಭಾಷೆಗೆ ಭಾಷಾಂತರ ಮಾಡುವುದರಿಂದ ಇಂಗ್ಲೀಷ್ ಭಾಷೆಯ ಪ್ರಭಾವ ಅಲ್ಲಿ ಬೀರುವುದಕ್ಕೆ ಸಾಧ್ಯವಾಗೇ ಇಲ್ಲ. ಅದೇ ರೀತಿ ಕನ್ನಡದಲ್ಲೂ ನಡೆದರೆ ಇಂಗ್ಲೀಷ್ ವ್ಯಾಮೋಹವನ್ನು ದೂರ ಮಾಡಬಹುದು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಆನಂದ ಇದ್ದರು.

ಕನ್ನಡ ಶಾಲೆಗಳನ್ನು ಉಳಿಸುವ ಕಾಳಜಿ ಸರ್ಕಾರಗಳಿಗಿಲ್ಲ...!:

ಕನ್ನಡ ಶಾಲೆಗಳನ್ನು ಉಳಿಸಬೇಕೆಂಬ ಕಾಳಜಿಯಾಗಲೀ, ಬದ್ಧತೆಯಾಗಲೀ ಸರ್ಕಾರಗಳಿಗೇ ಇಲ್ಲ. ಅದಕ್ಕಾಗಿಯೇ ಸರ್ಕಾರಗಳು ಇಂಗ್ಲೀಷ್ ಶಾಲೆಯನ್ನು ತೆರೆಯುತ್ತಿವೆ ಎಂದು ಪ್ರೊ.ಕೃಷ್ಣೇಗೌಡರು ಕುಹಕವಾಡಿದರು. ಕನ್ನಡ ಶಾಲೆಗಳಿಗೆ ಘನತೆ- ಗೌರವಗಳನ್ನು ತಂದುಕೊಡಬೇಕಾದ ಸರ್ಕಾರಗಳೇ ಕನ್ನಡ ಶಾಲೆಗಳಿಗೆ ಮಾನ್ಯತೆ ಇಲ್ಲವೆಂದು ಮುಚ್ಚುವುದಕ್ಕೆ ಮುಂದಾದರೆ ಕನ್ನಡ ಶಾಲೆಗಳು ಉಳಿಯುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರಗಳು ಸಾಹಿತ್ಯ ಸಮ್ಮೇಳನ, ದಸರಾ ಉತ್ಸವ ಸೇರಿದಂತೆ ಎಲ್ಲವನ್ನೂ ತನ್ನ ಮುಖವಾಣಿಯನ್ನಾಗಿ ಮಾಡಿಕೊಳ್ಳುತ್ತಿದೆ. ರಾಜಕಾರಣಿಗಳು ಸಾಹಿತ್ಯ, ನಾಡಹಬ್ಬ, ಸಾಂಸ್ಕೃತಿಕ ಉತ್ಸವಗಳಿಂದ ಹೊರಗಿರಬೇಕು ಎಂಬ ಮನೋಭಾವವೇ ಇಲ್ಲ ಎಂದು ಹೇಳಿದರು.

ನಿರ್ಣಯಗಳು ಜಾರಿಯಾಗದ್ದನ್ನು ಪ್ರತಿಧ್ವನಿಸಬೇಕು..!:

ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಜಾರಿಯಾಗದಿದ್ದರೆ ಅವುಗಳನ್ನು ನಿರಂತರವಾಗಿ ಪ್ರತಿಧ್ವನಿಸುವಂತೆ ಮಾಡುವುದು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಹಾಗೂ ಸಾಹಿತ್ಯ ಪರಿಷತ್ ಅಧ್ಯಕ್ಷರ ಕರ್ತವ್ಯ ಎಂದು ಪ್ರೊ.ಕೃಷ್ಣೇಗೌಡರು ತಿಳಿಸಿದರು.

ಸಮ್ಮೇಳನಾಧ್ಯಕ್ಷರು ಒಂದು ವರ್ಷದವರೆಗೆ ಅಧ್ಯಕ್ಷಗಿರಿಯಲ್ಲಿರುತ್ತಾರೆ, ಸಾಹಿತ್ಯ ಪರಿಷತ್ ಅಧ್ಯಕ್ಷರೂ ಸಚಿವ ಸಂಪುಟ ದರ್ಜೆಯ ಸ್ಥಾನದಲ್ಲಿರುತ್ತಾರೆ. ನಿರ್ಣಯಗಳನ್ನು ಜಾರಿ ಮಾಡದಿರುವ ಬಗ್ಗೆ ತಾತ್ಸಾರ, ನಿರ್ಲಕ್ಷ್ಯ ತೋರುವ ಸರ್ಕಾರಗಳ ನಡವಳಿಕೆಯನ್ನು ಆಗಾಗ ಮಾಧ್ಯಮಗಳ ಮೂಲಕ ಖಂಡಿಸುತ್ತಿರಬೇಕು. ಆಗ ಸರ್ಕಾರಗಳು ಎಚ್ಚರಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ನಿರ್ಣಯಗಳು ಜಾರಿಯಾಗಲಿಲ್ಲವೆಂದಾಕ್ಷಣ ಸಮ್ಮೇಳನದ ಸಾರ್ಥಕತೆ ಇರುವುದಿಲ್ಲವೆಂದರ್ಥವಲ್ಲ. ಪ್ರತ್ಯಕ್ಷವಾಗಿ ಸಾರ್ಥಕತೆ ಇರದಿದ್ದರೂ ಪರೋಕ್ಷವಾಗಿ ಸಾರ್ಥಕತೆ ಇರುತ್ತದೆ. ಕನ್ನಡದ ಮನಸ್ಸುಗಳನ್ನು ಕಟ್ಟುವುದಕ್ಕೆ, ಜಾಗೃತಾವಸ್ಥೆಯಲ್ಲಿಡುವುದಕ್ಕೆ ಸಮ್ಮೇಳನಗಳ ಅಗತ್ಯವಿದೆ ಎಂದು ಹೇಳಿದರು.

ಪ್ರಬುದ್ಧತೆಯನ್ನು ವ್ಯಕ್ತಪಡಿಸಲಿ..!:

ಸಮಾಜದಲ್ಲಿ ನಡೆಯುವ ಬೆಳವಣಿಗೆಗಳು ಎಲ್ಲವೂ ನನ್ನಂತೆಯೇ ಇರಬೇಕು, ನನ್ನಿಷ್ಟದಂತೆಯೇ ನಡೆಯಬೇಕು ಎನ್ನಲಾಗುವುದಿಲ್ಲ. ಒಂದಲ್ಲಾ ಒಂದು ರೀತಿಯ ಅಸಮಾಧಾನಗಳು ವ್ಯಕ್ತವಾಗುತ್ತಿರುತ್ತವೆ. ಆ ಅಸಮಾಧಾನಗಳನ್ನು ಪ್ರಬುದ್ಧತೆಯಿಂದ ವ್ಯಕ್ತಪಡಿಸಬೇಕು ಎಂದು ಪ್ರೊ.ಕೃಷ್ಣೇಗೌಡರು ಹೇಳಿದರು.

ಮಂಡ್ಯ ಜಿಲ್ಲೆಯೊಳಗೆ ಸಾಹಿತ್ಯದ ವಾತಾವರಣ ಸೃಷ್ಟಿಯಾಗಿದೆ. ಚರ್ಚೆಗಳು ಗಾಂಭೀರ್ಯದ ಚೌಕಟ್ಟಿನೊಳಗೆ ನಡೆಯಬೇಕು. ಆರೋಗ್ಯಕರ ರೀತಿಯಲ್ಲಿ ನಡೆಯಬೇಕು. ಒಡಕು, ಮನಸ್ತಾಪಗಳು ಉಂಟಾಗಬಾರದು. ಯಾರು ಏನೇ ಮಾತನಾಡಿದರೂ ಸಾಹಿತಿಗಳನ್ನು ಬಿಟ್ಟು ಬೇರೆಯವರನ್ನು ಕರೆತರುವ ಪ್ರಯತ್ನ ನಡೆಯುವುದಿಲ್ಲ. ಮಂಡ್ಯ ಅದ್ಭುತವಾದ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆ. ಊರಿನ ಬಗ್ಗೆ ಗೌರವವನ್ನಿಟ್ಟುಕೊಂಡಿರುವ ಜಿಲ್ಲೆ. ಇಲ್ಲಿ ನಡೆಯುವ ಸಮ್ಮೇಳನ ಅರ್ಥಪೂರ್ಣವಾಗಿ, ಗೌರವಯುತವಾಗಿ ನಡೆದು ಕನ್ನಡದ ತೇರನ್ನು ಸಮರ್ಥವಾಗಿ ಮುನ್ನಡೆಸಲಿ ಎಂದು ಆಶಿಸಿದರು.